ಕೊರೋನ: ಸರಕಾರದ ಸೂಚನೆ ನಿರ್ಲಕ್ಷಿಸಿದರೆ ಕಠಿಣ ಶಿಕ್ಷೆ, ದಂಡ ಅನಿವಾರ್ಯ; ಸಚಿವ ಸುಧಾಕರ್

Update: 2020-09-29 16:09 GMT

ಬೆಂಗಳೂರು, ಸೆ.29: ಕೊರೋನ ನಿಯಂತ್ರಣ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ತೀರ್ಮಾನಿಸಿದೆ. ಮಾಸ್ಕ್ ಧರಿಸದ, ಸುರಕ್ಷಿತ ಅಂತರ ಕಾಯ್ದುಕೊಳ್ಳದ, ಸಭೆ, ಸಮಾರಂಭ ನೆಪದಲ್ಲಿ ಜನದಟ್ಟಣೆಗೆ ಅವಕಾಶ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ತಜ್ಞರು ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಜತೆ ಚರ್ಚಿಸಿ ಒಂದೆರಡು ದಿನದಲ್ಲಿ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದರು.

ಲಾಕ್‍ಡೌನ್ ತೆರವು ಬಳಿಕ ಕಳೆದೆರಡು ತಿಂಗಳಿಂದ ರಾಜ್ಯದಲ್ಲಿ ಕೊರೋನ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಎಷ್ಟೇ ಜಾಗೃತಿ ಮೂಡಿಸಿದರು ಸಾರ್ವಜನಿಕರು ಸರಕಾರದ ಸೂಚನೆಗಳನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈಗಿರುವ ಏಕೈಕ ಮಾರ್ಗವೆಂದರೆ ಕಠಿಣ ಕಾನೂನು ಜಾರಿಗೆ ತರುವುದು. ಸರಕಾರದ ಮಾರ್ಗಸೂಚಿ ಅನುಸರಿಸದವರ ವಿರುದ್ಧ ಕಠಿಣ ಶಿಕ್ಷೆ ಹಾಗೂ ದಂಡ ಪ್ರಯೋಗ ಅನಿವಾರ್ಯ ಎಂದು ಅವರು ಹೇಳಿದರು.

ಇತ್ತೀಚೆಗೆ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಸಭೆ ಸಮಾರಂಭಗಳು ಹೆಚ್ಚಾಗಿದ್ದು, ಜನರು ಗುಂಪುಗೂಡಿ ಭಾಗವಹಿಸುತ್ತಿದ್ದಾರೆ. ಇದರಿಂದ ಸೋಂಕು ವೇಗವಾಗಿ ಹರಡುತ್ತಿರುವುದು ಗಮನಕ್ಕೆ ಬಂದಿದೆ. ಇಂಥ ಸಮಾರಂಭಗಳಿಗೆ ಕಡಿವಾಣ ಹಾಕಲು ತೀರ್ಮಾನಿಸಲಾಗಿದೆ. ಸೋಂಕು ಹೆಚ್ಚಿರುವ ಜಿಲ್ಲಾಡಳಿತಗಳ ಜೊತೆ ಸಮಾಲೋಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಈಗಾಗಲೇ ತಜ್ಞರು ಮತ್ತು ಅಧಿಕಾರಿಗಳು ಕೆಲ ಸಲಹೆಗಳನ್ನು ನೀಡಿದ್ದಾರೆ ಎಂದು ಸುಧಾಕರ್ ವಿವರಿಸಿದರು.

ಕೊರೋನ ಜತೆಗಿನ ಯುದ್ಧ ಮುಗಿದಿಲ್ಲ. ಸರಕಾರದ ಜತೆ ಸಾರ್ವಜನಿಕರು ಕೈಜೋಡಿಸಿದರೆ ಮಾತ್ರ ಗೆಲುವು ಸಾಧ್ಯ. ಸಮಾಜದ ಎಲ್ಲಾ ಕ್ಷೇತ್ರದ ಗಣ್ಯರು, ವಿಶೇಷವಾಗಿ ಯುವಕರು, ಸಂಘ, ಸಂಸ್ಥೆಗಳು ಹೋರಾಟದಲ್ಲಿ ಕೈ ಜೋಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಸರಕಾರ ನೀಡುತ್ತಿರುವ ಉಚಿತ ಚಿಕಿತ್ಸೆ ಮತ್ತು ಕೈಗೊಂಡಿರುವ ಕ್ರಮಗಳ ಬಗ್ಗೆ ಗುಣಮುಖರಾದವರು ನೆರೆಹೊರೆಯವರ ಜತೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಆತಂಕ ನಿವಾರಿಸಬೇಕು. ಅಂತ್ಯಸಂಸ್ಕಾರದಲ್ಲಿ ಮೃತರ ಕುಟುಂಬದ ಸದಸ್ಯರು ಪಿಪಿಇ ಧರಿಸಿ ಪಾಲ್ಗೊಳ್ಳಲು ಅನುಮತಿ ನೀಡುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುಧಾಕರ್ ತಿಳಿಸಿದರು.

