ಉಪ ಚುನಾವಣೆ ಘೋಷಣೆ: ಸಚಿವ ಸಂಪುಟ ವಿಸ್ತರಣೆ ವಿಳಂಬ ಸಾಧ್ಯತೆ

Update: 2020-09-29 15:31 GMT

ಬೆಂಗಳೂರು, ಸೆ. 29: ರಾಜ್ಯದ ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ, ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುವ ಸಾಧ್ಯತೆಗಳಿವೆ.

ಉಪ ಚುನಾವಣೆ ಮತ್ತು ಮೇಲ್ಮನೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮತ್ತು ಗೆಲ್ಲುವ ಸವಾಲು ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಎದುರಾಗಿದೆ. ಈ ಮಧ್ಯೆ `ಒಂದೆರಡು ದಿನಗಳಲ್ಲಿ ಹೊಸದಿಲ್ಲಿಗೆ ತೆರಳಿ ವರಿಷ್ಟರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ಮಾಡುವೆ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ನಿನ್ನೆಯಷ್ಟೇ ಪ್ರಕಟಿಸಿದ್ದರು. ಆದರೆ, ಇದೀಗ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆಯತ್ತ ಅವರು ಗಮನಹರಿಸಬೇಕಿದೆ.

ಕೆಲವರು ಚುನಾವಣೆ ಟಿಕೆಟ್ ಗಿಟ್ಟಿಸಿ ಶಾಸಕರಾಗುವ ತವಕದಲ್ಲಿದ್ದರೆ, ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ಮುಂದಕ್ಕೆ ಹೋಗುವ ಸಾಧ್ಯತೆಗಳ ಹಿನ್ನಲೆಯಲ್ಲಿ ಸಚಿವ ಸ್ಥಾನಕಾಂಕ್ಷಿಗಳಲ್ಲಿ ಬೇಸರ ಮನೆ ಮಾಡಿದೆ. `ಸಂಪುಟ ಪುನಾರಚನೆ' ಮಾತುಗಳು ಕೇಳಿಬಂದಿದ್ದರಿಂದ ಕೆಲ ಸಚಿವರಲ್ಲಿ ತಳಮಳ ಆರಂಭವಾಗಿತ್ತು. ಆದರೆ, ಉಪ ಚುನಾವಣೆ ಹಿನ್ನೆಲೆಯಲ್ಲಿ ನವೆಂಬರ್ 15ರವರೆಗೆ ಸಂಪುಟ ವಿಸ್ತರಣೆ, ಪುನಾರಚನೆ ಪ್ರಕ್ರಿಯೆಗಳಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದರಿಂದ ಅವರೆಲ್ಲ ಕೊಂಚ ನಿರಾಳರಾಗಿದ್ದಾರೆ.

ಉಪ ಚುನಾವಣೆ ಘೋಷಣೆ ಬಳಿಕ ರಾಜ್ಯದಲ್ಲಿನ ರಾಜಕೀಯ ಚಿತ್ರಣ ಕೊಂಚ ಬದಲಾಗಿದ್ದು, ಉಪ ಚುನಾವಣೆ ಮತ್ತು ಮೇಲ್ಮನೆ ಚುನಾವಣಾ ಫಲಿತಾಂಶದ ಬಳಿಕ ಸಂಪುಟ ವಿಸ್ತರಣೆಯ ಲೆಕ್ಕಾಚಾರವು ಬದಲಾಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಉಪ ಚುನಾವಣೆಯಲ್ಲಿ ಆಯ್ಕೆಗೊಳ್ಳುವವರಿಗೂ ಸಂಪುಟದಲ್ಲಿ ಸ್ಥಾನ ನೀಡುವ ಅನಿವಾರ್ಯತೆ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಯನ್ನು ತಾತ್ಕಾಲಿಕವಾಗಿ ಮುಂದೂಡುವ ತೀರ್ಮಾನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಬಂದಿದ್ದಾರೆಂದು ಗೊತ್ತಾಗಿದೆ.

ಏನೇ ಆದರೂ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ವರಿಷ್ಟರು ಸಚಿವ ಸಂಪುಟ ವಿಸ್ತರಣೆ ಸಂಬಂಧ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾಡುನೋಡಬೇಕು. ಶಿರಾ ಮತ್ತು ರಾಜರಾಜೇಶ್ವರಿ ನಗರ(ಆರ್.ಆರ್.ನಗರ) ಕ್ಷೇತ್ರಗಳ ಉಪ ಚುನಾವಣೆ ನವೆಂಬರ್ 3ಕ್ಕೆ ಜರುಗಲಿದ್ದು, ನ.10ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅದೇ ದಿನ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದ್ದು, ಎಲ್ಲರ ಚಿತ್ತ ಉಪ ಚುನಾವಣೆಯತ್ತ ನೆಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News