ಉತ್ತರ ಪ್ರದೇಶ: ದಲಿತ ಯುವತಿ ಅತ್ಯಾಚಾರ, ಸಾವು ಪ್ರಕರಣ; ಆಸ್ಪತ್ರೆ ಎದುರು ಭೀಮ್ ಆರ್ಮಿ ಪ್ರತಿಭಟನೆ

Update: 2020-09-29 13:07 GMT
ಚಿತ್ರ ಕೃಪೆ: ndtv

ಹೊಸದಿಲ್ಲಿ: ಉತ್ತರ ಪ್ರದೇಶದ 20 ವರ್ಷದ ದಲಿತ ಯುವತಿಯ ಮೇಲೆ ನಡೆದ ಪೈಶಾಚಿಕ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಚಂದ್ರಶೇಖರ್ ಆಝಾದ್ ನೇತೃತ್ವದ ಭೀಮ್ ಆರ್ಮಿ ಸಂತ್ರಸ್ತೆ ಇಂದು ಮೃತಪಟ್ಟ ರಾಜಧಾನಿಯ ಸಫ್ದರ್‍ಜಂಗ್ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದೆ.

ಆಸ್ಪತ್ರೆಯ  ರಸ್ತೆಯ ಎದುರಿನ ರಸ್ತೆ ಪ್ರತಿಭಟನಾಕಾರರಿಂದ ತುಂಬಿದ್ದು ಕಟುಕರನ್ನು ಗಲ್ಲಿಗೇರಿಸಿ ಎಂಬ ಘೋಷಣೆಗಳನ್ನು ಮೊಳಗಿಸಲಾಗುತ್ತಿದೆ. ಸಂತ್ರಸ್ತೆಗೆ ಸೂಕ್ತ  ಚಿಕಿತ್ಸೆ ನೀಡುವಲ್ಲಿ ಆದ ವಿಳಂಬ ಹಾಗೂ ಆರೋಪಿಗಳನ್ನು ವಿಳಂಬವಾಗಿ ಬಂಧಿಸಿರುವ ವಿರುದ್ಧ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲಾ ತಪ್ಪಿತಸ್ಥರಿಗೂ ಗಲ್ಲು ಶಿಕ್ಷೆಯಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

“ದಲಿತ ಸಮುದಾಯದ ಎಲ್ಲಾ ಸದಸ್ಯರೂ ಬೀದಿಗಿಳಿದು ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಬೇಕು. ಸರಕಾರ ನಮ್ಮ ತಾಳ್ಮೆ ಪರೀಕ್ಷಿಸಕೂಡದು, ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯಾಗುವ ತನಕ ನಾವು ವಿರಮಿಸುವುದಿಲ್ಲ,'' ಎಂದು ಆಝಾದ್ ಹೇಳಿದರು.

ಸಂತ್ರಸ್ತೆಯನ್ನು ಏಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಬೇಕು  ಎಂದು ಈ ಹಿಂದೆ ಆಗ್ರಹಿಸಿದ್ದ ಆಝಾದ್ ``ನಮ್ಮ ಸೋದರಿಯ ಸಾವಿಗೆ ಉತ್ತರ ಪ್ರದೇಶ ಸರಕಾರವೂ ಸಮಾನವಾಗಿ ಜವಾಬ್ದಾರಿಯಾಗಿದೆ,'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News