ಉತ್ತರ ಪ್ರದೇಶದಲ್ಲಿ ರಾಮರಾಜ್ಯದ ಅಣಕ!

Update: 2020-10-02 05:48 GMT

ಇಂದು ಗಾಂಧಿಜಯಂತಿ. ಆಡಳಿತದಲ್ಲಿ ‘ರಾಮ ರಾಜ್ಯ’ವೆಂಬ ಮೌಲ್ಯವನ್ನು ಪ್ರಸ್ತಾಪಿಸಿ ಮುನ್ನೆಲೆಗೆ ತಂದವರು ಮಹಾತ್ಮ್ಮಾಗಾಂಧೀಜಿ. ‘ಯಾವ ನಾಡಿನಲ್ಲಿ ಮಧ್ಯ ರಾತ್ರಿ ಹೆಣ್ಣೊಬ್ಬಳು ಯಾವುದೇ ಭಯವಿಲ್ಲದೆ ಸಂಚರಿಸುತ್ತಾಳೆಯೋ ಆಗ ಅಲ್ಲಿ ರಾಮರಾಜ್ಯ ಅಸ್ತಿತ್ವಕ್ಕೆ ಬಂತೆಂದು ಭಾವಿಸಬಹುದು’ ಎನ್ನುವುದು ಗಾಂಧೀಜಿಯ ನಿಲುವಾಗಿತ್ತು. ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರವನ್ನು ಅಣಕಿಸುವಂತೆ ರಾತ್ರೋರಾತ್ರಿ ದಲಿತ ಮಹಿಳೆಯೊಬ್ಬಳು ಭೀಕರವಾಗಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದಾಳೆ ಮಾತ್ರವಲ್ಲ, ಮಧ್ಯ ರಾತ್ರಿ ಕುಟುಂಬಸ್ಥರ ವಿರೋಧಗಳ ನಡುವೆ ಪೊಲೀಸರ ನೇತೃತ್ವದಲ್ಲೇ ಆಕೆಯ ಮೃತದೇಹವನ್ನು ಸುಟ್ಟು ಹಾಕಲಾಗಿದೆ.

ಯಾವ ರಾಜ್ಯ ‘ರಾಮಮಂದಿರ ನಿರ್ಮಾಣ’ದ ಕಾರಣಕ್ಕಾಗಿ ಇಂದು ಸುದ್ದಿಯಲ್ಲಿದೆಯೋ ಆ ರಾಜ್ಯ ಇಂದು ದಲಿತ ಹೆಣ್ಣು ಮಕ್ಕಳ ಭೀಕರ ಅತ್ಯಾಚಾರಗಳಿಗಾಗಿಯೂ ಸುದ್ದಿಯಾಗುತ್ತಿದೆ. ಎಲ್ಲಕ್ಕಿಂತ ವಿಪರ್ಯಾಸವೆಂದರೆ, ದೇಶದಲ್ಲೇ ಹೆಣ್ಣಿನ ಮೇಲೆ ಅತಿ ಹೆಚ್ಚು ದೌರ್ಜನ್ಯ ನಡೆಯುತ್ತಿರುವ ರಾಜ್ಯವೆಂದು ಗುರುತಿಸಲ್ಪಟ್ಟಿರುವ ಈ ರಾಜ್ಯದ ಮುಖ್ಯಮಂತ್ರಿ ಒರ್ವ ಸ್ವಯಂಘೋಷಿತ ‘ಯೋಗಿ’. ಉತ್ತರ ಪ್ರದೇಶದ ಹಾಥರಸ್‌ನ ಅತ್ಯಾಚಾರದ ವಿರುದ್ಧ ದೇಶಾದ್ಯಂತ ಪ್ರತಿಭಟನೆಯ ಧ್ವನಿಮೊಳಗುತ್ತಿದ್ದಂತೆಯೇ ಇದೀಗ, ಪೊಲೀಸರ ಮೂಲಕ ಅವುಗಳನ್ನು ದಮನಿಸುವ ಕೆಲಸ ನಡೆಯುತ್ತಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಪೊಲೀಸರ ಬಲದಿಂದ ತಡೆಯಲಾಗಿದೆ ಮಾತ್ರವಲ್ಲ, ರಾಹುಲ್‌ಗಾಂಧಿಯ ಮೇಲೆಯೇ ಪೊಲೀಸರು ಲಾಠಿ ಬೀಸಿದ್ದಾರೆ. ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹೀಗಿರುವಾಗ ಜನಸಾಮಾನ್ಯರ ಪಾಡೇನಾಗಬೇಕು?

