ಷರತ್ತುಗಳೊಂದಿಗೆ ಅ.15ರ ನಂತರ ಶಾಲೆ-ಕಾಲೇಜು ಆರಂಭಕ್ಕೆ ರಾಜ್ಯ ಸರಕಾರ ಅಸ್ತು

Update: 2020-10-02 17:05 GMT

ಬೆಂಗಳೂರು, ಅ.2: ರಾಜ್ಯ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಶಾಲೆಗಳು ಮತ್ತು ತರಬೇತಿ ಸಂಸ್ಥೆಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಅ.15ರ ನಂತರ ಹಂತ ಹಂತವಾಗಿ ತೀರ್ಮಾನ ತೆಗೆದುಕೊಳ್ಳಬಹುದಾಗಿದೆ. ಸಂಬಂಧಪಟ್ಟ ಶಾಲೆಯ, ಸಂಸ್ಥೆಯ ಆಡಳಿತ ಮಂಡಳಿಯೊಂದಿಗೆ ಸಮಾಲೋಚಿಸಿ ಪರಿಸ್ಥಿತಿಯ ನಿರ್ಧರಣೆಯ ಆಧಾರದ ಮೇಲೆ ಶರತ್ತುಗಳಿಗೆ ಒಳಪಟ್ಟು ತೀರ್ಮಾನವನ್ನು ತೆಗೆದುಕೊಳ್ಳಬಹುದು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ.

ಆನ್‍ಲೈನ್, ದೂರ ಶಿಕ್ಷಣ ಕಲಿಕೆಗಳಿಗೆ ಆದ್ಯತಾನುಸಾರ ಅನುಮತಿ ಮುಂದುವರಿಸಬೇಕು ಮತ್ತು ಪ್ರೋತ್ಸಾಹಿಸಬೇಕು. ಶಾಲೆಗಳು ಆನ್‍ಲೈನ್ ತರಗತಿಗಳನ್ನು ನಡೆಸುತ್ತಿದ್ದು, ಕೆಲವು ವಿದ್ಯಾರ್ಥಿಗಳು ಖುದ್ದಾಗಿ ಶಾಲೆಗೆ ಹಾಜರಾಗುವುದಕ್ಕೆ ಬದಲಾಗಿ, ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಆಯ್ಕೆ ಮಾಡಿಕೊಂಡಲ್ಲಿ ಹಾಗೆ ಮಾಡಲು ಅವರಿಗೆ ಅನುಮತಿ ನೀಡಬಹುದು ಎಂದು ಅವರು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ತಮ್ಮ ತಂದೆ, ತಾಯಿ ಮತ್ತು ಪೋಷಕರ ಲಿಖಿತ ಅನುಮತಿಯೊಂದಿಗೆ ಮಾತ್ರವೇ ಶಾಲೆಗಳಿಗೆ, ಸಂಸ್ಥೆಗಳಿಗೆ ಹಾಜರಾಗಬಹುದು. ಹಾಜರಾತಿಯನ್ನು ಕಡ್ಡಾಯಗೊಳಿಸಬಾರದು ಮತ್ತು ಅದು ಸಂಪೂರ್ಣವಾಗಿ ಪೋಷಕರ ಅನುಮತಿಯ ಮೇಲೆ ಅವಲಂಬಿತವಾಗಿರಬೇಕು ಎಂದು ವಿಜಯಭಾಸ್ಕರ್ ತಿಳಿಸಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಸಮಾಲೋಚಿಸಿ ಸ್ಥಳೀಯ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕೇಂದ್ರ ಸರಕಾರದ ಶಿಕ್ಷಣ ಮಂತ್ರಾಲಯ ಹೊರಡಿಸಲಿರುವ ಮಾದರಿ ಕಾರ್ಯ ನಿರ್ವಹಣಾ ಪ್ರಕ್ರಿಯೆ(ಎಸ್‍ಓಪಿ) ಆಧಾರದ ಮೇಲೆ ಶಾಲೆಗಳು, ಸಂಸ್ಥೆಗಳು ಪುನರಾರಂಭಕ್ಕಾಗಿ ಆರೋಗ್ಯ ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳಿಗೆ ಸಂಬಂಧಿಸಿದಂತೆ ಮಾದರಿ ಕಾರ್ಯ ನಿರ್ವಹಣಾ ಪ್ರಕ್ರಿಯೆಯನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.

ಉನ್ನತ ಶಿಕ್ಷಣ ಇಲಾಖೆಯು ಕಾಲೇಜುಗಳನ್ನು, ಸಂಸ್ಥೆಗಳನ್ನು ಪ್ರಾರಂಭಿಸುವ ಸಮಯದ ಕುರಿತು ಉನ್ನತ ಶಿಕ್ಷಣ ಇಲಾಖೆ, ಕೇಂದ್ರ ಸರಕಾರದ ಶಿಕ್ಷಣ ಮಂತ್ರಾಲಯದೊಂದಿಗೆ ಸಮಾಲೋಚಿಸಿ ಪರಿಸ್ಥಿತಿಯ ನಿರ್ಧರಣೆಯ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಬಹುದು. ಪ್ರಯೋಗಾಲಯ ಮತ್ತು ಪ್ರಾಯೋಗಿಕ ಚಟುವಟಿಕೆಗಳ ಅಗತ್ಯವಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಯನ ವಿಷಯದಲ್ಲಿನ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಮಾತ್ರ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅ.15ರಿಂದ ಈ ಕೆಳಕಂಡಂತೆ ಅನುಮತಿ ನೀಡಲಾಗುವುದು ಎಂದು ವಿಜಯಭಾಸ್ಕರ್ ತಿಳಿಸಿದ್ದಾರೆ.

