ರಾಯಚೂರು-ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಐಎಚ್‍ಸಿಐ ಕಾರ್ಯಕ್ರಮ ಆರಂಭ: ಬಿ.ಶ್ರೀರಾಮುಲು

Update: 2020-10-01 11:49 GMT

ಬೆಂಗಳೂರು, ಅ.1: ರಾಜ್ಯ ಸರಕಾರವು ಹಿರಿಯ ನಾಗರಿಕರಿಗೆ ಉತ್ತಮ ಚಿಕಿತ್ಸೆ ಹಾಗೂ ಸೌಲಭ್ಯಗಳನ್ನು ಒದಗಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಕ್ತದೊತ್ತಡ ನಿಯಂತ್ರಣಕ್ಕಾಗಿ ಇಂದಿನಿಂದ ರಾಯಚೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಐಎಚ್‍ಸಿಐ(ಇಂಡಿಯಾ ಹೈಪರ್‍ಟೆಂಷನ್ ಕಂಟ್ರೋಲ್ ಇನಿಶಿಯೇಟಿವ್) ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಗುರುವಾರ ವಿಕಾಸಸೌಧದಲ್ಲಿ ವಿಶ್ವ ಹಿರಿಯ ನಾಗರಿಕರ ಆರೈಕೆ ದಿನ ಹಾಗೂ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ವಿವಿಧ ಸಂಸ್ಥೆಗಳನ್ನು ಹಾಗೂ ತಮ್ಮ 91ನೆ ವಯಸ್ಸಿನಲ್ಲೂ ಕೋವಿಡ್ ನಿಂದ ಗುಣಮುಖರಾಗಿ ಆರೋಗ್ಯ ದೃಢತೆ ಸಾಧಿಸಿದ ಕೆಂಗೇರಿಯ ಗುರುಬಸಪ್ಪ ಅವರನ್ನು ಸನ್ಮಾನಿಸಿದರು.

ಇನ್ನು ವಿಶ್ವ ಹೃದಯ ದಿನಾಚರಣೆ ಕುರಿತು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕವಲ್ಲದ ಹೃದಯ ಸಂಬಂಧಿ ಕಾಯಿಲೆಗಳು ಹಲವರ ಜೀವವನ್ನು ಬಲಿತೆಗೆದುಕೊಳ್ಳುತ್ತಿವೆ. ಹೀಗಾಗಿ ಮದ್ಯಪಾನ, ಧೂಮಪಾನದಂತಹ ದುಶ್ಚಟಗಳನ್ನು ತ್ಯಜಿಸುವುದರ ಜತೆಗೆ, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಹಾಗೂ ವರ್ಷಕ್ಕೊಮ್ಮೆಯಾದರೂ ರಕ್ತದೊತ್ತಡ ಮತ್ತು ಡಯಾಬಿಟಿಕ್ ಪರೀಕ್ಷೆಗಳನ್ನು ಮಾಡಿಸಬೇಕೆಂದು ಜನತೆಯಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News