ರಾಹುಲ್, ಪ್ರಿಯಾಂಕಾ ಗಾಂಧಿ ಭೇಟಿಗೆ ಮೊದಲೇ ಹಾಥರಸ್ ಜಿಲ್ಲೆಯ ಗಡಿ ಮುಚ್ಚಿದ ಉ.ಪ್ರ.ಸರಕಾರ

Update: 2020-10-01 07:35 GMT

ಹೊಸದಿಲ್ಲಿ, ಅ.1: ಸಾಮೂಹಿಕ ಅತ್ಯಾಚಾರ ಹಾಗೂ ಚಿತ್ರಹಿಂಸೆಗೆ ಒಳಗಾಗಿ ದಿಲ್ಲಿಯ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಮಂಗಳವಾರ ಮೃತಪಟ್ಟಿರುವ ದಲಿತ ಯುವತಿಯನ್ನು ಉತ್ತರಪ್ರದೇಶದ ಪೊಲೀಸರು ಆತುರದಿಂದ ಅಂತ್ಯಕ್ರಿಯೆ ನಡೆಸಿದ್ದು, ಪೊಲೀಸರ ಈ ಕ್ರಮ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶದ ಹಥ್ರಾಸ್ ಜಿಲ್ಲೆಗೆ ಇಂದು ಭೇಟಿ ನೀಡಿ ಯುವತಿಯ ಕುಟುಂಬಕ್ಕೆ ಸಾಂತ್ವಾನ ಹೇಳಲು ಬಯಸಿದ್ದರು. ಆದರೆ, ಯುವತಿಯ ಹತ್ಯಾಚಾರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಆದಿತ್ಯನಾಥ್ ಸರಕಾರ ಹಥ್ರಾಸ್ ಜಿಲ್ಲೆಯ ಗಡಿಭಾಗಗಳನ್ನು ಮುಚ್ಚಿದ್ದು, ಸೆಕ್ಷನ್ 144ನ್ನು ಜಾರಿಗೆ ತಂದಿದೆ. 5ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ.

ಸೆಪ್ಟಂಬರ್ 14ರಂದು ದಲಿತ ಯುವತಿಯ ಮೇಲೆ ಮೇಲ್ಜಾತಿಗೆ ಸೇರಿದ ನಾಲ್ವರು ಪುರುಷರು ಅತ್ಯಾಚಾರ ನಡೆಸಿದ್ದಲ್ಲದೆ,ನಾಲಗೆ ಕತ್ತರಿಸಿ ಚಿತ್ರಹಿಂಸೆ ನೀಡಿದ್ದರು. ಯುವತಿಯ ಶವವನ್ನು ತಾವೇ ರಾತ್ರಿ 2:30ಕ್ಕೆ ಅಂತ್ಯ ಕ್ರಿಯೆ ನಡೆಸಿದ್ದ ಉತ್ತರಪ್ರದೇಶದ ಪೊಲೀಸರು ಸಂತ್ರಸ್ತ ಯುವತಿಯ ಕುಟುಂಬಕ್ಕೆ ಮತ್ತಷ್ಟು ನೋವು ಕೊಟ್ಟಿದ್ದಾರೆ.

ಈ ಘಟನೆಯ ಬಳಿಕ ಎಲ್ಲ ಪಕ್ಷಗಳು ಉತ್ತರಪ್ರದೇಶದ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಪ್ರಿಯಾಂಕಾ ಗಾಂಧಿ ಅವರು ಆದಿತ್ಯನಾಥ್ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು. ಆದಿತ್ಯನಾಥ್‌ಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲು ನೈತಿಕತೆ ಇಲ್ಲ ಎಂದು ಅವರು ಹೇಳಿದ್ದರು.

"ಇದೆಲ್ಲವೂ ದಲಿತರನ್ನುನಿಗ್ರಹಿಸಲು ಹಾಗೂ ಅವರಿಗೆ ಸಮಾಜದಲ್ಲಿ ತಮ್ಮ ಸ್ಥಾನವನ್ನು ತೋರಿಸುವ ಯುಪಿ ಸರಕಾರದ ನಾಚಿಕೆಗೇಡಿನ ಕ್ರಮ. ಇಂತಹ ದ್ವೇಷ ಚಿಂತನೆಯ ವಿರುದ್ಧ ನಮ್ಮ ಹೋರಾಟ ನಡೆಯಲಿದೆ'' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News