ರೈಲ್ವೆ ಸೇತುವೆ ವಿಸ್ತರಣೆಗೆ ಒತ್ತಾಯಿಸಿ ಪ್ರತಿಭಟನೆ: ನೀಲೂರು ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ

Update: 2020-09-29 16:21 GMT

ಕಲಬುರ್ಗಿ, ಸೆ.29: ಕಲಬುರ್ಗಿ ಜಿಲ್ಲೆಯ ನೀಲೂರು ಗ್ರಾಮದಲ್ಲಿ ರೈಲ್ವೆ ಕಾಮಗಾರಿ ನಡೆಯುತ್ತಿದ್ದು, ಗ್ರಾಮಸ್ಥರು ಮೊದಲು ರೈಲ್ವೆ ಸೇತುವೆ ವಿಸ್ತರಣೆ ಮಾಡಿ, ಬಳಿಕ ರೈಲ್ವೆ ಜೋಡಿ ಹಳಿ ಕಾಮಗಾರಿ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮದಲ್ಲಿ ಪೊಲೀಸರು ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ರೈಲ್ವೆ ಸೇತುವೆ ಬಹಳ ಚಿಕ್ಕದಾಗಿದೆ. ಈ ಸೇತುವೆಯಲ್ಲಿ ಒಂದು ಬಸ್ ಕೂಡ ಹೋಗುವುದಿಲ್ಲ. ಹೀಗಾಗಿ, ಒಂದು ಕೆಎಸ್ಸಾರ್ಟಿಸಿ ಬಸ್ ಹಾದು ಹೋಗುವಷ್ಟಾದರೂ ಸೇತುವೆಯನ್ನು ವಿಸ್ತರಿಸಬೇಕೆಂದು ಒತ್ತಾಯಿಸಿ ಮಂಗಳವಾರ ಬೆಳಗ್ಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಕಾಮಗಾರಿ ನಿಲ್ಲಿಸಲು ಪ್ರಯತ್ನಿಸಿದರು.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾಮಗಾರಿಗೆ ಅಡ್ಡಿಪಡಿಸದಂತೆ ಮನವಿ ಮಾಡಿಕೊಂಡರು, ಈ ಸಂದರ್ಭದಲ್ಲಿ ಪೊಲೀಸರ ಹಾಗೂ ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಳಗ್ಗೆಯಿಂದಲೇ ಮಧ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News