ಠಾಣೆಗೆ ಕರೆ ತಂದಿದ್ದ ವ್ಯಕ್ತಿ ಅನುಮಾನಾಸ್ಪದ ಸಾವು ಪ್ರಕರಣ: ಪಿಎಸ್‍ಐ ಸೇರಿ ನಾಲ್ವರ ಅಮಾನತು

Update: 2020-10-07 13:29 GMT

ದಾವಣಗೆರೆ, ಅ.7: ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ವಿಚಾರಣೆಗೆಂದು ಠಾಣೆಗೆ ಕರೆ ತಂದಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆ ಪಿಎಸ್‍ಐ ಸೇರಿದಂತೆ ನಾಲ್ವರನ್ನು ಅಮಾನತು ಮಾಡಲಾಗಿದ್ದು, ಮೂವರನ್ನು ದಸ್ತಗಿರಿ ಮಾಡಲಾಗಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

ಮಾಯಾಕೊಂಡದಲ್ಲಿ ವಿಠ್ಠಲಾಪುರ ಗ್ರಾಮಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಡಿವೈಎಸ್‍ಪಿ ಹಂತದ ಅಧಿಕಾರಿಗಳು ಈ ಪ್ರಕರಣದ ತನಿಖೆ ನಡೆಸಲಿದ್ದಾರೆ. ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಅಲ್ಲದೇ ಸಮಾಜ ಕಲ್ಯಾಣ ಇಲಾಖೆ ಮತ್ತು ರಾಜ್ಯ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ ಇದರ ವರದಿ ನೀಡಲಾಗುವುದು ಎಂದು ಹೇಳಿದರು. 

4 ಲಕ್ಷ ರೂ. ಪರಿಹಾರ ವಿತರಣೆ

ಮಾಯಕೊಂಡ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಮೃತಪಟ್ಟ ವಿಠ್ಠಲಾಪುರ ಗ್ರಾಮದ ಮರುಳಸಿದ್ದಪ್ಪ ಅವರ ಪತ್ನಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು 4.12 ಲಕ್ಷದ ಚೆಕ್ ವಿತರಣೆ ಮಾಡಿದರು. ನಂತರ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಳು ಸಿದ್ದಪ್ಪ ಅವರು ಮೃತಪಟ್ಟಿದ್ದು, ಈ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಇದುವರೆಗೂ ನಾಲ್ವರನ್ನು ಅಮಾನುತು ಮಾಡಿ, ಮೂವರನ್ನು ದಸ್ತಗಿರಿ ಮಾಡಲಾಗಿದೆ ಎಂದರು.

ಎಫ್‍ಎಸ್‍ಎಲ್ ವರದಿ ಆಧಾರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇಂತಹ ಪ್ರಕರಣಗಳಲ್ಲಿ 8.25 ಲಕ್ಷ ಪರಿಹಾರ ನೀಡಲಾಗುವುದು. ಮೊದಲ ಹಂತದಲ್ಲಿ 4.12 ಲಕ್ಷ ರೂ. ಹಣ ವಿತರಿಸಲಾಗಿದೆ. ಎಡಿಜಿಪಿ, ಐಜಿಪಿ ಮತ್ತು ಎಸ್ಪಿ ಹಂತದಲ್ಲಿ ನಿಷ್ಪಕ್ಷ ತನಿಖೆ ನಡೆಸಲಿದ್ದಾರೆ. ಇಂತಹ ಪ್ರಕರಣದಲ್ಲಿ ಮೃದು ಧೋರಣೆ ಸಲ್ಲದು. ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕುಟುಂಬಕ್ಕೆ ಸರಕಾರದ ಎಲ್ಲ ಸೌಲಭ್ಯಗಳು ದೊರಕಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. 

ಜಿಲ್ಲಾಧಿಕಾರಿಗಳು ಪರಿಹಾರ ವಿತರಿಸುವ ವೇಳೆ ಮೃತನ ಪತ್ನಿ ನಮಗೆ ಹಣ ಬೇಡ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದರು. 

ಘಟನೆ ವಿವರ: ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಮಾಯಕೊಂಡ ಸಮೀಪದ ವಿಠ್ಠಲಾಪುರ ಗ್ರಾಮದ ಮರುಳಸಿದ್ದಪ್ಪ ಎಂಬವರ ವಿರುದ್ಧ ಅವರ ಹೆಂಡತಿಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಮಾಯಕೊಂಡ ಠಾಣೆಯ ಪೊಲೀಸರು ಸಮೀಪದ ಹುಚ್ಚವ್ವನಹಳ್ಳಿಯಲ್ಲಿ ಇದ್ದ ಮರುಳಸಿದ್ದಪ್ಪರನ್ನು ಠಾಣೆಗೆ ಕರೆತಂದಿದ್ದರು. ಅದರೆ ಮಂಗಳವಾರ ಮರುಳಸಿದ್ದಪ್ಪ ಅವರ ಶವ ರೈಲ್ವೆ ಗೇಟಿನ ಬಳಿ ಇರುವ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಕುಟುಂಬ ಸದಸ್ಯರು ಲಾಕಪ್ ಡೆತ್ ಎಂದು ಆರೋಪಿಸಿ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.

ಮರುಳಸಿದ್ದಪ್ಪ ರಾತ್ರಿ ವೇಳೆ ಠಾಣೆಯಲ್ಲೇ ಇದ್ದು, ಎದೆನೋವು ಕಾಣಿಸಿಕೊಂಡಿತು ಎಂದಿದ್ದರು. ಹೀಗಾಗಿ ಅವರನ್ನು ಹೊರಗೆ ಬಿಟ್ಟಿದ್ದು, ಹೃದಯಾಘಾತದಿಂದ ಸತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News