ಕೊರೋನ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಸರಕಾರದೊಂದಿಗೆ ಸಿನಿಮಾ ತಾರೆಯರು, ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು, ಕಲಾವಿದರು, ವಿಶೇಷ ವ್ಯಕ್ತಿಗಳ ಜೊತೆಗೂಡಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಿದ್ದೇವೆ. ಜೊತೆಗೆ ಜನರು ಸ್ವಯಂ ಪ್ರೇರಿತರಾಗಿ ಜಾಗೃತರಾಗಬೇಕು ಎಂದು ಅವರು ಕರೆ ನೀಡಿದರು.

ರಾಜ್ಯದ 11 ಜಿಲ್ಲೆಗಳ ಪೈಕಿ 7 ಜಿಲ್ಲೆಗಳಲ್ಲಿ ಶೇ.12 ರಷ್ಟು ಪಾಸಿಟಿವ್ ರೇಟ್ ದಾಖಲಾಗಿದೆ. ಆದರೆ ಸಾವಿನ ಪ್ರಮಾಣದಲ್ಲಿ ರಾಜ್ಯ ಶೇ.1.5 ರಷ್ಟಿದ್ದು ನಿಯಂತ್ರಣದಲ್ಲಿದ್ದೇವೆ. ಈ ಪ್ರಮಾಣವನ್ನು ಶೇ.1ಕ್ಕಿಂತ ಕೆಳಗಿಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಸುಧಾಕರ್ ಮಾಹಿತಿ ನೀಡಿದರು.

ಮಾಧ್ಯಮಗಳಿಗೆ ಕಾರ್ಯಾಗಾರ: ಕೊರೋನ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಾಧ್ಯಮದ ಪಾತ್ರ ದೊಡ್ಡದು. ಹೀಗಾಗಿ ಮಾಧ್ಯಮದವರಿಗಾಗಿ ವಿಶೇಷ ಕಾರ್ಯಗಾರ ನಡೆಸುವ ಸಲಹೆ ಕೇಳಿ ಬಂದಿದ್ದು, ಈ ವಾರದೊಳಗೆ ಕಾರ್ಯಾಗಾರ ಆಯೋಜನೆ ಮಾಡಲಾಗುವುದು ಎಂದು ಸುಧಾಕರ್ ತಿಳಿಸಿದರು.

ಲಸಿಕೆಯೇ ಮಾಸ್ಕ್: ಕೊರೋನ ಸೋಂಕಿಗೆ ಮಾಸ್ಕ್ ಧರಿಸುವುದೇ ಲಸಿಕೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅದರಂತೆ ನಾವೆಲ್ಲರೂ ಮಾಸ್ಕ್ ಧರಿಸುವ ಮೂಲಕ ಕೊರೋನ ನಿಯಂತ್ರಿಸೋಣ. ನಾವಿನ್ನೂ ಕೊರೋನ ಯುದ್ಧದ ಮಧ್ಯ ಭಾಗದಲ್ಲಿದ್ದೇವೆ, ನಮ್ಮ ಬಳಿ ಇರುವ ಶಸ್ತ್ರಾಸ್ತ್ರವೆ ಮಾಸ್ಕ್. ಇದನ್ನು ಕೆಳಗಿಡುವುದು ಬೇಡ, ಜನರು ಹೆಚ್ಚಾಗಿ ಜಾಗೃತರಾಗಬೇಕು, ಇದರ ಹೊರತು ಕೊರೋನ ನಿಯಂತ್ರಣ ಅಸಾಧ್ಯ ಎಂದು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದರು.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಟೆಸ್ಟಿಂಗ್ ಪ್ರಮಾಣವನ್ನು ಮೂರುಪಟ್ಟು ಹೆಚ್ಚಿಸಲು ಸೂಚನೆ ನೀಡಿದ್ದಾರೆ, ಅಂತೆಯೇ ಎಲ್ಲ ಅಧಿಕಾರಿಗಳಿಗೂ ನಿರ್ದೇಶನ ನೀಡಿದ್ದು, ಹಂತಹಂತವಾಗಿ ಹೆಚ್ಚಿಸಲಿದ್ದೇವೆ ಎಂದು ಸುಧಾಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News