ಮೆಗ್ಗಾನ್ ಹೊರಗುತ್ತಿಗೆ ಸಿಬ್ಬಂದಿ ಅ.2ರಿಂದ ಸೇವೆಗೆ ಹಾಜರು: ಸಚಿವ ಈಶ್ವರಪ್ಪ

Update: 2020-10-01 10:20 GMT

ಶಿವಮೊಗ್ಗ, ಅ.1: ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ಕೆಲವು ದಿನಗಳಿಂದ ಮುಷ್ಕರ ನಡೆಸುತ್ತಿರುವ ಮೆಗ್ಗಾನ್ ಆಸ್ಪತ್ರೆಯ ಹೊರಗುತ್ತಿಗೆ ಸಿಬ್ಬಂದಿ ಅ.2ರಿಂದ ಸೇವೆಗೆ ಹಾಜರಾಗಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಅವರು ಗುರುವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಈ ವಿಷಯ ತಿಳಿಸಿದರು.

ಮುಷ್ಕರದಲ್ಲಿ ಭಾಗವಹಿಸಿದ ಎಲ್ಲಾ ಸಿಬ್ಬಂದಿಗೂ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ. ಹೊಸ ಗುತ್ತಿಗೆ ಸಂಸ್ಥೆಯ ಅಡಿಯಲ್ಲಿ ಇದೇ ಸಿಬ್ಬಂದಿಯನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಕೊರೋನ ಸಂದರ್ಭದಲ್ಲಿ ಕರ್ತವ್ಯಕ್ಕೆ ಯಾವುದೇ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಹೊರಗುತ್ತಿಗೆ ಸಂಸ್ಥೆಯ ವಿರುದ್ಧ ಹಲವು ಆರೋಪಗಳಿವೆ. ಸಿಬ್ಬಂದಿ ನೇಮಕಕ್ಕೆ ಹಣ ಪಡೆಯುವುದು, ಗೌರವ ಧನದಲ್ಲಿ ಕಡಿತ ಮಾಡುವುದು ಇತ್ಯಾದಿ ದೂರುಗಳಿದ್ದು, ಹೊಸ ಗುತ್ತಿಗೆ ಸಂಸ್ಥೆ ಇಂತಹ ಅಕ್ರಮ ಎಸಗುವುದು ಕಂಡು ಬಂದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಕೊರೋನದಂತಹ ಇಂತಹ ತುರ್ತು ಸಂದರ್ಭದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಸೂಚಿಸಿದರು.

ಸದ್ಯ ಮೆಗ್ಗಾನ್‍ನಲ್ಲಿ 111 ಮಂದಿ ಸೆಕ್ಯೂರಿಟಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಅವರನ್ನು ಇನ್ನು ಮುಂದೆ ಹಂತ ಹಂತವಾಗಿ ಹೋಂಗಾರ್ಡ್ ಅಡಿಯಲ್ಲಿ ಸೇವೆಗೆ ತೆಗೆದುಕೊಳ್ಳಬೇಕು. ಇನ್ನುಳಿದಂತೆ 93 ನರ್ಸ್‍ಗಳು, 78 ಲ್ಯಾಬ್ ಅಸಿಸ್ಟೆಂಟ್, 8 ಮಂದಿ ಫಾರ್ಮಾಸಿಸ್ಟ್ ಮತ್ತು 183 ಸ್ವಚ್ಛತಾಗಾರರ ಸೇವೆಯನ್ನು ಹೊಸ ಗುತ್ತಿಗೆದಾರ ಸಂಸ್ಥೆಯಡಿಯಲ್ಲಿ ಮುಂದುವರಿಸಬೇಕು. ಎಲ್ಲಾ ಸಿಬ್ಬಂದಿ ಸಮರ್ಪಕವಾಗಿ ಸೇವೆ ಒದಗಿಸುವುದನ್ನು ಗುತ್ತಿಗೆದಾರ ಖಾತ್ರಿಪಡಿಸಿಕೊಳ್ಳಬೇಕು ಎಂದು ಹೇಳಿದರು.

ಮುಷ್ಕರದಲ್ಲಿ ತೊಡಗಿದ್ದ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸರಕಾರದ ಹಂತದಲ್ಲಿ ಪ್ರಯತ್ನಿಸಲಾಗುತ್ತಿದೆ. ಸರಕಾರದ ನಿಯಮಾವಳಿ ಪ್ರಕಾರ ಹೊರಗುತ್ತಿಗೆದಾರರಿಗೆ ಸೌಲಭ್ಯಗಳನ್ನು ಒದಗಿಸಲಾಗುವುದು. ಸರಿಯಾದ ಸಮಯಕ್ಕೆ ಗೌರವಧನ ಪಾವತಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಗುತ್ತಿಗೆದಾರ ಸಂಸ್ಥೆಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ನಿರ್ದೇಶಕರ ಗಮನಕ್ಕೆ ತಂದು ಬಗೆಹರಿಸಲು ಪ್ರಯತ್ನಿಸಿ ಎಂದರು.

ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಮೆಗ್ಗಾನ್ ನಿರ್ದೇಶಕ ಡಾ.ಸಿದ್ದಪ್ಪ, ಜಿಲ್ಲಾ ಸರ್ಜನ್ ಡಾ.ರಘುನಂದನ್, ಡಾ.ಶ್ರೀಧರ್, ಆಡಳಿತ ಮಂಡಳಿ ಸದಸ್ಯರಾದ ದಿವಾಕರ ಶೆಟ್ಟಿ, ಡಾ.ವಾಣಿ ಕೋರಿ, ಡಾ.ಗೌತಮ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News