ಸಿ.ಟಿ.ರವಿಗೆ ಕರ್ನಾಟಕ ಸೇರಿ ಐದು ರಾಜ್ಯಗಳ ಉಸ್ತುವಾರಿ ನೀಡಿದ ಬಿಜೆಪಿ ಹೈಕಮಾಂಡ್

Update: 2020-10-07 12:22 GMT

ಬೆಂಗಳೂರು, ಅ. 7: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರಿಗೆ ಬಿಜೆಪಿ ವರಿಷ್ಠರು ಕರ್ನಾಟಕ ಸೇರಿದಂತೆ ಐದು ರಾಜ್ಯಗಳ ಉಸ್ತುವಾರಿಯನ್ನು ನೀಡಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.

ಹೊಸದಿಲ್ಲಿಯಲ್ಲಿ ನಿನ್ನೆ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕೆಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದ್ದು, ಸಚಿವ ಸಿ.ಟಿ.ರವಿ ಅವರಿಗೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಆಂಧ್ರ, ತೆಲಂಗಾಣ, ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ ಹಾಗೂ ಲಕ್ಷದ್ವೀಪಗಳ ಉಸ್ತುವಾರಿಯನ್ನು ವಹಿಸಲಾಗಿದೆ ಎಂದು ಗೊತ್ತಾಗಿದೆ.

ಬಿಹಾರ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಅಧಿಕೃತವಾಗಿ ಘೋಷಣೆಯಾಗಲಿದ್ದು, ಕರ್ನಾಟಕ ಉಸ್ತುವಾರಿಯಾಗಿದ್ದ ಮುರುಳೀಧರ್ ರಾವ್ ಅವರ ಸ್ಥಾನ ಪಲ್ಲಟವಾಗುವ ಸಾಧ್ಯತೆಗಳಿವೆ. ಸಾಮಾನ್ಯವಾಗಿ ಬಿಜೆಪಿಯಲ್ಲಿ ರಾಜ್ಯ ಉಸ್ತುವಾರಿಗಳನ್ನು ಹೊರ ರಾಜ್ಯದವರನ್ನೇ ಈವರೆಗೂ ನೇಮಕ ಮಾಡಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ರಾಜ್ಯದವರನ್ನೇ ನೇಮಿಸಿರುವುದು ವಿಶೇಷ. ಈ ಮೊದಲು ಅರುಣ್ ಜೇಟ್ಲಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಅನೇಕರು ಕರ್ನಾಟಕ ಉಸ್ತುವಾರಿಗಳಾಗಿದ್ದರು.

ಇದೀಗ ಸಿ.ಟಿ.ರವಿ ಅವರಿಗೆ ರಾಜ್ಯ ಉಸ್ತುವಾರಿ ಸೇರಿ ಐದು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಉಸ್ತುವಾರಿಯನ್ನು ನೀಡಿರುವುದು ಅವರ ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಈ ಬಗ್ಗೆ ಪಕ್ಷದಿಂದ ಅಧಿಕೃತವಾಗಿ ಆದೇಶ ಹೊರಬೀಳದಿದ್ದರೂ ಶೀಘ್ರದಲ್ಲೇ ಪ್ರಕಟವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಹಿಂದೆ ಸಿ.ಟಿ.ರವಿ ತಮಿಳುನಾಡು ಮತ್ತು ಪುದುಚೇರಿ ಉಸ್ತುವಾರಿಯಾಗಿ ಕೆಲಸ ಮಾಡಿದ್ದರು.

ಸಿ.ಟಿ.ರವಿ ಏಕಕಾಲಕ್ಕೆ ಐದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಉಸ್ತುವಾರಿಯಾಗಿ ನೇಮಕವಾಗಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಹಿನ್ನೆಲೆಯಲ್ಲಿ ಕಳೆದ ವಾರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಈವರೆಗೂ ಸಿ.ಟಿ.ರವಿ ಅವರ ರಾಜೀನಾಮೆಯನ್ನು ಅಂಗೀಕರಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News