ಶಿರಾ ಉಪಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಸಾಧ್ಯತೆ: ಇನ್ನೂ ಅಭ್ಯರ್ಥಿ ಘೋಷಿಸದ ಜೆಡಿಎಸ್-ಬಿಜೆಪಿ

Update: 2020-10-01 05:52 GMT

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ದಿನಾಂಕ ನಿಗದಿಯಾಗಿದ್ದು, ಆಕ್ಟೋಬರ್ 9 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ನವೆಂಬರ್ 3ಕ್ಕೆ ಚುನಾವಣೆ ನಡೆಯಲಿದೆ. ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

ಶಾಸಕರಾದ ಬಿ.ಸತ್ಯನಾರಾಯಣ ಅವರ ಸಾವಿನಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು, ಈಗಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಘೋಷಿಸಿದೆ. ಚುನಾವಣೆಯ ಉಸ್ತುವಾರಿ ಹೊಣೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮತ್ತು ರಾಜ್ಯ ಅಪೇಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರಿಗೆ ಹೆಗಲಿಗೆ ಬಿದ್ದಿದೆ.

ಹೇಗಾದರೂ ಮಾಡಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಬೇಕೆಂಬ ಮಹದಾಸೆಯನ್ನು ಹೊಂದಿರುವ ಜೆಡಿಎಸ್ ಅನುಕಂಪದ ಲಾಭ ಪಡೆಯುವ ಹವಣಿಕೆಯಲ್ಲಿದೆ. ಶಿರಾದಲ್ಲಿ ಖಾತೆ ತೆರೆಯಲು ಕಾಯುತ್ತಿರುವ ಬಿಜೆಪಿ ಪಕ್ಷ, ಈಗಾಗಲೇ ಇಡೀ ಕ್ಷೇತ್ರದಲ್ಲಿ ಒಂದು ಸುತ್ತಿನ ಕಾರ್ಯಕರ್ತರ ಸಭೆ ನಡೆಸಿದ್ದರೂ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆ. ಜೆಡಿಯು ತನ್ನ ಅಭ್ಯರ್ಥಿಯಾಗಿ ಲಿಂಗದಹಳ್ಳಿ ಚೇತನ್ ಅವರನ್ನು ಹೆಸರಿಸಿದೆ.

ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ 2.10 ಲಕ್ಷ ಮತದಾರದಲ್ಲಿ ಕಾಂಗ್ರೆಸ್ ಪಕ್ಷದ ಟಿ.ಬಿ.ಜಯಚಂದ್ರ 63,973 ಸಾವಿರ ಮತಗಳು, ಜೆಡಿಎಸ್‍ನ ಬಿ.ಸತ್ಯನಾರಾಯಣ 74,338 ಸಾವಿರ ಮತಗಳನ್ನು, ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್.ಆರ್.ಗೌಡ 16,959  ಸಾವಿರ ಮತಗಳನ್ನು ಪಡೆದಿದ್ದರೆ, ಪಕ್ಷೇತರರಾಗಿ ಸ್ಪರ್ಧಿಸಿದ್ದ ಗೊಲ್ಲ ಸಮುದಾಯದ ಸಿ.ಎಂ.ನಾಗರಾಜು 12,000 ಸಾವಿರ ಮತಗಳನ್ನು ಪಡೆದಿದ್ದರು.

ಶಿರಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಖಚಿತವಾಗಿದ್ದರೂ, ಇದುವರೆಗೂ ಬಿಜೆಪಿ ಖಾತೆ ತೆರೆದಿಲ್ಲ. ಈ ಬಾರಿ ಹೇಗಾದರೂ ಮಾಡಿ ಗೆಲುವು ಸಾಧಿಸಬೇಕೆಂಬ ಉದ್ದೇಶದಿಂದ ಬಿಜೆಪಿಯು, ನಿರ್ಮಾಣಗೊಂಡು ಎರಡು ವರ್ಷಗಳೇ ಕಳೆದರೂ ಉದ್ಘಾಟನೆಯಾಗದ ಮಿನಿವಿಧಾನಸೌಧದ ಉದ್ಘಾಟನೆಗೆ, ಮದಲೂರು ಕೆರೆಗೆ ನೀರು ಹರಿಸುವ ಭರವಸೆಯ ಜೊತೆಗೆ ಗೊಲ್ಲಸಮುದಾಯದ ಮತಗಳನ್ನು ಪಡೆಯಲು ಕಾಡುಗೊಲ್ಲ ಅಭಿವೃದ್ದಿ ನಿಗಮದಂತಹ ಸಾಹಸಗಳಿಗೆ ಕೈ ಹಾಕಿದೆ.