 ಉತ್ತರ ಪ್ರದೇಶಕ್ಕೆ ದಲಿತರ ಮೇಲಿನ ದೌರ್ಜನ್ಯ, ಅತ್ಯಾಚಾರ ಹೊಸತೇನೂ ಅಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ದಲಿತರು, ಜನಪರ ಸಂಘಟನೆಗಳು ಜಾಗೃತಗೊಂಡಿರುವುದರಿಂದ, ಈ ಹಿಂದಿನಂತೆ ದಲಿತ ದೌರ್ಜನ್ಯಗಳನ್ನು ಸದ್ದಿಲ್ಲದೆ ಮುಚ್ಚಿ ಹಾಕುವುದಕ್ಕೆ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಈ ಹಿಂದೆ ಬಿಜೆಪಿ ಮುಖಂಡನಿಂದಲೇ ಮಹಿಳೆಯ ಮೇಲೆ ಅತ್ಯಾಚಾರ ನಡೆದಿತ್ತು ಮಾತ್ರವಲ್ಲ, ಅದರ ವಿರುದ್ಧ ಧ್ವನಿಯೆತ್ತಿದ್ದ ಆಕೆಯನ್ನೂ ಆಕೆಯ ಕುಟುಂಬವನ್ನೂ ಸಂಪೂರ್ಣವಾಗಿ ಇಲ್ಲವಾಗಿಸುವ ಪ್ರಯತ್ನ ನಡೆದಿತ್ತು. ಸುದೀರ್ಘ ಹೋರಾಟದ ಬಳಿಕವಷ್ಟೇ ಆಕೆಗೆ ನ್ಯಾಯ ಸಿಕ್ಕಿತು. ಇದೀಗ ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಎರಡು ವಾರಗಳ ಹಿಂದೆ ದಲಿತ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಅದಕ್ಕಿಂತಲೂ ಭೀಕರವಾಗಿದೆ.

ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಮಾತ್ರವಲ್ಲ, ಅವಳನ್ನು ಬರ್ಬರವಾಗಿ ಹಿಂಸಿಸಲಾಗಿದೆ. ಆಕೆಯ ಮೂಳೆಗಳು ಪುಡಿಯಾಗಿವೆ. ನಾಲಗೆ ಕತ್ತರಿಸಲ್ಪಟ್ಟಿದೆ. ಸಾವುಬದುಕಿನ ನಡುವೆ ಒದ್ದಾಡುತ್ತಿದ್ದ ಆಕೆ ಮಂಗಳವಾರ ಮೃತಪಟ್ಟಿದ್ದಾಳೆ. ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ನೀಡಬೇಕಾದ ಸರಕಾರ ಎಂದಿನಂತೆ ಆರೋಪಿಗಳನ್ನು ರಕ್ಷಿಸುವ ಪ್ರಯತ್ನಕ್ಕೆ ಮುಂದಾಗಿದೆ. ಕನಿಷ್ಠ ಘಟನೆ ನಡೆದಾಕ್ಷಣ ಪೊಲೀಸರು ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದರೆ ಪ್ರಕರಣ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲವೇನೋ. ಅತ್ಯಾಚಾರಕ್ಕೆ ಸಂಬಂಧಿಸಿ ದೂರು ನೀಡಿದಾಗ ಪೊಲೀಸರು ಅದಕ್ಕೆ ಸ್ಪಂದಿಸಿರಲಿಲ್ಲ. ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಬಳಿಕವಷ್ಟೇ ಆರೋಪಿಗಳನ್ನು ಒಲ್ಲದ ಮನಸ್ಸಿನಿಂದ ಪೊಲೀಸರು ಬಂಧಿಸಿದರು. ಇದೀಗ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದೇ ಇಲ್ಲ ಎಂದು ಪೊಲೀಸ್ ಉನ್ನತಾಧಿಕಾರಿಗಳು ಸಾಧಿಸುತ್ತಿದ್ದಾರೆ. ಮರಣೋತ್ತರ ವರದಿಯೂ ಅದನ್ನೇ ಹೇಳುತ್ತಿದೆ ಎಂದು ಅವರು ಸಮರ್ಥನೆಯನ್ನು ನೀಡುತ್ತಿದ್ದಾರೆ.

