ನಾಗರಿಕ ಸೇವಾ ಪರೀಕ್ಷೆ ಮುಂದೂಡಿಕೆಗೆ ಸುಪ್ರೀಂ ನಕಾರ

Update: 2020-10-01 03:59 GMT

ಹೊಸದಿಲ್ಲಿ, ಅ.1: ಮುಂದಿನ ರವಿವಾರ (ಅ.4) ನಡೆಯಲಿರುವ ಕೇಂದ್ರ ಲೋಕಸೇವಾ ಆಯೋಗದ ಪ್ರಾಥಮಿಕ ಹಂತದ (ಪ್ರಿಲಿಮ್ಸ್) ಪರೀಕ್ಷೆ ಮುಂದೂಡಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ.

ಯುಪಿಎಸ್ಸಿ ಈಗಾಗಲೇ ಐದು ಲಕ್ಷ ಮಂದಿ 12ನೇ ತರಗತಿ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ರಾಷ್ಟ್ರೀಯ ರಕ್ಷಣಾ ಅಕಾಡಮಿ ಪರೀಕ್ಷೆಯನ್ನು ನಿರ್ವಹಿಸಿದ್ದರೆ, ದೇಶಾದ್ಯಂತ ಪ್ರಿಲಿಮ್ಸ್ ಪರೀಕ್ಷೆಯನ್ನು ಕೂಡಾ ಸುರಕ್ಷಿತವಾಗಿ ನಡೆಸಲಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಅಚ್ಚರಿಯ ವಿಚಾರವೆಂಧರೆ ಎನ್‌ಡಿಎ ಪರೀಕ್ಷೆಯ ಮುಂದೂಡಿಕೆ ಅಥವಾ ರದ್ದತಿಗೆ ಕೋರಿ ಯಾವ ಅರ್ಜಿಯೂ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿರಲಿಲ್ಲ. "ನೀವು ನಾಗರಿಕ ಸೇವೆಗೆ ಸೇರಲು ಆಕಾಂಕ್ಷಿಯಾಗಿದ್ದು, ಇನ್ನೂ ವಿದ್ಯಾರ್ಥಿಯಂತೆ ವರ್ತಿಸುತ್ತಿದ್ದೀರಿ" ಎಂದು ನ್ಯಾಯಮೂರ್ತಿಗಳಾದ ಎ.ಎಂ.ಖನ್ವೀಲ್ಕರ್, ಬಿ.ಆರ್.ಗವಾಯಿ ಮತ್ತು ಕೃಷ್ಣಮುರಾರಿಯವರನ್ನು ಒಳಗೊಂಡ ನ್ಯಾಯಪೀಠ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದೆ.

ವಯೋಮಿತಿ ಮೀರುವವರು ಮತ್ತು ಕೊನೆಯ ಬಾರಿ ಪರೀಕ್ಷೆ ಬರೆಯಲು ಅವಕಾಶ ಇರುವವರ ಪೈಕಿ ಯಾರಾದರೂ ಪರೀಕ್ಷೆಗೆ ಗೈರುಹಾಜರಾದಲ್ಲಿ ಇಂಥ ಅಭ್ಯರ್ಥಿಗಳಿಗೆ ಒಂದು ಹೆಚ್ಚುವರಿ ಅವಕಾಶವನ್ನು ನೀಡುವ ಸಾಧ್ಯತೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸಲಿ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರಿಗೆ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News