`ಕಾಡುಗೊಲ್ಲ ಅಭಿವೃದ್ಧಿ ನಿಗಮ' ಸ್ಥಾಪಿಸಿ ರಾಜ್ಯ ಸರಕಾರ ಆದೇಶ

Update: 2020-09-29 12:40 GMT

ಬೆಂಗಳೂರು, ಸೆ. 29: ರಾಜ್ಯದಲ್ಲಿರುವ ಕಾಡುಗೊಲ್ಲ ಸಮುದಾಯದ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಯ ಹಿತದೃಷ್ಟಿಯಿಂದ ಪ್ರತ್ಯೇಕ ನಿಗಮ ಸ್ಥಾಪಿಸುವ ಅಗತ್ಯತೆ ಇರುವ ಹಿನ್ನೆಲೆಯಲ್ಲಿ ಹೊಸದಾಗಿ `ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ'ವನ್ನು ಸ್ಥಾಪಿಸಿ ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ.

ಪ್ರವೇಶ ಮತ್ತು ನೇಮಕಾತಿಗಳಲ್ಲಿ ಮೀಸಲಾತಿಯನ್ನು ಕಲ್ಪಿಸಲು ಹಿಂದುಳಿದ ವರ್ಗಗಳ ಜಾತಿ ಪಟ್ಟಿಯನ್ನು ಹೊರಡಿಸಲಾಗಿರುತ್ತದೆ. ಪ್ರವರ್ಗ-1ರಲ್ಲಿ `ಕಾಡುಗೊಲ್ಲ' ಪದವನ್ನು ಸೇರ್ಪಡೆ ಮಾಡಿ ಆದೇಶಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ವಿ.ಕೆ.ಶ್ರೀಪತಿ ಅವರು ಈ ಸಂಬಂಧ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.

ನಿನ್ನೆಯಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ `ಗೊಲ್ಲ ಅಭಿವೃದ್ಧಿ ನಿಗಮ' ಸ್ಥಾಪಿಸಿ ಆದೇಶ ಹೊರಡಿಸಲು ಸೂಚನೆ ನೀಡಿದ್ದರು. ಇದಕ್ಕೆ ಕಾಡುಗೊಲ್ಲ ಸಮುದಾಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಡ ಹೇರಿದ್ದವು. ಆ ಹಿನ್ನಲೆಯಲ್ಲಿ ಗೊಲ್ಲ ಅಭಿವೃದ್ಧಿ ನಿಗಮದ ಬದಲಿಗೆ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಆದೇಶ ಹೊರಡಿಸಲಾಗಿದೆ. ಇದಕ್ಕೆ ಕಾಡುಗೊಲ್ಲ ಸಂಘಟನೆಗಳ ಒಕ್ಕೂಟದ ಮುಖಂಡರು ಸ್ವಾಗತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News