ಬಾಬರಿ ಮಸೀದಿ ದ್ವಂಸ ಪ್ರಕರಣ: ಎಲ್ಲಾ ಆರೋಪಿಗಳು ದೋಷಮುಕ್ತ

Update: 2020-09-30 14:14 GMT

ಲಕ್ನೊ, ಸೆ.30: ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿಯನ್ನು 1992ರ ಡಿಸೆಂಬರ್ 6ರಂದು ಧ್ವಂಸ ನಡೆಸಿರುವುದು ಯೋಜಿತ ಕೃತ್ಯವಲ್ಲ ಎಂದು ತಿಳಿಸಿರುವ ಸಿಬಿಐ ವಿಶೇಷ ನ್ಯಾಯಾಲಯ, ಬಿಜೆಪಿ ಮುಖಂಡರಾದ ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ ಮತ್ತು ಉಮಾ ಭಾರತಿ ಸಹಿತ ಎಲ್ಲಾ 32 ಆರೋಪಿಗಳೂ ನಿರ್ದೋಷಿಗಳು ಎಂದು ತೀರ್ಪು ನೀಡಿದೆ. 16ನೇ ಶತಮಾನದ ಮಸೀದಿಯನ್ನು ಧ್ವಂಸಗೊಳಿಸಿದ ಹಿಂದು ಕಾರ್ಯಕರ್ತರು ಸಮಾಜ ವಿರೋಧಿ ಶಕ್ತಿಗಳು ಎಂದು ವ್ಯಾಖ್ಯಾನಿಸಿರುವ ವಿಶೇಷ ಸಿಬಿಐ ನ್ಯಾಯಾಧೀಶ ಎಸ್‌.ಕೆ.ಯಾದವ್, ಆರೋಪಿಗಳು ಮಸೀದಿ ಧ್ವಂಸ ಪ್ರಕ್ರಿಯೆಯನ್ನು ತಡೆಯಲು ಪ್ರಯತ್ನಿಸಿದ್ದರು ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ತೀರ್ಪು ಪ್ರಕಟಿಸುವಾಗ 92 ವರ್ಷದ ಎಲ್‌ಕೆ ಅಡ್ವಾಣಿ ಹಾಗೂ 61 ವರ್ಷದ ಉಮಾಭಾರತಿ ನ್ಯಾಯಾಲಯದಲ್ಲಿ ಗೈರುಹಾಜರಿದ್ದು ವೀಡಿಯೊ ಲಿಂಕ್ ಮೂಲಕ ನ್ಯಾಯಾಲಯದ ಕಲಾಪವನ್ನು ವೀಕ್ಷಿಸಿದರು.

 32 ಆರೋಪಿಗಳ ವಿರುದ್ಧ ಕ್ರಿಮಿನಲ್ ಪಿತೂರಿ, ದ್ವೇಷವನ್ನು ಉತ್ತೇಜಿಸಿರುವುದು ಹಾಗೂ ಘಟನೆಯ ಸ್ಥಳದ ಸಮೀಪದ ವೇದಿಕೆಯಿಂದ ಉದ್ರೇಕಕಾರಿ ಭಾಷಣ ಮಾಡಿ ಕಾರ್ಯಕರ್ತರನ್ನು ಪ್ರಚೋದಿಸಿರುವ ಆರೋಪವಿತ್ತು. ಸಮಾಜ ವಿರೋಧಿ ಶಕ್ತಿಗಳು ಮಸೀದಿಯನ್ನು ಧ್ವಂಸಗೊಳಿಸಿವೆ. ಆರೋಪಿ ಮುಖಂಡರು ಈ ವ್ಯಕ್ತಿಗಳನ್ನು ತಡೆಯಲು ಪ್ರಯತ್ನಿಸಿದ್ದರು. ಸಿಬಿಐ ನೀಡಿರುವ ಆಡಿಯೋ ಮತ್ತು ವೀಡಿಯೊ ದಾಖಲೆಯಲ್ಲಿ ಪಿತೂರಿ ನಡೆದಿರುವುದಕ್ಕೆ ಪುರಾವೆಯಿಲ್ಲ. ಭಾಷಣದ ಆಡಿಯೋದಲ್ಲಿ ಧ್ವನಿ ಸ್ಪಷ್ಟವಾಗಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣದ ತೀರ್ಪು ಪ್ರಕಟಣೆಯ ಹಿನ್ನೆಲೆಯಲ್ಲಿ ನ್ಯಾಯಾಧೀಶ ಎಸ್‌.ಕೆ. ಯಾದವ್ ಅವರ ಸೇವಾವಧಿಯನ್ನು ವಿಸ್ತರಿಸಲಾಗಿತ್ತು.

ತೀರ್ಪಿನಲ್ಲಿ ನ್ಯಾಯಾಧೀಶರು ಉಲ್ಲೇಖಿಸಿದ ಐದು ಅಂಶಗಳು

28 ವರ್ಷದಿಂದ ನ್ಯಾಯಾಲಯದಲ್ಲಿದ್ದ ಬಾಬರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆ ತೀರ್ಪು ಪ್ರಕಟಿಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್‌ಕೆ ಯಾದವ್, ತೀರ್ಪಿನಲ್ಲಿ ಈ ಐದು ಅಂಶಗಳನ್ನು ಉಲ್ಲೇಖಿಸಿದ್ದಾರೆ.

ಬಾಬರಿ ಮಸೀದಿ ಧ್ವಂಸ ಪ್ರಕರಣ ಪೂರ್ವಯೋಜಿತವಲ್ಲ.

ಆರೋಪಿಗಳ ವಿರುದ್ಧ ಸಾಕಷ್ಟು ಪುರಾವೆಗಳಿಲ್ಲ.

ಸಿಬಿಐ ಒದಗಿಸಿದ ಆಡಿಯೋ, ವೀಡಿಯೋದ ನಿಜತ್ವವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ.

ಸಮಾಜ ವಿರೋಧಿ ಶಕ್ತಿಗಳು ಮಸೀದಿಯನ್ನು ಧ್ವಂಸಗೊಳಿಸಿವೆ. ಆರೋಪಿ ಮುಖಂಡರು ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ.

ಮಾತುಗಳ ಧ್ವನಿ ಸ್ಪಷ್ಟವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News