​ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ, ಹಲ್ಲೆ

Update: 2020-10-05 03:42 GMT

ಗುರುಗ್ರಾಮ, ಅ.5: ಹತ್ರಸ್ ಸಾಮೂಹಿಕ ಅತ್ಯಾಚಾರ, ಯುವತಿಯ ಸಾವಿನ ಘಟನೆ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ 25ರ ಮಹಿಳೆ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿ ಹಲ್ಲೆ ನಡೆಸಿದ ಮತ್ತೊಂದು ಪ್ರಕರಣ ಡಿಎಲ್‌ಎಫ್ 2ನೇ ಹಂತದ ರಿಯಲ್ ಎಸ್ಟೇಟ್ ಡೀಲರ್ ಕಚೇರಿಯಲ್ಲಿ ರವಿವಾರ ನಡೆದಿರುವುದು ವರದಿಯಾಗಿದೆ.

ಸಂತ್ರಸ್ತ ಮಹಿಳೆಯ ತಲೆಗೆ ತೀವ್ರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯ ಆರೋಗ್ಯಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆಹಾರ ವಿತರಣಾ ಸೇವೆ ಕಂಪೆನಿಯ ಮೂವರು ಸೇರಿದಂತೆ ನಾಲ್ಕು ಮಂದಿಯನ್ನು ಪ್ರಕರಣದ ಸಂಬಂಧ ಬಂಧಿಸಲಾಗಿದೆ. ದಿಲ್ಲಿಯಲ್ಲಿ ವಾಸವಿದ್ದ ಈ ಮಹಿಳೆ ರಾತ್ರಿ 1:30ರ ಸುಮಾರಿಗೆ ಸಿಕಂದರಪುರ ಮೆಟ್ರೋ ಸ್ಟೇಷನ್ ಬಳಿ ನಿಂತಿದ್ದಾಗ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಪರಿಚಯವಾಗಿದ್ದು, ಆತನ ಬೈಕ್‌ನಲ್ಲಿ ಡಿಎಲ್‌ಎಫ್ 2ನೇ ಹಂತದಲ್ಲಿದ್ದ ಆತನ ಕಚೇರಿಗೆ ಹೋಗಲು ಮಹಿಳೆ ಒಪ್ಪಿದರು. ಆ ಕಚೇರಿಯಲ್ಲಿ ಆತ ಸಹಾಯಕ ಹಾಗೂ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ.

ಮಹಿಳೆ ನೀಡಿದ ಹೇಳಿಕೆ ಪ್ರಕಾರ, ಅವರು ಕಚೇರಿಗೆ ತಲುಪಿದಾಗ ಆರೋಪಿಯ ಮೂವರು ಸ್ನೇಹಿತರು ಅಲ್ಲಿದ್ದರು. ಮುಜುಗರ ಅನುಭವಿಸಿದ ಮಹಿಳೆ ಅಲ್ಲಿಂದ ಹೊರಡಲು ಮುಂದಾದಾಗ ಆರೋಪಿಗಳು ಬಲವಂತವಾಗಿ ಆಕೆಯನ್ನು ತಡೆದು ಹಲ್ಲೆ ನಡೆಸಿದರು. ಮಹಿಳೆಯ ತೀವ್ರ ಪ್ರತಿರೋಧದ ನಡುವೆಯೂ ನಾಲ್ಕು ಮಂದಿ ಅತ್ಯಾಚಾರ ಎಸಗಿ ಹಲ್ಲೆ ನಡೆಸಿದರು ಎಂದು ಸಂತ್ರಸ್ತೆಯ ಹೇಳಿಕೆಯನ್ನು ಉಲ್ಲೇಖಿಸಿ ಪೊಲೀಸರು ಹೇಳಿದ್ದಾರೆ. ಮಹಿಳೆಯನ್ನು ಗುದ್ದಿ, ತುಳಿದು, ಹಲವು ಬಾರಿ ಗೋಡೆ ಹಾಗೂ ನೆಲಕ್ಕೆ ತಲೆಯನ್ನು ಚಚ್ಚಿದ್ದಾರೆ ಎಂದು ಹೇಳಲಾಗಿದೆ.

ಕೃತ್ಯ ಎಸಗಿದ ಬಳಿಕ ದುಷ್ಕರ್ಮಿಗಳು ರಸ್ತೆ ಪಕ್ಕ ಆಕೆಯನ್ನು ಬಿಟ್ಟು, ಕಚೇರಿಗೆ ಬೀಗ ಜಡಿದು ಮೋಟರ್ ‌ಸೈಕಲ್‌ನಲ್ಲಿ ಪರಾರಿಯಾದರು. ತೀವ್ರ ರಕ್ತಸ್ರಾವದಿಂದ ಬಳಲಿದ್ದ ಸಂತ್ರಸ್ತೆಯನ್ನು ನೋಡಿದ ಖಾಸಗಿ ಭದ್ರತಾ ಸಿಬ್ಬಂದಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಡಿಎಲ್‌ಎಫ್ ಎಸಿಪಿ ಕರಣ್ ಗೋಯಲ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News