ಸಾಧಾರಣವಾಗಿ, ಕೊಲೆಯೆಂದು ಅನುಮಾನವಿದ್ದರೆ ಆ ಮೃತದೇಹವನ್ನು ಪೊಲೀಸರು ಸುಟ್ಟು ಹಾಕುವುದಕ್ಕೆ ಅನುಮತಿಯನ್ನು ನೀಡುವುದಿಲ್ಲ. ಯಾಕೆಂದರೆ, ಕೆಲವೊಮ್ಮೆ ಎರಡನೆಯ ಬಾರಿ ಮರಣೋತ್ತರ ಪರೀಕ್ಷೆ ನಡೆಸುವ ಅಗತ್ಯ ಬೀಳುತ್ತದೆ. ತನಿಖೆಗೆ ಪೂರಕವಾಗಿ ಮೃತದೇಹವನ್ನು ಹೂಳುತ್ತಾರೆ.ಆದರೆ ಹಾಥರಸ್ ಪ್ರಕರಣದಲ್ಲಿ ಮೃತದೇಹವನ್ನು ಕುಟುಂಬಿಕರಿಗೆ ಹಸ್ತಾಂತರಿಸದೆ, ಪೊಲೀಸರೇ ಮುತುವರ್ಜಿ ವಹಿಸಿ ಮಧ್ಯರಾತ್ರಿ ಸುಟ್ಟು ಹಾಕಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬಿಕರನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಎಲ್ಲ ಮುಗಿದ ಬಳಿಕ, ಇದೀಗ ‘ಮರಣೋತ್ತರ ವರದಿಯಲ್ಲಿ ಅತ್ಯಾಚಾರ ದಾಖಲಾಗಿಲ್ಲ’ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಮರಣೋತ್ತರ ವರದಿಯಲ್ಲಿ ಲೋಪದೋಷಗಳಿವೆ ಎಂದು ಆರೋಪಿಸಿದರೆ, ಮಗದೊಮ್ಮೆ ಮೃತದೇಹವನ್ನು ಮೇಲೆತ್ತಿ ಪರೀಕ್ಷೆ ಮಾಡುವ ಅವಕಾಶವನ್ನು ಪೊಲೀಸರೇ ಇಲ್ಲವಾಗಿಸಿದ್ದಾರೆ. ಇದರ ಜೊತೆ ಜೊತೆಗೇ ಸಂತ್ರಸ್ತೆಯ ಊರನ್ನೇ ‘ಕೋವಿಡ್ ಸೋಂಕಿತ’ ಊರಾಗಿ ಘೋಷಿಸಿ ಯಾವುದೇ ಪ್ರತಿಭಟನಾಕಾರರನ್ನು ಅಲ್ಲಿಗೆ ಕಾಲಿರಿಸದಂತೆ ನೋಡಿಕೊಳ್ಳುವ ಸಂಚೂ ನಡೆಯುತ್ತಿದೆ.

ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳು, ಅತ್ಯಾಚಾರಗಳಿಂದ ದೇಶವೇ ಮುಖ ಮುಚ್ಚಿಕೊಳ್ಳುವಂತಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯಕ್ಕಾಗಿ ಈ ರಾಜ್ಯ ದೇಶದಲ್ಲೇ ಅಗ್ರಸ್ಥಾನವನ್ನು ಪಡೆದಿದೆ. ಆದಿತ್ಯನಾಥ್ ಮುಖ್ಯಮಂತ್ರಿಯಾದ ದಿನಗಳಿಂದ, ಉತ್ತರ ಪ್ರದೇಶ ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ತೀವ್ರ ಹಿನ್ನಡೆ ಕಂಡಿದೆ ಮಾತ್ರವಲ್ಲ, ಅಪರಾಧ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಗಳಿಂದ ‘ಜಂಗಲ್ ರಾಜ್’ ಎಂದು ಬಿರುದಾಂಕಿತವಾಗಿದೆ. ಎರಡು ವರ್ಷಗಳ ಹಿಂದೆ ಇದೇ ಉತ್ತರ ಪ್ರದೇಶದಲ್ಲಿ, ಆಕ್ಸಿಜನ್ ಸಿಲಿಂಡರ್ ಕೊರತೆಗಳಿಂದಾಗಿ ಮಕ್ಕಳ ಮಾರಣಹೋಮ ನಡೆಯಿತು. ಈ ಸಂದರ್ಭದಲ್ಲಿ ಮಕ್ಕಳ ರಕ್ಷಣೆಗೆ ಧಾವಿಸಿದ ವೈದ್ಯನನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಆತನನ್ನು ಜೈಲಿಗೆ ತಳ್ಳುವ ವಿಫಲ ಪ್ರಯತ್ನವನ್ನು ಸರಕಾರ ನಡೆಸಿತು. ಪೊಲೀಸರನ್ನು ಬಳಸಿಕೊಂಡು ಜನಸಾಮಾನ್ಯರ ಎಲ್ಲ ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ದಮನಿಸಿದ ಕುಖ್ಯಾತಿಯನ್ನು ಮುಖ್ಯಮಂತ್ರಿ ಆದಿತ್ಯನಾಥ್ ತನ್ನದಾಗಿಸಿಕೊಂಡಿದ್ದಾರೆ.

ಇಂದು ಉತ್ತರ ಪ್ರದೇಶವನ್ನು ಪರೋಕ್ಷವಾಗಿ ಆಳುತ್ತಿರುವುದು ಯೋಗಿ ಆದಿತ್ಯನಾಥ್‌ರ ಯುವವಾಹಿನಿಯ ಕಾರ್ಯಕರ್ತರು ಎಂಬ ಆರೋಪಗಳಿವೆ. ಈ ಕಾರ್ಯಕರ್ತರ ಹಿನ್ನೆಲೆಗಳನ್ನು ಅಧ್ಯಯನ ಮಾಡಿದರೆ ಸಾಕು, ಉತ್ತರ ಪ್ರದೇಶ ಯಾಕೆ ಕ್ರಿಮಿನಲ್‌ಗಳಿಂದ ತುಂಬಿ ತುಳುಕುತ್ತಿದೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಸ್ವತಃ ಆದಿತ್ಯನಾಥ್ ಅವರ ಹಿಂದಿನ ಜಾತಕಗಳನ್ನು ಬಿಡಿಸಿದರೂ ಉತ್ತರ ಪ್ರದೇಶದ ರಕ್ತಸಿಕ್ತ ವರ್ತಮಾನದ ಕಾರಣ ಹೊಳೆಯುತ್ತದೆ. ಮುಖ್ಯಮಂತ್ರಿಯಾಗುವ ಮುನ್ನ ಆದಿತ್ಯನಾಥ್ ವಿರುದ್ಧ ಹತ್ತು ಹಲವು ಕ್ರಿಮಿನಲ್ ಪ್ರಕರಣಗಳಿದ್ದವು. ಅವರು ನೇತೃತ್ವವಹಿಸಿದ್ದ ಹಿಂದೂ ಯುವ ವಾಹಿನಿ ಕ್ರಿಮಿನಲ್‌ಗಳ ಅಡ್ಡೆಯಾಗಿತ್ತು.

