ರೋಹಿಣಿ ಸಿಂಧೂರಿ ನೇಮಕದ ಹಿಂದೆ ಆಂಧ್ರ ಸಿಎಂ ಕೈವಾಡ: ಶಾಸಕ ಸಾ.ರಾ.ಮಹೇಶ್ ಆರೋಪ

Update: 2020-09-29 14:35 GMT
ರೋಹಿಣಿ ಸಿಂಧೂರಿ- ಸಾ.ರಾ.ಮಹೇಶ್

ಮೈಸೂರು,ಸೆ.29: ನೂತನ ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕದ ಹಿಂದೆ ಆಂಧ್ರ ಮುಖ್ಯಮಂತ್ರಿ ಕೈವಾಡ ಇದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಸಾ.ರಾ.ಮಹೇಶ್ ಗಂಭೀರ ಆರೋಪ ಮಾಡಿದರು.

ನಗರದ ಅವರ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ರೋಹಿಣಿ ಸಿಂಧೂರಿ ವಾರ್ಗವಣೆ ಹಿಂದೆ ಆಂದ್ರ ಮುಖ್ಯಮಂತ್ರಿ ಕೈವಾಡ ಇದೆ ಎಂಬ ಅನುಮಾನ ಮೂಡುತ್ತಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯೋ ಅಥವಾ ಪಕ್ಕದ ರಾಜ್ಯದವರು ಮುಖ್ಯಮಂತ್ರಿಯೋ ಗೊತ್ತಾಗುತ್ತಿಲ್ಲ ಎಂದು ಹೇಳಿದರು.

ಕನ್ನಡದ ಮತ್ತು ದಲಿತ ಹುಡುಗ ಶರತ್ ಬಿ. ಅವರು ಮೈಸೂರಿಗೆ ಬಂದು ಕೇವಲ 29 ದಿನಗಳಾಗಿತ್ತು. ಅವರನ್ನು ದಸರಾ ಸಂದರ್ಭದಲ್ಲಿ ಏಕಾಏಕಿ ವರ್ಗಾವಣೆ ಮಾಡಿರುವುದರ ಉದ್ದೇಶ ಬಹಿರಂಗ ಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಬಿಜೆಪಿ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂದು ಈ ಹಿಂದೆಯೇ ನಾನು ಆರೋಪ ಮಾಡಿದ್ದೆ. ಅದು ರೋಹಿಣಿ ಸಿಂಧೂರಿ ವರ್ಗಾವಣೆಯಿಂದ ಸಾಬೀತಾಗಿದೆ. ಕೊರೋನದಿಂದ ಜನ ಸಾಯುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ , ವೆಂಟಿಲೇಟರ್ ಗಳಿಲ್ಲದೆ ಜನ ಪರದಾಡುತ್ತಿದ್ದಾರೆ. ಅದರ ಬಗ್ಗೆ ಗಮನಹರಿಸದೆ ರಾಜ್ಯ ಸರ್ಕಾರ ವರ್ಗಾವಣೆ ದಂಧೆಗೆ ಇಳಿದಿದೆ. ಜನರ ಬಗ್ಗೆ ನಿಜವಾದ ಕಾಳಜಿ ಈ ಸರ್ಕಾರಕ್ಕೆ ಇಲ್ಲ ಎಂದು ಲೇವಡಿ ಮಾಡಿದರು.

ರಾಜ್ಯದ ಆಡಳಿತವನ್ನು ಯಡಿಯೂರಪ್ಪ ನಡೆಸುತ್ತಿದ್ದಾರೊ ಅಥವಾ ಇನ್ಯಾರು ನಡೆಸುತ್ತಿದ್ದಾರೊ ಗೊತ್ತಿಲ್ಲ. ರೋಹಿಣಿ ಸಿಂಧೂರಿ ಈ ಹಿಂದೆ ಕೆಲಸ ಮಾಡಿದ ಕಡೆಗಳಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಆರೋಪ ಇದೆ. ಹಾಸನ ಜಿಲ್ಲಾಧಿಕಾರಿಯಾಗಿದ್ದ ವೇಳೆ ಸರ್ಕಾರದ ವಿರುದ್ಧ ಮೂರು ಬಾರಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ಗೋಮಟೇಶ್ವರ ಮಹಾಮಸ್ತಕಾಭಿಷೇಕದಲ್ಲಿ 175 ಕೋಟಿ ರೂ. ಗಳ ವ್ಯವಹಾರದ ಬಗ್ಗೆ ತನಿಖೆ ನಡೆದರೆ ಇವರ ಬಣ್ಣ ಬಯಲಾಗಲಿದೆ ಎಂದು ಹೇಳಿದರು.

ಇವರು ಆಡಳಿತ ನಡೆಸಿದ ಎಲ್ಲಾ ಕಡೆಗಳಲ್ಲೂ ಇವರ ಮೇಲೆ ಗುರುತರ ಆರೋಪಗಳು ಕೇಳಿಬಂದಿದೆ. ಇಂತಹ ಅಧಿಕಾರಿಯಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಓರ್ವ ದಲಿತ ಮತ್ತು ಕನ್ನಡದ ಹುಡುಗನಿಗೆ ಯಾವ ಸ್ಥಳವನ್ನೂ ತೋರಿಸದೆ ವರ್ಗಾವಣೆ ಮಾಡಿರುವುದು ಇಡೀ ಕನ್ನಡ ನಾಡಿನ ಐಎಎಸ್ ಅಧಿಕಾರಿಗಳಿಗೆ ಮಾಡಿದ ಅವಮಾನ ಎಂದರು.

ಒಬ್ಬ ಆಂಧ್ರದ ಹೆಣ್ಣು ಮಗಳಿಗೋಸ್ಕರ ಕನ್ನಡದ ದಲಿತ ಹುಡುಗನನ್ನು ಎತ್ತಂಗಡಿ ಮಾಡಲಾಗಿದೆ. ಇದು ಬಿಜೆಪಿ ಸರ್ಕಾರದ ಸಾಧನೆಯನ್ನು ತೋರಿಸುತ್ತದೆ ಎಂದು ಅವರು ಕಿಡಿಕಾರಿದರು.

ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನು ಏಕಾಏಕಿ ವರ್ಗಾವಣೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಎಲ್ಲಾ ಸರ್ಕಾರಗಳು ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆ ಮಾಡುವುದು ಸಹಜ. ಆದರೆ ಶರತ್ ಅವರ ವರ್ಗಾವಣೆ ಈ ಸಂದರ್ಭದಲ್ಲಿ ಸರಿಯಲ್ಲ. ಒಂದು ಕಡೆ ಕೊರೋನ, ಮತ್ತೊಂದು ಕಡೆ ದಸರಾ ಸಮೀಪಿಸುತ್ತಿದೆ. ಹೈಪವರ್ ಕಮಿಟಿ ಸಭೆಯ ನಂತರ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿರುವುದು ನನ್ನ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲು ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಆರ್.ಲಿಂಗಪ್ಪ, ನಗರ ಜೆಡಿಎಸ್ ಅಧ್ಯಕ್ಷ ಕೆ.ಟಿ.ಚಲುವೇಗೌಡ, ನಗರ ಪಾಲಿಕೆ ಸದಸ್ಯ ಪ್ರೇಮಾ ಶಂಕರೇಗೌಡ, ಜೆಡಿಎಸ್ ಮುಖಂಡ ರವಿಚಂದ್ರೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News