ಕೇಂದ್ರ ಹಣಕಾಸು ನೆರವಿನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ, ಸಂಸ್ಥೆಯ ಮುಖ್ಯಸ್ಥರು ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಯನ ವಿಷಯದಲ್ಲಿನ ಸಂಶೋಧನಾ ವಿದ್ಯಾರ್ಥಿಗಳು(ಪಿಎಚ್‍ಡಿ) ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಯೋಗಾಲಯ ಮತ್ತು ಪ್ರಾಯೋಗಿಕ ಚಟುವಟಿಕೆಗಳಿಗಾಗಿ ಕಾಲೇಜುಗಳಿಗೆ ಹಾಜರಾಗುವುದು ಅಗತ್ಯವಿದೆ ಎಂಬುದನ್ನು ಸ್ವತಃ ಮನವರಿಕೆ ಮಾಡಿಕೊಳ್ಳಬೇಕು.

ರಾಜ್ಯ ವಿಶ್ವ ವಿದ್ಯಾಲಯಗಳು, ಖಾಸಗಿ ವಿಶ್ವವಿದ್ಯಾಲಯಗಳು ಮೊದಲಾದ ಇತರೆ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ, ರಾಜ್ಯ ಸರಕಾರದ ಉನ್ನತ ಶಿಕ್ಷಣ ಇಲಾಖೆಯು ತೆಗೆದುಕ್ಕೊಳ್ಳುವ ತೀರ್ಮಾನಕ್ಕನುಸಾರವಾಗಿ ಪ್ರಯೋಗಾಲಯ ಮತ್ತು ಪ್ರಾಯೋಗಿಕ ಚಟುವಟಿಕೆಗಳ ಅಗತ್ಯವಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಯನ ವಿಷಯದಲ್ಲಿನ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಮಾತ್ರ ಈ ಸಂಸ್ಥೆಗಳನ್ನು ತೆರೆಯಬಹುದು ಎಂದು ಅವರು ಸೂಚಿಸಿದ್ದಾರೆ.

ಕ್ರೀಡಾಪಟುಗಳ ತರಬೇತಿಗಾಗಿ ಬಳಸುತ್ತಿರುವ ಈಜುಕೊಳಗಳನ್ನು ಅ.15ರಿಂದ ಜಾರಿಗೆ ಬರುವಂತೆ ತೆರೆಯಲು ಅನುಮತಿಸಲಾಗುವುದು. ಕಂಟೈನ್‍ಮೆಂಟ್ ವಲಯಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಮಾತ್ರವೇ ಸಿನಿಮಾ ಮಂದಿರಗಳು, ರಂಗಮಂದಿರಗಳು, ಮಲ್ಟಿಪ್ಲೆಕ್ಸ್ ಗಳನ್ನು ಅ.15ರಿಂದ ಜಾರಿಗೆ ಬರುವಂತೆ ಅವುಗಳ ಒಟ್ಟು ಆಸನ ಸಾಮರ್ಥ್ಯದ ಶೇ.50ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಿ ತೆರೆಯಲು ಅನುಮತಿ ನೀಡಲಾಗುವುದು.

ಕಂಟೈನ್‍ಮೆಂಟ್ ವಲಯಗಳಿಗೆ ಸೀಮಿತವಾಗಿ ಅ.31ರವರೆಗೆ ಲಾಕ್‍ಡೌನ್ ಮುಂದುವರಿಯಲಿದೆ. ಈ ಕಂಟೈನ್‍ಮೆಂಟ್ ವಲಯಗಳನ್ನು ಬಿಬಿಎಂಪಿ ಆಯುಕ್ತರು ಮತ್ತು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳು ತಮ್ಮ ವೆಬ್‍ಸೈಟ್‍ಗಳಲ್ಲಿ ಅಧಿಸೂಚಿಸಿ, ಈ ಕುರಿತ ಮಾಹಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯಕ್ಕೆ ತಿಳಿಸಬೇಕು.

ಬಿಬಿಎಂಪಿ, ಜಿಲ್ಲಾ ಪ್ರಾಧಿಕಾರಿಗಳು, ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದೊಂದಿಗೆ ಪೂರ್ವ ಸಮಾಲೋಚನೆ ನಡೆಸದೆ, ಕಂಟೈನ್‍ಮೆಂಟ್ ವಲಯಗಳ ಹೊರಗೆ ಯಾವುದೇ ಸ್ಥಳೀಯ ಲಾಕ್‍ಡೌನ್ ಅನ್ನು ವಿಧಿಸುವಂತಿಲ್ಲ. ರಾಜ್ಯದೊಳಗೆ ಮತ್ತು ರಾಜ್ಯದ ಹೊರಗೆ ವ್ಯಕ್ತಿಗಳ ಓಡಾಟಕ್ಕೆ ಹಾಗೂ ಸರಕುಗಳ ಸಾಗಣೆಗೆ ಯಾವುದೆ ನಿರ್ಬಂಧವಿಲ್ಲ. ಇದಕ್ಕಾಗಿ ಪ್ರತ್ಯೇಕ ಅನುಮತಿ, ಇ-ಪಾಸ್ ಆಗತ್ಯವಿಲ್ಲ ಎಂದು ಮುಖ್ಯ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News