ಚಿಕ್ಕಮಗಳೂರು: ಬೇಡಿಕೆಗಳ ಈಡೇರಿಕೆಗಾಗಿ ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಧರಣಿ

Update: 2020-10-04 17:08 GMT

ಚಿಕ್ಕಮಗಳೂರು, ಅ.4: ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ನೀಡುವುದರೊಂದಿಗೆ ಹೊರಗುತ್ತಿಗೆ ಪದ್ಧತಿಯನ್ನು ಕೈಬಿಡುವಂತೆ ಒತ್ತಾಯಿಸಿ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಕಳೆದ 10 ದಿನಗಳಿಂದ ನಡೆಸುತ್ತಿರುವ ಹೋರಾಟ ರವಿವಾರಕ್ಕೆ 11ನೇ ದಿನಕ್ಕೆ ಕಾಲಿಟ್ಟಿದ್ದು. ಸರಕಾರ ನೌಕರರ ಬೇಡಿಕೆಗೆ ಕ್ಯಾರೇ ಎನ್ನದಿರುವುದರಿಂದ ಜಿಲ್ಲಾ, ತಾಲೂಕು ಕೇಂದ್ರಗಳ ಆಸ್ಪತ್ರೆ ಹಾಗೂ ಪ್ರಾಥಮಿಕ ಆಸ್ಪತ್ರೆಗಳಲ್ಲಿರುವ ವಿವಿಧ ಕೋವಿಡ್ ಆಸ್ಪತ್ರೆಗಳು ಅವ್ಯಸ್ಥೆಯ ಆಗಾರವಾಗಿ ಮಾರ್ಪಟ್ಟಿದೆ.

ಜಿಲ್ಲಾದ್ಯಂತ ಸುಮಾರು 1,200ಕ್ಕೂ ಹೆಚ್ಚು ಜನರು ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೋನ ವಾರಿಯರ್ಸ್‍ಗಳಾಗಿರುವ ಈ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಕಳೆದ 11 ದಿನಗಳಿಂದ ಆರೋಗ್ಯ ಇಲಾಖೆಯ ಕೋವಿಡ್ ನಿರ್ವಹಣೆ ಕೆಲಸಕ್ಕೆ ಅಸಹಕಾರ ನೀಡುತ್ತಿರುವುದರಿಂದ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ನರ್ಸ್, ಡಾಟ ಎಂಟ್ರಿ ಸಿಬ್ಬಂದಿ, ಡಿಗ್ರೂಪ್ ನೌಕರರಿಲ್ಲದೇ ಸಮಸ್ಯೆ ಉಂಟಾಗಿದೆ. ಸರಕಾರ ಸಮಸ್ಯೆ ಪರಿಹಾರಕ್ಕೆ ಮುಂದಾಗದಿರುವುದರಿಂದ ಆಸ್ಪತ್ರೆಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.

ಕೋವಿಡ್-19 ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದೇವೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಸೇವಾ ಭದ್ರತೆ ನೀಡಬೇಕು. ಹೊರ ಗುತ್ತಿಗೆ ಪದ್ಧತಿ ರದ್ಧುಪಡಿಸಬೇಕೆಂಬ ತಮ್ಮ ಬೇಡಿಕೆಯನ್ನು ಸರಕಾರದ ಮುಂದಿಟ್ಟು ವೈದ್ಯರು, ಡಾಟಾ ಎಂಟ್ರಿ ಆಪರೇಟರ್ಸ್, ನರ್ಸ್‍ಗಳು, ಲ್ಯಾನ್ ಟೆಕ್ನಿಷಿಯನ್ಸ್, ಡಿ ದರ್ಜೆ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಹೋರಾಟಕ್ಕೆ ಮುಂದಾಗಿರುವ ಪರಿಣಾಮ ಚಿಕ್ಕಮಗಳೂರು ನಗರದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಅನೇಕ ಸಮಸ್ಯೆಗಳು ಎದುರಾಗಿವೆ.

ನವಜಾತ ಶಿಶು ನಿಗಾಘಟಕದಲ್ಲಿನ ಬಹುತೇಕ ಸಿಬ್ಬಂದಿ ತರಬೇತಿ ಪಡೆದ ಹೊರಗುತ್ತಿಗೆ ನೌಕರರೇ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ತವ್ಯ ತ್ಯಜಿಸಿ ಹೋರಾಟಕ್ಕೆ ಮುಂದಾಗಿರುವುದರಿಂದ ನವಜಾತ ಶಿಶು ನಿಗಾ ಘಟಕದಲ್ಲಿ ಆರೋಗ್ಯ ಸಿಬ್ಬಂದಿಯ ಕೊರತೆ ಎದುರಾಗಿದೆ. ಇಲಾಖಾಧಿಕಾರಿಗಳು ತುರ್ತು ಸೇವೆಗೆ ತರಬೇತಿ ನೀಡಿ ಒಬ್ಬರು, ಇಬ್ಬರು ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡಿದ್ದಾರೆ. ಈ ಸಿಬ್ಬಂದಿ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ. ವೈದ್ಯರ ಕೊರತೆಯಿಂದಾಗಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದಂತಾಗಿದೆ. ಈ ಅವ್ಯವಸ್ಥೆಯಿಂದಾಗಿ ಅನೇಕ ರೋಗಿಗಳು ಖಾಸಗಿ ಆಸ್ಪತ್ರೆಯ ಮೊರೆ ಹೋಗುತ್ತಿದ್ದಾರೆ.