ಮುಖ್ಯಮಂತ್ರಿಯಾಗುವ ಮುನ್ನ, ಬಹಿರಂಗ ಸಮಾವೇಶದಲ್ಲಿ ಒಂದು ನಿರ್ದಿಷ್ಟ ಸಮುದಾಯದ ಮಹಿಳೆಯರನ್ನು ಅತ್ಯಾಚಾರ ಗೈಯಲು ಕರೆಕೊಟ್ಟ ಹಿನ್ನೆಲೆಯೂ ಇವರಿಗಿದೆ. ಯಾವುದೇ ಸಾಮಾಜಿಕ ಆಂದೋಲನಗಳ ಬಗ್ಗೆ ಅರಿವಿರದ, ಹಿಂದುತ್ವದ ಮುಖವಾಡದಲ್ಲಿ ಹೊಡಿ, ಬಡಿ, ಕೊಲ್ಲು ಎನ್ನುವ ಭಾಷಣಗಳಿಂದಲೇ ಮುಖ್ಯಮಂತ್ರಿಯಾಗುವ ಅರ್ಹತೆ ಪಡೆದವರು ಆದಿತ್ಯನಾಥ್. ಹೀಗಿರುವಾಗ ಉತ್ತರ ಪ್ರದೇಶದಲ್ಲಿ ಮಹಿಳೆಯರು, ದಲಿತರು, ದುರ್ಬಲರು ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿಯಾಗುವುದಾದರೂ ಹೇಗೆ? ಆದಿತ್ಯನಾಥ್ ಮುಖ್ಯಮಂತ್ರಿಯಾದ ಬೆನ್ನಿಗೇ ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಚಟುವಟಿಕೆಗಳು, ಮಹಿಳೆಯರ ಮೇಲಿನ ದೌರ್ಜನ್ಯಗಳು ಸಕ್ರಮಗೊಂಡಿದ್ದವು. ದುಷ್ಕರ್ಮಿಗಳು ಕೆಡುಕುಗಳನ್ನು ಎಸಗಲು ಪರವಾನಿಗೆ ಸಿಕ್ಕಂತೆ ಆಡತೊಡಗಿದ್ದರು. ಉತ್ತರ ಪ್ರದೇಶದಲ್ಲಿ ರಾಮನ ಹೆಸರಲ್ಲೇ ಸೀತೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ತಮ್ಮೆಲ್ಲ ಪಾಪಕರ್ಮಗಳನ್ನು ಆದಿತ್ಯನಾಥ್ ಹಿಂಬಾಲಕರು ರಾಮನ ಮುಖಕ್ಕೆ ಅಂಟಿಸುತ್ತಿದ್ದಾರೆ. ಮಹಾತ್ಮಾ ಗಾಂಧೀಜಿಯ ‘ರಾಮರಾಜ್ಯ’ ಉತ್ತರ ಪ್ರದೇಶದಲ್ಲಿ ಅಣಕಿಸಲ್ಪಡುತ್ತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸಂಪೂರ್ಣ ವಿಫಲಗೊಂಡಿರುವ ಆದಿತ್ಯನಾಥ್ ಅಧಿಕಾರದಿಂದ ಕೆಳಗಿಳಿಯದೇ ಇದ್ದರೆ, ಉತ್ತರಪ್ರದೇಶದಲ್ಲಿ ಸೀತೆಯರಿಗೆ ‘ಶೋಕವನ’ವೇ ಗತಿ ಎಂಬಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News