'ಪವರ್ ಟಿವಿ' ಪ್ರಸಾರ ಸ್ಥಗಿತ: ಕಾಂಗ್ರೆಸ್, ಜೆಡಿಎಸ್, ವಿವಿಧ ಸಂಘ- ಸಂಸ್ಥೆಗಳಿಂದ ಖಂಡನೆ

Update: 2020-09-29 14:15 GMT

ಬೆಂಗಳೂರು, ಸೆ.29: ದಾಳಿ ನೆಪದಲ್ಲಿ ಪವರ್ ಸುದ್ದಿ ವಾಹಿನಿಯ ಪ್ರಸಾರ ಸ್ಥಗಿತಗೊಳಿಸಿರುವ ಸಿಸಿಬಿ ಹಾಗೂ ರಾಜ್ಯ ಸರಕಾರದ ಕ್ರಮವನ್ನು ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳು ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಂಚಿಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ‘ಪವರ್ ಟಿವಿ’ ಸುದ್ದಿ ವಾಹಿನಿ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ರಾಕೇಶ್ ಶೆಟ್ಟಿ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ಸೋಮವಾರ ದಾಳಿ ನಡೆಸಿದ್ದರು. ಇದಾದ ಬಳಿಕ ತಡರಾತ್ರಿ ಸುದ್ದಿ ವಾಹಿನಿಯ ಕಚೇರಿಗೆ ತೆರಳಿ ತನಿಖಾಧಿಕಾರಿಗಳು ಪ್ರಸಾರ ಸ್ಥಗಿತಗೊಳಿಸಿದ್ದಾರೆ. ಅಧಿಕಾರಿಗಳ ಈ ನಡೆಯನ್ನು ಖಂಡಿಸಿರುವ ಹಲವು ಚಿಂತಕರು, ಪತ್ರಕರ್ತರ ಸಂಘ-ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷದ ನಾಯಕರು, ಮಾಧ್ಯಮಗಳ ಮೇಲಿನ ಸರ್ವಾಧಿಕಾರದ ಧೋರಣೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಕೇಶ್ ಶೆಟ್ಟಿ ಅವರು ತಪ್ಪಿತಸ್ಥರಾಗಿದ್ದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಿ. ಆದರೆ, ನೂರಾರು ಪತ್ರಕರ್ತರು ದುಡಿಯುವಂತಹ ಕಚೇರಿಗೆ ನುಗ್ಗಿ ಪ್ರಸಾರವೇ ನಿಲ್ಲಿಸಿರುವುದು ಸರಿಯಾದ ಕ್ರಮವಲ್ಲ ಎಂದು ಹಲವಾರು ಮಂದಿ ತಿಳಿಸಿದ್ದಾರೆ.

ಈ ಬಗ್ಗೆ ಟ್ವಿಟ್ ಮೂಲಕ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ತನ್ನ ಪುತ್ರನ ಭ್ರಷ್ಟಾಚಾರದ ವರದಿ ಮಾಡಿದ ಕಾರಣಕ್ಕೆ ಮುಖ್ಯಮಂತ್ರಿ ಅವರು ಅಧಿಕಾರ ದುರುಪಯೋಗದ ಮೂಲಕ ಪವರ್ ಟಿವಿ ಸುದ್ದಿ ವಾಹಿನಿಯನ್ನೇ ಬಂದ್ ಮಾಡಲು ಹೊರಟಿರುವುದು ಖಂಡನೀಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ಥಗಿತ ತೆರವುಗೊಳಿಸಿ: ಒಂದು ಸುದ್ದಿ ವಾಹಿನಿಯ ನೇರ ಪ್ರಸಾರವೇ ಸ್ಥಗಿತಗೊಳಿಸುವುದರಿಂದ ಅದನ್ನು ಅವಲಂಬಿಸಿ ವೃತ್ತಿ ಮಾಡುತ್ತಿರುವ ನೂರಾರು ಪತ್ರಕರ್ತರ ಕುಟುಂಬಗಳು ಬೀದಿಗೆ ಬರುತ್ತವೆ. ಆದ್ದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಕೂಡಲೇ ಗೃಹ ಸಚಿವರಿಗೆ ನಿರ್ದೇಶನ ನೀಡಿ, ಪವರ್ ಟಿವಿ ವಾಹಿನಿಯ ಪ್ರಸಾರದ ಸ್ಥಗಿತವನ್ನು ತೆರವುಗೊಳಿಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಒತ್ತಾಯಿಸಿದ್ದಾರೆ.

ಅದೇ ರೀತಿ, ಭಾರತ ಕಮ್ಯುನಿಸ್ಟ್ ಪಕ್ಷ ಸುದ್ದಿ ವಾಹಿನಿ ಪ್ರಸಾರ ತಡೆ ಕ್ರಮವನ್ನು ಖಂಡಿಸಿದ್ದು, ರಾಜಕೀಯ ಪ್ರೇರತ ದಾಳಿ ಇದಾಗಿದ್ದು, ಭ್ರಷ್ಟಾಚಾರ ಪ್ರಕರಣವನ್ನು ತನಿಖೆ ನಡೆಸಬೇಕು ಎಂದು ಬೆಂಗಳೂರು ಜಿಲ್ಲಾ ಮಂಡಳಿ ಕಾರ್ಯದರ್ಶಿ ಜಿ.ಬಾಬು ಆಗ್ರಹಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ: ಫೇಸ್‍ಬುಕ್, ಟ್ವಿಟ್ಟರ್ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲೂ ಹಲವು ಜನರು ಪ್ರಸಾರ ಸ್ಥಗಿತಗೊಳಿಸಿರುವುದನ್ನು ಖಂಡಿಸಿದ್ದು, ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಆಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News