ರಾಜೀನಾಮೆ ಪತ್ರ ಟೈಪ್‍ ಮಾಡಿ ಇಟ್ಟುಕೊಂಡಿದ್ದೇನೆ: ಸಚಿವ ಸಿ.ಟಿ.ರವಿ

Update: 2020-09-29 14:36 GMT

ಚಿಕ್ಕಮಗಳೂರು, ಸೆ.29: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ದೆಯಾಗಿರುವ ಸಚಿವ ಸಿ.ಟಿ.ರವಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಸಂಬಂಧ ಮತ್ತೆ ತಮ್ಮ ರಾಜೀನಾಮೆ ವಿಚಾರವನ್ನು ಪ್ರಸ್ತಾಪಿಸಿರುವ ಸಿ.ಟಿ.ರವಿ, ರಾಜೀನಾಮೆ ನೀಡುವ ವಿಚಾರದಲ್ಲಿ ತನ್ನಲ್ಲಿ ಯಾವುದೇ ಗೊಂದಲವಿಲ್ಲ, ಈಗಾಗಲೇ ರಾಜೀನಾಮೆ ಪತ್ರವನ್ನು ಟೈಪ್‍ ಮಾಡಿ ಇಟ್ಟುಕೊಂಡಿದ್ದೇನೆ. ಅ.2ರ ನಂತರ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಈ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆಂದು ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ವಿಚಾರದಲ್ಲಿ ಚರ್ಚೆಯ ಆವಶ್ಯಕತೆಯೇ ಇಲ್ಲ. ಇದೊಂದು ಸ್ವಾಭಾವಿಕ ಪ್ರಕ್ರಿಯೆಯಾಗಿದೆ. ಸಂಘಟನೆ ಮತ್ತು ಸರಕಾರ ಎಂಬ ವಿಚಾರ ನನ್ನ ಮುಂದೆ ಬಂದಲ್ಲಿ ನನ್ನ ಆದ್ಯತೆ ಸಂಘಟನೆಯಾಗಿರಲಿದೆ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ರಾಜೀನಾಮೆ ವಿಚಾರ ತೀರ್ಮಾನ ಮಾಡಬೇಕಿರುವುದು ಪಕ್ಷದ ವರಿಷ್ಠರು. ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬಂದಿರುವುದರಿಂದ ರಾಜೀನಾಮೆ ವಿಚಾರದಲ್ಲಿ ನನ್ನಲ್ಲಿ ಯಾವುದೇ ಗೊಂದಲಗಳಿಲ್ಲ, ಅಧಿಕಾರ ಎನ್ನುವುದೊಂದು ಸಾಧನವಾಗಿದೆಯೇ ಹೊರತು ಅಧಿಕಾರವೇ ಜೀವನದ ಅಂತಿಮ ಗುರಿಯಲ್ಲ ಎಂದು ತಿಳಿಸಿದರು.

ನನಗೆ ಪಕ್ಷವೇ ಮುಖ್ಯ, ರಾಜಕೀಯದಲ್ಲಿ ಅಧಿಕಾರ ಸಾಮಾನ್ಯ. ಹಾಗಂತ ನಾನು ಸನ್ಯಾಸಿಯಲ್ಲ, ಅಧಿಕಾರವೇ ಜೀವನದ ಗುರಿ ಎಂದು ಭಾವಿಸಿದವನೂ ಅಲ್ಲ. 1 ವರ್ಷ ಮಂತ್ರಿಯಾಗಿ ನನ್ನ ಯೋಜನೆ ಪ್ರಕಾರ ಕೆಲವು ಕೆಲಸಗಳನ್ನು ಅನುಷ್ಠಾನಗೊಳಿಸಿದ್ದೇನೆ, ಕೆಲವು ಕೆಲಸಗಳನ್ನು ಅನುಷ್ಠಾನದ ಹಂತಕ್ಕೆ ತಂದಿದ್ದೇನೆ. ಸರಕಾರ ಚೆನ್ನಾಗಿ ನಡೆದುಕೊಂಡು ಹೋಗಲು ಕಾಲ ಕಾಲಕ್ಕೆ ನನ್ನ ಸಹಕಾರ ಏನುಬೇಕೋ ಅದನ್ನು ಸದಾಕಾಲ ನೀಡುತ್ತೇನೆ. ಅ.1ರಂದು ಕ್ಯಾಬಿನೆಟ್ ಸಭೆ ಇದೆ. ಅ.2ರಂದು ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಿಲ್ಲೆಯ ವಾರ್ಷಿಕ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿ ನಂತರ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ರಾಜೀನಾಮೆ ವಿಚಾರದಲ್ಲಿ ಅಂತಿಮ ನಿರ್ಧಾರ ತಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ಸಂಪುಟ ವಿಸ್ತರಣೆ ವೇಳೆ ಇಂತವರಿಗೇ ಮಂತ್ರಿಗಿರಿ ನೀಡಿ ಎಂದು ನಾನು ಅಧಿಕ ಪ್ರಸಂಗತನ ಮಾಡುವುದಿಲ್ಲ, ಅದು ಮುಖ್ಯಮಂತ್ರಿಯ ಜವಬ್ದಾರಿ. ಮುಖ್ಯಮಂತ್ರಿ ಯಡಿಯೂರಪ್ಪ ಅನುಭವಿಗಳು, ನಾವು ರಾಜಕೀಯಕ್ಕೆ ಬರುವ 20 ವರ್ಷ ಮುಂಚೇ ಅವರು ರಾಜಕೀಯದಲ್ಲಿದ್ದವರು. ಅವರು ಸಮರ್ಥರನ್ನೇ ಮಂತ್ರಿಯಾಗಿ ಮಾಡುತ್ತಾರೆ. ಯಾರಿಗೆ ಯೋಗ ಇದೆಯೋ ಅವರಿಗೆ ಮಂತ್ರಿಗಿರಿ ಸಿಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News