ಅಲ್ಪಸಂಖ್ಯಾತ ಸಮುದಾಯದ ಯೋಜನೆಗಳ ಹಣ ದುರ್ಬಳಕೆ ಆರೋಪ ಪ್ರಕರಣ: ಕೇಂದ್ರ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2020-09-29 17:16 GMT

ಬೆಂಗಳೂರು, ಸೆ.29: ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿ-ಯುವಕರ ಶಿಕ್ಷಣ ಮತ್ತು ಕೌಶಲ್ಯ ತರಬೇತಿಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಹಲವು ಯೋಜನೆಗಳ ಕೋಟ್ಯಂತರ ರೂ. ಅನುದಾನವನ್ನು ಅಲ್-ಅಮೀನ್ ಶಿಕ್ಷಣ ಸಂಸ್ಥೆ ಹಾಗೂ ಗೌಸಿಯಾ ಕೈಗಾರಿಕಾ ಮತ್ತು ಇಂಜಿನಿಯರಿಂಗ್ ಸಂಸ್ಥೆಗಳು ದುರುಪಯೋಗ ಮಾಡಿಕೊಂಡಿವೆ ಎಂದು ಆರೋಪಿರುವ ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ಬೆಂಗಳೂರು ನಿವಾಸಿ ಉಬೇದುಲ್ಲಾ ಶರೀಫ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಕೀಲ ಸೈಯದ್ ಇಮ್ರಾನ್ ವಾದ ಮಂಡಿಸಿದರು.

ಕೆಲ ಕಾಲ ವಕೀಲರ ವಾದ ಆಲಿಸಿದ ನ್ಯಾಯಪೀಠ, ಕೇಂದ್ರ ಅಲ್ಪಸಂಖ್ಯಾತರ ಕಲ್ಯಾಣ ಸಚಿವಾಲಯ, ನವ ದೆಹಲಿಯ ಮೌಲಾನ ಆಜಾದ್ ಶಿಕ್ಷಣ ಪ್ರತಿಷ್ಠಾನ, ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಅಲ್-ಅಮೀನ್ ಶಿಕ್ಷಣ ಸಂಸ್ಥೆ, ಗೌಸಿಯಾ ಕೈಗಾರಿಕಾ ಮತ್ತು ಇಂಜಿನಿಯರಿಂಗ್ ಸಂಸ್ಥೆ ಸೇರಿದಂತೆ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ನ.5ಕ್ಕೆ ಮುಂದೂಡಿತು.

ಯೋಜನೆಗಳಿಗೆ ಸಂಬಂಧಿಸಿದಂತೆ ಅಲ್ ಅಮೀನ್ ಶಿಕ್ಷಣ ಸಂಸ್ಥೆ ಹಾಗೂ ಗೌಸಿಯಾ ಕೈಗಾರಿಕಾ ಮತ್ತು ಇಂಜಿನಿಯರಿಂಗ್ ಸಂಸ್ಥೆ ಸಲ್ಲಿಸಿರುವ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸುವಂತೆ ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು. ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ವಹಿಸಬೇಕು. ಅನುದಾನ ದುರ್ಬಳಕೆ ಮಾಡಿಕೊಂಡವರಿಂದ ಹಣ ವಸೂಲಿ ಮಾಡುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News