ಸುರೇಶ್ ಕುಮಾರ್ ಅವರೇ, ಮಕ್ಕಳ ಜೀವನದ ಜೊತೆ ಚೆಲ್ಲಾಟ ಆಡಬೇಡಿ: ಎಚ್.ವಿಶ್ವನಾಥ್

Update: 2020-09-29 14:45 GMT

ಮೈಸೂರು,ಸೆ.29: ಶಾಲೆ ಪ್ರಾರಂಭಕ್ಕೆ ಮುಂದಾಗಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ, ಮಕ್ಕಳ ಜೀವನದ ಜೊತೆ ಮತ್ತು ಪೋಷಕರ ಭಾವನೆಗಳ ಜೊತೆ ಚೆಲ್ಲಾಟ ಆಡಬೇಡಿ. ಇದು ನಿಮಗೆ ಶೋಭಾಯಮಾನವಲ್ಲ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಲೆ ಪ್ರಾರಂಭ ಮಾಡುವ ಬಗ್ಗೆ ಶಾಸಕರ ಅಭಿಪ್ರಾಯ ಕೇಳಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮೊದಲು ನಿಮ್ಮ ನಿಲುವೇನು ಎಂದು ಸ್ಪಷ್ಟಪಡಿಸಿರಿ. ಶಾಲೆ ಪ್ರಾರಂಭಕ್ಕೆ ನೀವು ಯಾವ ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ತಿಳಿಸಿ ಎಂದು ಹೇಳಿದರು. 

ಶಾಲೆ ಪ್ರಾರಂಭ ಆಗಬೇಕೋ ಬೇಡವೋ ಎಂಬುದು ಜನ ಪ್ರತಿನಿಧಿಗಳ ತೀರ್ಮಾನ ಆಗಬಾರದು. ಯಾವ ಜನಪ್ರತಿನಿಧಿಯೂ ಚುನಾವಣೆ ವೇಳೆ ಶಿಕ್ಷಣದ ಬಗ್ಗೆ ಚರ್ಚೆಯೇ ಮಾಡಿರುವುದಿಲ್ಲ. ಯಾವುದೇ ಜನಪ್ರತಿನಿಧಿಗಳಿಗೆ ಶಿಕ್ಷಣದ ಬಗ್ಗೆ ಮಾಹಿತಿ ಇರುವುದಿಲ್ಲ ಎಂದು ಹೇಳಿದರು. ನೀವು ಶಾಲೆ ಆರಂಭಕ್ಕೆ ಏನೇನು ಕ್ರಮ ಕೈಗೊಂಡಿದ್ದೀರ ಅನ್ನೋದನ್ನು ಮೊದಲು ಹೇಳಿ. ಎಲ್ಲವನ್ನು ಜನಪ್ರತಿನಿಧಿಗಳ ಮೇಲೆ ಹಾಕಬೇಡಿ ಎಂದು ಕಿಡಿಕಾರಿದರು.

ಶಿಕ್ಷಣ ಸಚಿವರಾಗಿ ಶಾಲೆ ಆರಂಭಕ್ಕೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಮೊದಲು ತಿಳಿಸಿ. ಸುಮ್ಮನೆ ಒಂದು ಕಾಗದ ಬರೆದು ಕುಳಿತುಕೊಂಡರೆ ಅದು ಸರಿಯಲ್ಲ. ಇದು ಶಿಕ್ಷಣ ಮಂತ್ರಿಯೊಬ್ಬ ಮಾಡುವ ಕೆಲಸವಲ್ಲ. ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುವುದು ಬೇಡ. ಪೋಷಕರ ಮನಸ್ಸಿನ ಮೇಲೆ ಚೆಲ್ಲಾಟ ಶೋಭಾಯಮಾನವಲ್ಲ ಎಂದು ವಿಶ್ವನಾಥ್ ಹೇಳಿದರು.  

ನೀವು ಪೋಷಕರನ್ನು, ಮಕ್ಕಳನ್ನು, ಶಿಕ್ಷಕರನ್ನು ಗೊಂದಲದಲ್ಲಿ ಇಡಬೇಡಿ. ಸುರೇಶ್ ಕುಮಾರ್ ಅವರೇ ನೀವು ಹೇಳಿಕೆ ಕೊಟ್ಟು ವಾಪಸ್ ಪಡೆದು ಗೊಂದಲ ಸೃಷ್ಟಿಸಬೇಡಿ. ಸರ್ಕಾರಿ ಶಾಲೆಗಳ ಜೊತೆಗೆ ಖಾಸಗಿ ಶಾಲೆಗಳ ಬಗ್ಗೆಯೂ ಯೋಚನೆ ಮಾಡಬೇಕು. ಎಲ್ಲವನ್ನು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News