ಬಲವಂತದ ಹಿಂದೆ ಹೇರಿಕೆ ಖಂಡನೀಯ: ಮುಖ್ಯಮಂತ್ರಿ ಚಂದ್ರು

Update: 2020-09-29 13:19 GMT

ಬೆಂಗಳೂರು, ಸೆ.29: ಭಾರತವು ಮೊದಲಿನಿಂದಲೂ 'ವೈವಿಧ್ಯತೆಯಲ್ಲಿ ಏಕತೆ' ತತ್ವವನ್ನು ಅನುಸರಿಸುತ್ತಿದೆ. ಅದರಂತೆ, ಕೇಂದ್ರ ಸರಕಾರವು ಭಾರತದ ಎಲ್ಲ ರಾಜ್ಯಗಳ, ಎಲ್ಲ ಜನರ ಭಾಷೆಗಳನ್ನೂ ಗೌರವಿಸಬೇಕು. ಕೇಂದ್ರ ಸರಕಾರದ ವಿವಿಧ ಇಲಾಖೆಗಳು ಮತ್ತು ಸಿಬ್ಬಂದಿ ವರ್ಗದವರು ಹಿಂದಿಯೇತರ ಜನರ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರುತ್ತಿದ್ದಾರೆ ಎಂದು ಕನ್ನಡ ನುಡಿ-ಗಡಿ ಜಾಗೃತಿ ಸಮಿತಿಯ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲ ಸಾರ್ವಜನಿಕ ವಲಯದ ಕೈಗಾರಿಕೆಗಳಲ್ಲಿಯೂ ಕೇಂದ್ರ ಸರಕಾರವು ಒತ್ತಾಯದಿಂದ ನಡೆಸುತ್ತಿರುವ ಹಿಂದಿ ಸಪ್ತಾಹದ ಆಚರಣೆಯೆ ಇದಕ್ಕೆ ಸಾಕ್ಷಿ. ಸಾರ್ವಜನಿಕ ವಲಯದ ಉದ್ದಿಮೆಗಳ ಬಹತೇಕ ಅಧಿಕಾರಿಗಳು ಅಭಿಪ್ರಾಯಪಡುವಂತೆ, ಆಡಳಿತದಲ್ಲಿ ಹಿಂದಿ ಬಳಕೆಯು ಸಾಧ್ಯವಾಗದಿದ್ದರೂ, ಕೇಂದ್ರ ಸರಕಾರವು ಹಿಂದಿ ಬಳಕೆಯನ್ನು ಬಲವಂತವಾಗಿ ಹೇರುತ್ತಿದೆ. ಇದರಿಂದಾಗಿ ಹಣ ಮತ್ತು ಮಾನವಶಕ್ತಿಯು ಸಂಪೂರ್ಣ ವ್ಯರ್ಥವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದು ಭಾಷಾ ಸಾಮ್ರಾಜ್ಯಶಾಹಿತನವಲ್ಲದೆ ಮತ್ತೇನೂ ಅಲ್ಲ. ಹಿಂದಿ ಮಾತನಾಡುವ ಜನರ ಸಾಮ್ರಾಜ್ಯಶಾಹಿ ಧೋರಣೆಯು ನಮ್ಮ ರಾಷ್ಟ್ರೀಯ ಏಕತೆಗೆ ಅತ್ಯಂತ ಅಪಾಯಕಾರಿಯಾದದ್ದು. ಇದು ಭಾರತ ದೇಶವನ್ನು ಒಡೆಯಲು ಕಾರಣವಾಗುತ್ತದಲ್ಲದೆ, ಆ ಮೂಲಕ 'ತುಕ್ಡೆ ಗ್ಯಾಂಗ್'ನ ಉದ್ದೇಶಗಳನ್ನು ಈಡೇರಿಸುತ್ತದೆ. ಕೇಂದ್ರ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ, ಹಿಂದಿಯೇತರ ಜನರ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರುವ ದೌರ್ಜನ್ಯವನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇತ್ತೀಚೆಗೆ, ಆಯುಷ್ ಇಲಾಖೆಯ ಸಭೆಯ ಅಧಿಕೃತ ಕಾರ್ಯದರ್ಶಿಯೊಬ್ಬರು 'ಹಿಂದಿ ಅರ್ಥವಾಗದ ಜನರು ಈ ಸಭೆಯಿಂದ ಹೊರಹೋಗಬಹುದು' ಎಂದು ಆದೇಶಿಸಿದರು. ಇದು ಸಂಪೂರ್ಣ ಪಾಳೆಗಾರಿಕೆಯ ವರ್ತನೆ. ಹಿಂದಿಯೇತರ ರಾಜ್ಯಗಳಿಗೆ ಭಾರತದಲ್ಲಿನ ಭಾಷಾ ಸ್ವಾತಂತ್ರ್ಯವನ್ನು ಕಾಪಾಡುವ ಸಂದೇಶವನ್ನು ತಲುಪಿಸಲು ಆ ಕಾರ್ಯದರ್ಶಿಯನ್ನು ತಕ್ಷಣದಿಂದ ಅಮಾನತುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಂವಿಧಾನವು ಭಾಷಾ ಸ್ವಾತಂತ್ರ್ಯದ ಭರವಸೆಯನ್ನು ನೀಡಿದ್ದರೂ, ಕೇಂದ್ರ ಸರಕಾರದ ಅಧಿಕಾರಿಗಳ ನಡೆಯು, ಈ ಭಾಷಾ ವೈವಿಧ್ಯತೆಯ ಸಹಬಾಳ್ವೆಯ ಸಾಂವಿಧಾನಿಕ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದಿಯೇತರ ಜನರ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರುವುದನ್ನು ನಿಲ್ಲಿಸಲು ಮತ್ತು ದೇಶಾದ್ಯಂತ ವೈವಿಧ್ಯತೆಯಲ್ಲಿ ಏಕತೆ ತತ್ವವನ್ನು ಸಮಾನವಾಗಿ ಅನುಷ್ಠಾನಗೊಳಿಸಲು, ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಎಲ್ಲ ಕನ್ನಡಿಗರೂ ಕರ್ನಾಟಕ ಸರಕಾರಕ್ಕೆ ಪತ್ರ ಬರೆದು, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಬೇಕು ಎಂದು ಮುಖ್ಯಮಂತ್ರಿ ಚಂದ್ರು ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News