ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ, ವಿರೋಧ ಪಕ್ಷದಲ್ಲಿದ್ದಾಗ ಬೆಂಕಿ ಹಚ್ಚುವ ಕೆಲಸ: ನಳಿನ್ ಕುಮಾರ್

Update: 2020-09-29 11:45 GMT

ಬೆಳಗಾವಿ, ಸೆ.29: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವ್ಯಾಪಕ ಭ್ರಷ್ಟಾಚಾರ ಮಾಡುತ್ತದೆ. ವಿರೋಧ ಪಕ್ಷದಲ್ಲಿದ್ದಾಗ ಬೆಂಕಿ ಹಚ್ಚುವ ಕೆಲಸ ಮಾಡುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ಸಿದ್ದರಾಮಯ್ಯನವರು ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಅವರೊಬ್ಬ ಮಾಜಿ ಸಿಎಂ ಆಗಿ ಗೌರವದಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ರಾಜ್ಯದಲ್ಲಿ ಮೂರು ಸಾವಿರ ಜನ ರೈತರು ಆತ್ಮಹತ್ಯೆ ಮಾಡಿಕೊಂಡರು. ಅವರ ಯೋಗ್ಯತೆ ಏನಿದೆ ಎಂಬುವುದು ನಮಗೆ ಗೊತ್ತು. ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಹೋಗಲಿಲ್ಲ. ಕೇವಲ ಟಿಪ್ಪು ಜಯಂತಿ ಹೆಸರಲ್ಲಿ ಗಲಭೆ ಸೃಷ್ಟಿಸಿದ ಅವರು, ಲಿಂಗಾಯತ-ವೀರಶೈವ ಅಂತಾ ಸಮಾಜ ಒಡೆಯುವ ಯತ್ನಕ್ಕೆ ಮುಂದಾದರು. ಅಧಿಕಾರ ಉಳಿಸಿಕೊಳ್ಳಲು ಬ್ರಿಟೀಷರಂತೆ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.

ಇಂತಹ ಕೆಟ್ಟ ಸಿಎಂ ನಮಗೆ ಬೇಡ ಅಂತಲೇ ಮೈಸೂರಿನ ಜನ ಅವರನ್ನು ಮನೆಗೆ ಕಳಿಸಿದ್ದಾರೆ. ಅದಕ್ಕಾಗಿ ಅವರಿಗೆ ಎಲ್ಲೆಲ್ಲೋ ನಿಂತು ಗೆಲ್ಲಬೇಕಾದ ಪರಿಸ್ಥಿತಿ ಬಂತು. ಸಿದ್ದರಾಮಯ್ಯರಿಗೆ ನಿಜವಾಗಲೂ ಮಾನ ಮರ್ಯಾದೆ ಇದ್ದರೆ ಮನೆಯಲ್ಲಿ ಕುಳಿತುಕೊಳ್ಳಲಿ ಎಂದು ತಿಳಿಸಿದರು.

ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹೋರಾಟ ವಿಚಾರದಲ್ಲಿ ಕಾಂಗ್ರೆಸ್ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ. ರೈತರನ್ನ ಎತ್ತಿಕಟ್ಟಿ ರಾಷ್ಟ್ರದಲ್ಲಿ ಜನವಿರೋಧಿ ನೀತಿ ಅನುಸರಿಸುತ್ತಿದೆ. ರಾಜಕಾರಣಕ್ಕೋಸ್ಕರ ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಿದೆ. ಈ ಹಿಂದೆ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ಈ ಎಲ್ಲಾ ಕಾಯ್ದೆಗಳನ್ನ ಜಾರಿಗೆ ತರಬೇಕು ಎಂದು ಹೇಳಿತ್ತು ಎಂದು ನಳಿನ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News