ಡಾಟಾ ಎಂಟ್ರಿ ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗಿರುವುದರಿಂದ ಐಸಿಟಿಸಿ, ಎನ್‍ವಿಬಿಡಿಸಿಪಿ, ಐಡಿಎಸ್‍ಪಿ, ಎನ್‍ಎಫ್‍ಡಿಎಸ್, ಎನ್‍ಸಿಡಿ ನ್ಯಾಷನ್‍ಲ್ ರಿಪೋರ್ಟ್‍ಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲಾಸ್ಪತ್ರೆಯಲ್ಲಿ 18 ಜನ ಡಾಟಾ ಎಂಟ್ರಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸದ್ಯ 8 ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ವೈರಾಜಿಕಲ್ ಪ್ರಯೋಗಾಲಯದಲ್ಲಿ ಕೇವಲ ಇಬ್ಬರು ಟೆಕ್ನಿಷಿಯನ್ ಮಾತ್ರ ಕೆಲಸ ನಿರ್ವಹಿಸುತ್ತಿದ್ದು, ದಿನಕ್ಕೆ 500 ರಿಂದ 600 ಕೊರೋನ ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸುವ ಪರಿಸ್ಥಿತಿ ಇದೆ. ಡಾಟಾ ಎಂಟ್ರಿ ಸಿಬ್ಬಂದಿ ಕೊರತೆಯಿಂದ  ರೋಗಿಯ ದಾಖಲಾತಿ, ಜನನ, ಮರಣ ಪ್ರಮಾಣ ಪತ್ರ, ಆಸ್ಪತ್ರೆಯಿಂದ ರೋಗಿಯ ಬಿಡುಗಡೆ ಸೇರಿದಂತೆ ಅನೇಕ ಸಮಸ್ಯೆ ಗಳಾಗುತ್ತಿದ್ದು, ಇರುವ ಸಿಬ್ಬಂದಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನೂ ಡಿ ಗ್ರೂಪ್ ನೌಕರರು ಪ್ರತಿಭಟನೆ ನಿರತರಾಗಿರುವುದರಿಂದ ಆಸ್ಪತ್ರೆಗಳಲ್ಲಿ ಸ್ವಚ್ಛತೆಗೂ ಆದ್ಯತೆ ನೀಡಲು ಸಾಧ್ಯವಾಗದಂತಾಗಿದೆ.

ಇಂತಹ ದಾರುಣ ಪರಿಸ್ಥಿತಿಯಲ್ಲೂ ಸರಕಾರ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಮಸ್ಯೆ ಪರಿಹರಿಸಲು ಮುಂದಾಗಿಲ್ಲ. ನೌಕರರು ತಮ್ಮ ಪಟ್ಟನ್ನೂ ಸಡಿಲಿಸದ ಪರಿಣಾಮ ಸರಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆಯಾಗಿದ್ದು, ಸೂಕ್ತ ಸಮಯಕ್ಕೆ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ, ಇರುವ ಸಿಬ್ಬಂದಿ ಮೇಲೆ ಹೆಚ್ಚಿನ ಕಾರ್ಯ ಒತ್ತಡ ಹೇರುತ್ತಿರುವುದರಿಂದ ಸಿಬ್ಬಂದಿ ಒತ್ತಡದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ. ಸರಕಾರ ಶೀಘ್ರದಲ್ಲಿ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಮಸ್ಯೆ ಪರಿಹರಿಸದಿದ್ದಲ್ಲಿ ಜಿಲ್ಲಾದ್ಯಂತ ಸರಕಾರಿ ಆಸ್ಪತ್ರೆಗಳು ಹಾಗೂ ಅಲ್ಲಿ ಚಿಕಿತ್ಸೆಗೆ ದಾಖಲಾಗಿವುರು ಕೊರೋನ ಸೋಂಕಿತರ ಸ್ಥಿತಿ, ನವಜಾತ ಮಕ್ಕಳ ಸ್ಥಿತಿ ಯಾತನಾಮಯವಾಗುವುದರಲ್ಲಿ ಅನುಮಾನವಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಕರ್ತವ್ಯಕ್ಕೆ ಹಾಜರಾಗಲು ನೋಟಿಸ್: ಈ ಮಧ್ಯೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಆರೋಗ್ಯ ಇಲಾಖೆಯಿಂದ ನೋಟಿಸ್ ನಿಡಲಾಗಿದೆ. ಕೋವಿಡ್-19 ತುರ್ತು ಸಂದರ್ಭವಿದ್ದು, ಕೋವಿಡ್-19 ವರದಿ ಸಲ್ಲಿಕೆ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪ್ರಗತಿಗೆ ತೊಂದರೆಯಾಗುತ್ತಿದೆ. ಮುಂದಿನ 24ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗಬೇಕು. ಹಾಜರಾಗದಿದ್ದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ನಿಯಮದಡಿಯಲ್ಲಿ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಿಂದ ಪ್ರತಿಭಟನಾ ನಿರತರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News