ಗುಜರಾತ್ ನ ಜಲಸಾರಿಗೆ ಎಂದು ವೈರಲ್ ಆಗುತ್ತಿರುವ ಹಡಗಿನ ವಿಡಿಯೋ ಹಿಂದಿನ ವಾಸ್ತವವೇನು?

Update: 2020-09-30 05:32 GMT

ಹೊಸದಿಲ್ಲಿ: ಗುಜರಾತ್‌ನ ಭಾವನಗರದಿಂದ ಬರೂಚ್‌ ಗೆ ಸಾರಿಗೆ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಎರಡು ಹಡಗುಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ರಸ್ತೆ ಮೂಲಕ 350 ಕಿಲೋಮೀಟರ್ ಅಂತರದ ಈ ಪ್ರಯಾಣ ಸಮುದ್ರ ಮಾರ್ಗದ ಮೂಲಕ ಕೇವಲ 32 ಕಿಲೋಮೀಟರ್ ಆಗುತ್ತದೆ ಹಾಗೂ ಕೇವಲ 30 ನಿಮಿಷಗಳ ಪ್ರಯಾಣ ಅವಧಿ ಸಾಕು ಎಂದು ವಿವರಿಸಲಾಗಿತ್ತು. ಈ ಹಡಗು 50 ಟ್ರಕ್, 60 ಬಸ್, 200 ಕಾರು, 350 ಮೋಟರ್‌ ಸೈಕಲ್ ಹಾಗೂ 600 ಮಂದಿಯನ್ನು ಕರೆದೊಯ್ಯಬಲ್ಲದು ಎಂದೂ ವಿವರಿಸಲಾಗಿತ್ತು.

ಟ್ವಿಟ್ಟರ್ ಬಳಕೆದಾರ @RenukaJain6 ಪೋಸ್ಟ್ ಮಾಡಿದ ಈ ಒಂದು ನಿಮಿಷ ಅವಧಿಯ ವೀಡಿಯೊದಲ್ಲಿ ಅಗಲ ಕಿರಿದಾದ ಕಾಲುವೆ ಮೂಲಕ ಹಡಗು ಸಂಚರಿಸುತ್ತಿರುವ ದೃಶ್ಯವಿತ್ತು. ಇದನ್ನು 2.4 ಲಕ್ಷ ಮಂದಿ ವೀಕ್ಷಿಸಿದ್ದು, 6700 ಮಂದಿ ಮರುಟ್ವೀಟ್ ಮಾಡಿದ್ದಾರೆ.

ಆದರೆ ಈ ವೀಡಿಯೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ನ್ಯೂಯಾರ್ಕ್ ಪೋಸ್ಟ್ ಮತ್ತು ದ ಸನ್ ಪತ್ರಿಕೆಗಳಲ್ಲಿ 2019ರಲ್ಲಿ ಪ್ರಕಟವಾದ ಲೇಖನಗಳು ಸೇರಿದಂತೆ ಹಲವು ಮಾಹಿತಿ ದೊರಕಿತು. ಈ ವರದಿಯ ಪ್ರಕಾರ ಈ ಹಡಗು ಎಂಎಸ್ ಬ್ರೇಮರ್. ನಾರ್ವೆ ಮೂಲದ ಫ್ರೆಡ್ ಒಲ್ಸೆನ್ ಕ್ರೂಸ್ ಲೈನ್ಸ್ ಕಂಪನಿ ಮಾಲಕತ್ವದ್ದು. ಇದು ಇಟೆಲಿಯ ಮಾರ್ಗಮಧ್ಯದಲ್ಲಿ ಗ್ರೀಕ್ ದ್ವೀಪದ ಮೂಲಕ ಹಾದುಹೋಗುತ್ತಿರುವ ದೃಶ್ಯ ಎನ್ನುವುದು ದೃಢಪಟ್ಟಿದೆ.

ಟ್ವಿಟ್ಟರ್ ಬಳಕೆದಾರ @MojawatHemant ಎಂಬುವವರು 40 ಸೆಕೆಂಡ್‌ಗಳ ಇನ್ನೊಂದು ವೀಡಿಯೊ ಪೋಸ್ಟ್ ಮಾಡಿದ್ದರು. ಇದರಲ್ಲಿ ಹಡಗಿನಿಂದ ಟ್ರಕ್ ‌ಗಳನ್ನು ಅನ್‌ಲೋಡ್ ಮಾಡುವ ದೃಶ್ಯವಿತ್ತು. ಇದನ್ನೂ ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಇಂಥದ್ದೇ ಬರಹದೊಂದಿಗೆ 2018ರಲ್ಲಿ ವ್ಯಾಪಕವಾಗಿ ಶೇರ್ ಆಗಿರುವುದು ಕಂಡುಬಂತು.

ವಾಸ್ತವವಾಗಿ ಪ್ರಧಾನಿ ಮೋದಿಯವರು ಮಾಡಿದ ಟ್ವೀಟ್ ‌ನಲ್ಲಿ ಘೋಘ- ದಹೇಜ್ ನಡುವಿನ ಜಲಸಂಚಾರ ಸೇವೆಯು ಸಂಪರ್ಕ ಮತ್ತು ಮೂಲಸೌಕರ್ಯವನ್ನು ಉತ್ತೇಜಿಸಲಿದೆ ಎಂದು ವಿವರಿಸಲಾಗಿತ್ತು. ಮೋದಿ ಅಪ್‌ಲೋಡ್ ಮಾಡಿದ ವೀಡಿಯೊ ಪ್ರಕಾರ 31 ಕಿಲೋಮೀಟರ್ ದೂರ ಕ್ರಮಿಸಲು ಒಂದು ಗಂಟೆ ಬೇಕು ಹಾಗೂ ಇದು 70-80 ಟ್ರಕ್, 100 ಲಘು ವಾಹನಗಳು ಮತ್ತು 500 ಮಂದಿಯನ್ನು ಕರೆದೊಯ್ಯಬಲ್ಲದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News