ತಂತ್ರಜ್ಞಾನ ಯುಗದಲ್ಲಿ ವಿಜ್ಞಾನ ಸಾಹಿತ್ಯ ನಮ್ಮ ದಾರಿದೀಪವಾಗಲಿ: ಟಿ.ಎಸ್.ನಾಗಾಭರಣ

Update: 2020-10-01 10:56 GMT

ಬೆಂಗಳೂರು, ಅ.1: ಇವತ್ತಿನ ಆಧುನಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ವಿಜ್ಞಾನ ಸಾಹಿತ್ಯ ನಮ್ಮ ದಾರಿ ದೀಪವಾಗಲಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದ್ದಾರೆ.

ಗುರುವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಆಯೋಜಿಸಿದ್ದ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ನಿರ್ಮಾಣ ಕೈಪಿಡಿ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇವತ್ತು ಎಲ್ಲ ಕ್ಷೇತ್ರಗಳಲ್ಲೂ ಕೃತಕ ಬುದ್ಧಿಮತ್ತೆಯೇ ಆವರಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ನಾವು ವೈಜ್ಞಾನಿಕ ಮನೋಭಾವ ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ..

ಕನ್ನಡ ಸಾಹಿತ್ಯದಲ್ಲಿ ವೈಜ್ಞಾನಿಕ ಮನೋಭಾವದ ಜತೆಯಲ್ಲಿ ರಂಜನೆ, ಮನರಂಜನೆ ಹಾಗೂ ಮನೋವಿಕಾಸವು ಸಾಗಬೇಕಾದರೆ ವಿಜ್ಞಾನ ಸಾಹಿತ್ಯಕ್ಕೆ ಒಂದು ನೆಲೆಗಟ್ಟು ಸಿದ್ಧ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ನಿರ್ಮಾಣ ಕೈಪಿಡಿ ಕೃತಿಯನ್ನು ಹೊರ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಜ್ಞಾನ ಸಾಹಿತ್ಯದ ಕೃತಿಗಳನ್ನು ಹೊರತರಲಾಗುವುದು. ಆ ಮೂಲಕ ವಿಜ್ಞಾನ ಸಾಹಿತ್ಯವು ಕನ್ನಡಿಗರ ಬದುಕನ್ನು ಹಸನು ಮಾಡುವಂತಾಗಲಿ ಎಂದು ಅವರು ಆಶಿಸಿದರು.

ಮುಂದಿನ ದಿನಗಳಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರವು ಹಿರಿಯ ವಿಜ್ಞಾನಿ ಸಿ.ಎನ್.ಆರ್.ರಾವ್ ನೇತೃತ್ವದಲ್ಲಿ ವಿಜ್ಞಾನದ ಚಿಂತನೆಗಳನ್ನು, ಆವಿಷ್ಕಾರಗಳನ್ನು ಕನ್ನಡದಲ್ಲಿ ಬರಹ ರೂಪಕ್ಕೆ ತರುವುದರ ಕುರಿತು ಕಾರ್ಯಾಗಾರಗಳನ್ನು ಆಯೋಜಿಸಲಾಗುವುದೆಂದು ಅವರು ಹೇಳಿದರು.

ಈ ವೇಳೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ಪ್ರೊ.ಅಯ್ಯಪ್ಪನ್, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಸೊಬರದ, ವಿಜ್ಞಾನ ಲೇಖಕ ಪ್ರೊ.ಅಬ್ದುಲ್ ರೆಹಮಾನ್ ಪಾಷ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News