ಚುನಾವಣೆ ಸಂಬಂಧ ಈ ಹಿಂದೆ ದೇವೇಗೌಡರ ನೇತೃತ್ವದಲ್ಲಿ ಪದ್ಮನಾಭನಗರದ ಮನೆಯಲ್ಲಿ ಸಮಾಲೋಚನೆ ನಡೆದರೂ ಅಭ್ಯರ್ಥಿ ವಿಚಾರದಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಚುನಾವಣೆ ಘೋಷಣೆಯಾದ ತಕ್ಷಣವೇ ಎಚ್ಚೆತ್ತ ಜೆಡಿಎಸ್‍ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಇಂಧನ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಇನ್ನಿತರ ನಾಯಕರು ಶಿರಾ ನಗರಕ್ಕೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದು, ಅಭ್ಯರ್ಥಿ ಕುರಿತು ಒಮ್ಮತಕ್ಕೆ ಬರಲಾಗದೆ, ಇನ್ನೆರಡು ದಿನದಲ್ಲಿ ಅಭ್ಯರ್ಥಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಜೆಡಿಎಸ್ ಅಭ್ಯರ್ಥಿ ಘೋಷಣೆ ನಂತರ ತಮ್ಮ ಪಕ್ಷದ ಅಭ್ಯರ್ಥಿ ಘೋಷಣೆ ಮಾಡಲು ಬಿಜೆಪಿ ಮುಂದಾಗಿದ್ದು, ಪಕ್ಷದಿಂದ ಈ ಹಿಂದಿನ ಚುನಾವಣೆಗಳಲ್ಲಿ ಸೋತಿರುವ ಮಂಜುನಾಥ್ ಮತ್ತು ಎಸ್.ಆರ್.ಗೌಡ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಮತ್ತೊಂದೆಡೆ ಡಾ.ರಾಜೇಶ್‍ ಗೌಡ ಸಹ ಬಿಜೆಪಿಯಿಂದ ಸ್ಪರ್ಧಿಸ ಬಯಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಮದಲೂರು ಕೆರೆ ನೀರು ವಿಚಾರದಲ್ಲಿ ಈ ಹಿಂದೆ ಸರಕಾರಕ್ಕೆ ಸಲ್ಲಿಸಿದ್ದ ಪತ್ರ ಮತ್ತು ಕಾಡುಗೊಲ್ಲ ಅಭಿವೃದ್ದಿ ನಿಗಮವೇ ಬಿಜೆಪಿಗೆ ಮುಳುವಾಗುವ ಸಾಧ್ಯತೆಗಳನ್ನು ತಳ್ಳಿ ಹಾಕಲಾಗದು.

ಸುಮಾರು 60 ಸಾವಿರಕ್ಕೂ ಹೆಚ್ಚು ದಲಿತರು, 40 ಸಾವಿರ ಅಲ್ಪಸಂಖ್ಯಾತರು, 35 ಸಾವಿರ ಕುಂಚಟಿಗ, 20 ಸಾವಿರ ಗೊಲ್ಲ,15 ಸಾವಿರ ಕುರುಬ ಸಮುದಾಯದ ಮತಗಳಿದ್ದು, ಗೊಲ್ಲರು, ಕುರುಬ ಮತ್ತು ದಲಿತರ ಮತಗಳು ನಿರ್ಣಾಯಕವಾಗಲಿವೆ. ಒಂದು ವೇಳೆ ಮೃತ ಸತ್ಯನಾರಾಯಣ ಅವರ ಕುಟುಂಬಕ್ಕೆ ಜೆಡಿಎಸ್ ಟಿಕೆಟ್ ನೀಡಿದರೆ, ಬಿಜೆಪಿ ಎಸ್.ಆರ್.ಗೌಡ ಅಥವಾ ಬೇವಿನಹಳ್ಳಿ ಮಂಜುನಾಥ್ ಅವರಿಗೆ ನೀಡಿದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಮೂರು ಪಕ್ಷಗಳ ಅಭ್ಯರ್ಥಿಗಳ ಘೋಷಣೆಯ ನಂತರವಷ್ಟೇ ಸ್ಪಷ್ಟ ಚಿತ್ರಣ ದೊರೆಯಲಿದೆ.

Writer - ರಂಗರಾಜು ಎನ್.ಡಿ.

contributor

Editor - ರಂಗರಾಜು ಎನ್.ಡಿ.

contributor

Similar News