ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾಯ್ದೆ ತಿದ್ದುಪಡಿ: ಮತ್ತೆ ಸುಗ್ರೀವಾಜ್ಞೆಗೆ ಸಂಪುಟ ಸಭೆಯಲ್ಲಿ ತೀರ್ಮಾನ

Update: 2020-10-01 13:15 GMT

ಬೆಂಗಳೂರು, ಅ. 1: ರಾಜ್ಯದ ರೈತ-ಕಾರ್ಮಿಕರ ಮತ್ತು ವಿರೋಧ ಪಕ್ಷಗಳ ತೀವ್ರ ವಿರೋಧಕ್ಕೆ ಕಾರಣವಾಗಿರುವ `ಕರ್ನಾಟಕ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕೈಗಾರಿಕಾ ವಿವಾದಗಳ ಕಾಯ್ದೆ ತಿದ್ದುಪಡಿ' ಜಾರಿಗೆ ಮತ್ತೆ ಅಧ್ಯಾದೇಶ(ಸುಗ್ರೀವಾಜ್ಞೆ) ಹೊರಡಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ. ಭೂ ಸುಧಾರಣೆ ಮತ್ತು ಎಪಿಎಂಸಿ ತಿದ್ದುಪಡಿ ಜಾರಿಗೊಳಿಸಿ ನಾಲ್ಕು ತಿಂಗಳ ಹಿಂದೆಯಷ್ಟೇ ಅಧ್ಯಾದೇಶ ಹೊರಡಿಸಲಾಗಿತ್ತು. ಆದರೆ, ಈ ತಿದ್ದುಪಡಿ ಮಸೂದೆಗಳಿಗೆ ವಿಧಾನಸಭೆ ಅಂಗೀಕಾರ ಸಿಕ್ಕಿತ್ತು. ವಿಧಾನ ಪರಿಷತ್‍ನಲ್ಲಿ ಅಂಗೀಕಾರವಾಗಿರಲಿಲ್ಲ. ಇದೇ ವೇಳೆ ಮೇಲ್ಮನೆಯಲ್ಲಿ ತಿರಸ್ಕೃತವಾಗಿರುವ ಕಾರ್ಮಿಕ ವಿವಾದ ಮತ್ತು ಇತರೆ ಕೆಲ ಕಾನೂನುಗಳ (ತಿದ್ದುಪಡಿ) ವಿಧೇಯಕ ಸಂಬಂಧವೂ ಅಧ್ಯಾದೇಶ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಗೊತ್ತಾಗಿದೆ.

ತರಬೇತಿ ಕೇಂದ್ರಗಳ ಮೇಲ್ದರ್ಜೆಗೆ: 4,636.50 ಕೋಟಿ ರೂ.ವೆಚ್ಚದಲ್ಲಿ ಟಾಟಾ ಟೆಕ್ನಾಲಜೀಸ್ ಲಿ.ಮೂಲಕ 150 ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಸಂಪುಟ ಒಪ್ಪಿಗೆ ನೀಡಿದೆ. 2020-21ನೆ ಸಾಲಿನಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ 76 ಸಾವಿರ ಕಟ್ಟಡ ಕಾರ್ಮಿಕರಿಗೆ ಅವಶ್ಯವಾದ ಮೇಸನ್ ಟೂಲ್ ಕಿಟ್‍ಗಳನ್ನು 23.18 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಇ-ಪ್ರೊಕ್ಯೂರ್‍ಮೆಂಟ್ ಮೂಲಕ ಖರೀದಿಸಿ ವಿತರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಸರಕಾರಿ, ಅನುದಾನಿತ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಿರುವ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ವಿವಿಧ ವೃತ್ತಿಯ 8,980 ಟೂಲ್ ಕಿಟ್‍ಗಳನ್ನು ಒಟ್ಟು 11.75 ಕೋಟಿ ರೂ. ಮೊತ್ತದಲ್ಲಿ ಖರೀದಿಸಿ ಉಚಿತವಾಗಿ ವಿತರಣೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದೊಂದಿಗಿನ ರಿಯಾಯಿತಿ ಒಪ್ಪಂದದ ಅವಧಿ ರಿಯಾಯಿತಿ ವಿಸ್ತರಣೆಗೆ ಸಚಿವ ಸಂಪುಟ ಸಮ್ಮತಿಸಿದೆ.

ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ ಬೋಧಕ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ನಿಯಮಗಳು-2020ಕ್ಕೆ ಹಾಗೂ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ತಾಂತ್ರಿಕ ಶಿಕ್ಷಣ ಇಲಾಖೆ ಬೋಧಕ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ನಿಯಮಗಳು-2020ಕ್ಕೆ ಅನುಮೋದನೆ, ಬೆಂಗಳೂರು ನಗರದ ಮಾಗಡಿ ರಸ್ತೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದ ಆವರಣದಲ್ಲಿ ಡಾ.ಜಗಜೀವನ್ ರಾಮ್ ಸಂಶೋಧನೆ ಮತ್ತು ತರಬೇತಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ 98.93 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಒಪ್ಪಿಗೆ ನೀಡಿದೆ. ಕ್ರೀಡಾಪಟುಗಳಿಗೆ ಪಿಎಸ್ಸೈ ಮತ್ತು ಡಿವೈಎಸ್ಪಿ ಹುದ್ದೆಗಳಿಗೆ ನೇರ ನೇಮಕಾತಿಗೆ ಅವಕಾಶ ಕಲ್ಪಿಸುವ ವಿಶೇಷ ನಿಯಮ 2020ಕ್ಕೆ ಅನುಮೋದನೆ ನೀಡಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News