ಈಶ್ವರಪ್ಪರನ್ನು ನಂಬುವ ಬಿಜೆಪಿ ಕಾರ್ಯಕರ್ತರಿಗೆ ನಿರಾಶೆ ಕಟ್ಟಿಟ್ಟ ಬುತ್ತಿ: ಬೇಳೂರು ಗೋಪಾಲಕೃಷ್ಣ

Update: 2020-09-29 16:14 GMT

ಶಿವಮೊಗ್ಗ, ಸೆ.29: ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ಸ್ವಹಿತಾಸಕ್ತಿಯಲ್ಲಿ ತೊಡಗಿದ್ದು, ಈಶ್ವರಪ್ಪನವರನ್ನು ನಂಬಿ ಹೋಗುವ ಬಿಜೆಪಿ ಕಾರ್ಯಕರ್ತರಿಗೆ ನಿರಾಶೆ ಕಟ್ಟಿಟ್ಟ ಬುತ್ತಿ ಎಂದು ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಲೇವಡಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಈಶ್ವರಪ್ಪನವರನ್ನು ನಂಬಿ ಹೋಗುವ ಬಿಜೆಪಿ ಕಾರ್ಯಕರ್ತರಿಗೆ ನಿರಾಶೆ ಕಟ್ಟಿಟ್ಟ ಬುತ್ತಿ. ಸರ್ಕಾರ ಅಧಿಕಾರಕ್ಕೆ ಬಂದರೂ ಸಹ ಯಾವ ಹಿಂಬಾಲಕರಿಗೂ ಸ್ಥಾನ ಮಾನ ಕೊಡಿಸಲು ಸಾಧ್ಯವಾಗದ ಈಶ್ವರಪ್ಪನವರಿಗೆ ತಮಗೆ ಮತ್ತು ಪುತ್ರನಿಗೆ ಮಾತ್ರ ಅಧಿಕಾರ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ತಿಳಿಸಿದರು.

ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಮುಂದಾಗಿರುವ ಸಿಎಂ ಬಿಎಸ್‌ವೈ ಕಾರ್ಪೊರೇಟ್ ಕಂಪನಿಗಳಿಗೆ ರತ್ನಗಂಬಳಿ ಹಾಸಿ ರೈತರನ್ನ ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಕುಟುಂಬದ ಭ್ರಷ್ಟಾಚಾರ ಖಂಡಿಸಿ ಪ್ರತಿಭಟನೆ

ಕೊರೋನ ತಡೆಯುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಫಲ, ಉಪಕರಣ ಖರೀದಿಯಲ್ಲಿ ಭ್ರಷ್ಟಾಚಾರ ಮತ್ತು ಮುಖ್ಯಮಂತ್ರಿ ಕುಟುಂಬದ ಭ್ರಷ್ಟಾಚಾರಗಳನ್ನು ಖಂಡಿಸಿ ಅ.2 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಮುಖ್ಯಮಂತ್ರಿ ಪುತ್ರ ವಿಜೇಂದ್ರ ಮತ್ತು ಅವರ ಕುಟುಂಬದವರು ಭ್ರಷ್ಟಾಚಾರದಲ್ಲಿ ತೊಡಗಿರುವುದು ಸ್ಪಷ್ಟವಾಗಿದೆ. ಕೇಂದ್ರವಾಗಲಿ ರಾಜ್ಯ ಸರ್ಕಾರವಾಗಲಿ ಕೊರೋನ ತಡೆಯುವಲ್ಲಿ ವಿಫಲವಾಗಿದೆ. ಜನರೆಲ್ಲ ಬೀದಿಪಾಲಾಗಿದ್ದಾರೆ. ಜನಪರ ಯೋಜನೆಗಳು ಹಳ್ಳ ಹಿಡಿದಿವೆ. ರಾಜ್ಯ ಮತ್ತು ಕೇಂದ್ರದ ಬಿಜೆಪಿ ನಾಯಕರು ಒಂದು ಕಂಪೆನಿಯನ್ನೇ ಮಾಡಿಕೊಳ್ಳುತ್ತಿದ್ದಾರೆ. ಅಂಬಾನಿ, ಅದಾನಿಯವರ ಕೈಗೊಂಬೆಯಾಗಿದ್ದಾರೆ. ಇಡೀ ಸರ್ಕಾರವೇ ಕಾರ್ಪೋರೇಟ್ ವಲಯದ ಗುಲಾಮತನದಲ್ಲಿದೆ ಎಂದು ಆರೋಪಿಸಿದರು.

ಈ ಮೊದಲು ಚೆಕ್ ಮೂಲಕ ಹಣ ಪಡೆಯುತ್ತಿದ್ದ ಭ್ರಷ್ಟಾಚಾರಿಗಳು ಈಗ ಆರ್‌ಟಿಜಿಎಸ್ ಮೂಲಕ ಹಣ ಪಡೆಯುತ್ತಿದ್ದಾರೆ. ಇದನ್ನು ಬಹಿರಂಗಗೊಳಿಸಿದ ಮಾಧ್ಯಮಗಳ ವಿರುದ್ದ ಬೆದರಿಕೆ ಹಾಕುತ್ತಿದ್ದಾರೆ. ಗೋಹತ್ಯೆ ನಿಷೇಧ ಜಾರಿಗೆ ತರಲು ಪಣ ತೊಟ್ಟಿದ್ದ ಬಿಜೆಪಿ ಸರ್ಕಾರ ಏಕೆ ಇದುವರೆಗೂ ಜಾರಿಗೆ ತಂದಿಲ್ಲ ಎಂದು ಟೀಕಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಮಾತನಾಡಿ, ಸರ್ಕಾರ ಸುಗ್ರಿವಾಜ್ಞೆ ಮೂಲಕವೇ ಕಾಯ್ದೆಗಳನ್ನು ತರಲು ಹೊರಟಿವೆ. ಇದು ಖಂಡನೀಯ. ಎಲ್ಲ ಕಾಯ್ದೆಗಳು ರೈತರಿಗೆ ಮರಣ ಶಾಸನವಾಗಿವೆ. ಯಾವುದೇ ಕಾರಣಕ್ಕೂ ಇವು ಜಾರಿಯಾಗಬಾರದು ಎಂದರು. ಈ ಎಲ್ಲ ಕಾಯ್ದೆಗಳನ್ನು ವಿರೋಧಿಸಿ ಕಾಂಗ್ರೆಸ್ ಅ.2 ರಂದು ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ ಅನಿತಾ ಕುಮಾರಿ, ವಿಶ್ವನಾಥ್ ಕಾಶಿ, ಚಂದ್ರಭೂಪಾಲ್, ಚಂದನ್ ಮತ್ತಿತರರು ಇದ್ದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನೂತನ ವಕ್ತಾರರಾದ ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಅನಿತಾ ಕುಮಾರಿ ಅವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News