ದಲಿತ ಯುವತಿಯ ರಾತ್ರೋರಾತ್ರಿ ಅಂತ್ಯಕ್ರಿಯೆ ನಡೆಸಿದ ಪೊಲೀಸರನ್ನು ಶಿಕ್ಷಿಸಿ: ಬಿಜೆಪಿ ಸಂಸದ ಆಗ್ರಹ

Update: 2020-10-01 06:33 GMT

ಹೊಸದಿಲ್ಲಿ,ಅ.1: ಸಾಮೂಹಿಕ ಅತ್ಯಾಚಾರ ಹಾಗೂ ಚಿತ್ರಹಿಂಸೆಗೆ ಒಳಗಾಗಿ ದಿಲ್ಲಿಯ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಮಂಗಳವಾರ ಮೃತಪಟ್ಟಿರುವ ದಲಿತ ಯುವತಿಯನ್ನು ಆತುರದಿಂದ ಅಂತ್ಯಕ್ರಿಯೆ ನಡೆಸಲು ಮುಂದಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಸಂಸದರೊಬ್ಬರು ತಮ್ಮ ಪಕ್ಷದ ಸಹೋದ್ಯೋಗಿ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.

 "ಕುಟುಂಬದ ಒಪ್ಪಿಗೆ ಇಲ್ಲದೆ ಆ ಕುಟುಂಬದ ಮಗಳನ್ನು ಆತುರದಿಂದ ಬುಧವಾರ ಮುಂಜಾನೆ 2 ಗಂಟೆಗೆ ಅಂತ್ಯಕ್ರಿಯೆ ಮಾಡಿದ ಅಧಿಕಾರಿಗಳಿಂದ ಸ್ಪಷ್ಟನೆ ಪಡೆಯಬೇಕು. ಯಾವುದೇ ಅಧಿಕಾರಿ ತಪ್ಪಿತಸ್ಥರೆಂದು ಸಾಬೀತಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು'' ಎಂದು ದಿಲ್ಲಿ ಬಿಜೆಪಿ ಸಂಸದ ಹನ್ಸ್ ರಾಜ್ ಹನ್ಸ್ ಬುಧವಾರ ಪತ್ರದಲ್ಲಿ ಹೇಳಿದ್ದಾರೆ.

 ಯುವತಿಯ ಶವವನ್ನು ಮಧ್ಯರಾತ್ರಿಯ ನಂತರ ದಿಲ್ಲಿಯಿಂದ 200 ಕಿ.ಮೀ.ದೂರದಲಿರುವ ಹತ್ರಾಸ್‌ನಲ್ಲಿರುವ ಹಳ್ಳಿಗೆ ಕೊಂಡೊಯ್ಯಲಾಯಿತು. ಮಗಳ ಶವವನ್ನು ಮನೆಗೆ ಕರೆದೊಯ್ದು ಬೆಳಗ್ಗೆ ಅಂತ್ಯಕ್ರಿಯೆ ನಡೆಸುವೆ ಎಂದು ಯುವತಿಯ ತಂದೆಯ ಕೋರಿಕೆಯನ್ನು ಮನ್ನಿಸದ ಪೊಲೀಸರು ಸ್ವತಃ ಅಂತ್ಯಕ್ರಿಯೆ ನಡೆಸಿದ್ದರು. ಇದು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News