15 ದಿನಗಳಲ್ಲಿ ಶಿರಾ ಕ್ಷೇತ್ರದ ಅಭ್ಯರ್ಥಿಯ ಘೋಷಣೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್

Update: 2020-09-29 17:19 GMT

ಬೆಳಗಾವಿ, ಸೆ.29: ಶಿರಾ ಉಪ ಚುನಾವಣೆಯಲ್ಲಿ ಟಿಕೆಟ್ ಘೋಷಣೆ ವಿಚಾರದಲ್ಲಿ ಪಕ್ಷವು ಎಲ್ಲ ಬೆಳವಣಿಗೆಗಳನ್ನೂ ಗಮನಿಸಿ, ತೀರ್ಮಾನ ಮಾಡಲಿದೆ. ನಾಲ್ಕೈದು ಆಕಾಂಕ್ಷಿಗಳ ಹೆಸರಿವೆ, ಎಲ್ಲವನ್ನೂ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಶಿರಾದಲ್ಲಿ ನಮ್ಮ ಕೆಲಸ ಈಗಾಗಲೇ ಆರಂಭವಾಗಿವೆ. ಸಂಘಟನಾತ್ಮಕ ಚಟುವಟಿಕೆಗಳು ನಡೆದಿವೆ. ಶಿರಾದಲ್ಲಿ ಬಿಜೆಪಿ ಗೆಲುವಿನ ವಾತಾವರಣ ಕಂಡುಬರುತ್ತಿದೆ. ಹತ್ತರಿಂದ ಹದಿನೈದು ದಿನಗಳಲ್ಲಿ ಟಿಕೆಟ್ ಘೋಷಣೆ ಮಾಡಲಾಗುವುದು ಎಂದು ಪ್ರತಿಕ್ರಿಯಿಸಿದರು.

ಎಪಿಎಂಸಿ ಮತ್ತು ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಹೋರಾಟ ನಡೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಷಯದಲ್ಲಿ ಕಾಂಗ್ರೆಸ್ ಕೀಳು ರಾಜಕಾರಣ ಮಾಡುತ್ತಿದೆ. ರೈತರನ್ನ ಎತ್ತಿ ಕಟ್ಟಿ ರಾಷ್ಟ್ರದಲ್ಲಿ ಜನವಿರೋಧಿ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲೇ, ಈ ಎಲ್ಲ ಕಾಯ್ದೆಗಳಿಗೆ ತಿದ್ದುಪಡಿ ತರಬೇಕು ಎಂದು ಹೇಳಿತ್ತು. ಅತ್ಯುತ್ತಮವಾಗಿರುವ ಹಾಗೂ ರೈತರ ಪರವಾಗಿರುವ ಕಾಯ್ದೆ ಇದು. ರೈತರಿಗೆ ನೇರವಾದ ಮಾರುಕಟ್ಟೆ ಕೊಡಬೇಕು ಎಂಬ ಬೇಡಿಕೆ ಇತ್ತು. ಆ ಬೇಡಿಕೆ ಪ್ರಕಾರ ಸರಕಾರ ಕಾಯ್ದೆಗೆ ತಿದ್ದುಪಡಿ ಮಾಡಿದೆ. ರೈತರಿಗೆ ಮನದಟ್ಟು ಮಾಡುವ ಕೆಲಸವನ್ನು ಪಕ್ಷದಿಂದ ಕೈಗೊಳ್ಳುತ್ತೇವೆ. ಇದರ ಮಧ್ಯೆ ಬೆಂಕಿ ಹಾಕಿ ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಮಾಡಬಾರದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News