ರಾಷ್ಟ್ರೀಯ ನವೋದ್ಯಮ ಸ್ಪರ್ಧೆ-2020 ಪ್ರಶಸ್ತಿ: 15 ಪ್ರಶಸ್ತಿಗಳೊಂದಿಗೆ ಕರ್ನಾಟಕಕ್ಕೆ ಅಗ್ರಸ್ಥಾನ

Update: 2020-10-07 13:05 GMT

ಬೆಂಗಳೂರು, ಅ.7: ರಾಷ್ಟ್ರೀಯ ನವೋದ್ಯಮ ಪ್ರಶಸ್ತಿಗಳಿಗಾಗಿ ‘ನವೋದ್ಯಮ ಭಾರತ’ ವತಿಯಿಂದ ಇತ್ತೀಚೆಗೆ ನಡೆಸಲಾಗಿದ್ದ ಸ್ಪರ್ಧೆಗೆ ರಾಜ್ಯದಿಂದ ಅತ್ಯಧಿಕ ಅರ್ಜಿಗಳು ಸಲ್ಲಿಕೆಯಾಗುವ ಜೊತೆಗೆ ಇಲ್ಲಿನ ಹಲವಾರು ನವೋದ್ಯಮಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿವೆ ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಿಗೆ ಪಾತ್ರವಾಗಿರುವ 36 ನವೋದ್ಯಮಗಳ ಪೈಕಿ ನಮ್ಮ ರಾಜ್ಯದ 14 ನವೋದ್ಯಮಗಳು ಹಾಗೂ 1 ವೇಗವರ್ಧಕ (ಆಕ್ಸಲರೇಟರ್) ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿವೆ. ಈ ಸ್ಪರ್ಧೆಗೆ ದೇಶದಾದ್ಯಂತ ಇರುವ ನವೋದ್ಯಮಗಳಿಂದ ಸಲ್ಲಿಕೆಯಾಗಿದ್ದ 1641 ಅರ್ಜಿಗಳ ಪೈಕಿ 418 ಅರ್ಜಿಗಳು ನಮ್ಮ ರಾಜ್ಯದಿಂದ ಸಲ್ಲಿಕೆಯಾಗಿದ್ದವು. ಇದು ಒಟ್ಟಾರೆ ಸಲ್ಲಿಕೆಯಾದ ಅರ್ಜಿಗಳ ಪೈಕಿ ಶೇ.26ರಷ್ಟಿರುವುದು ಗಮನಾರ್ಹ ಅಂಶ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ.

ಕೃಷಿ, ಶಿಕ್ಷಣ, ಇಂಧನ, ಉದ್ದಿಮೆ ತಾಂತ್ರಿಕತೆಗಳು, ಆರೋಗ್ಯ, ಉದ್ಯಮ 4.0, ಬಾಹ್ಯಾಕಾಶ, ಪ್ರವಾಸೋದ್ಯಮ, ನಗರ ಸೇವೆಗಳು ಸೇರಿದಂತೆ ಇತ್ಯಾದಿ ವಲಯಗಳಲ್ಲಿ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈಗ ರಾಷ್ಟ್ರೀಯ ಮಟ್ಟದಲ್ಲಿ ವಿಜೇತಗೊಂಡಿರುವ 14 ಉದ್ಯಮಗಳ ಪೈಕಿ 11 ನವೋದ್ಯಮಗಳು ಕರ್ನಾಟಕ ನವೋದ್ಯಮ ಕೋಶದಿಂದ ನಡೆಸಲಾಗಿದ್ದ ಎಲಿವೇಟ್/ಐಡಿಯಾ 2ಪಿಒಸಿ ಅನುದಾನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದು ಜಯಗಳಿಸಿದ್ದವು ಎಂದು ಅವರು ವಿವರಿಸಿದ್ದಾರೆ.

ರಾಷ್ಟ್ರೀಯ ಆಹ್ವಾನಕ್ಕೆ ಸ್ಪಂದಿಸಿ ರಾಜ್ಯ ಸರಕಾರದ ಪರಿಪೋಷಕಗಳು (ಇನ್ ಕ್ಯುಬೇಟರ್ಸ್), ಹೊಸ ತಲೆಮಾರಿನ ಪರಿಪೋಷಣಾ ಜಾಲ (ನೈನ್) ಸಂಸ್ಥೆಗಳು, ಉತ್ಕೃಷ್ಠತಾ ಕೇಂದ್ರಗಳು ಮತ್ತು ತಾಂತ್ರಿಕ ವ್ಯಾಪಾರೋದ್ಯಮ ಪರಿಪೋಷಕಗಳ (ಟಿಬಿಐ) ಮೂಲಕ ವೆಬಿನಾರ್ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ರಾಜ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿ ಸಲ್ಲಿಸಲು ಕಾರಣವಾಯಿತು ಎಂದು ಅಶ್ವತ್ಥ ನಾರಾಯಣ ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ವಿಜೇತಗೊಂಡ ರಾಜ್ಯದ ನವೋದ್ಯಮಗಳ ಪಟ್ಟಿ 

ಕೃಷಿ ವಿಭಾಗ: ಸಲ್ಲಿಕೆಯಾಗಿದ್ದ ಅರ್ಜಿಗಳು 36 (ಅತ್ಯಧಿಕ)-ಮಂಡ್ಯ ಆಗ್ರ್ಯಾನಿಕ್ಸ್ (ಕಾರ್ಯ ಕ್ಷೇತ್ರ- ಕೃಷಿ ವಲಯದಲ್ಲಿ ರೈತರ ತೊಡಗಿಸಿಕೊಳ್ಳುವಿಕೆ ಹಾಗೂ ಶಿಕ್ಷಣ). ಶಿಕ್ಷಣ ವಿಭಾಗ: ಸ್ಪರ್ಧಿಸಿದ್ದ ಆಪ್‍ಗಳು 40 (ಅತ್ಯಧಿಕ)- ರೋಬೋಟ್  ಗುರು, ಇಂಧನ ವಿಭಾಗ: ಸ್ಪರ್ಧಿಸಿದ್ದ ಆಪ್‍ಗಳು 26 (ಅತ್ಯಧಿಕ)-ಎಸ್ಯಾ ಸಾಫ್ಟ್.

ಆರೋಗ್ಯ ವಿಭಾಗ: ಸ್ಪರ್ಧಿಸಿದ್ದ ಆಪ್‍ಗಳು 69 (ಅತ್ಯಧಿಕ)-ನಿರಮಯಿ ಹೆಲ್ತ್ ಅನಲಿಟಿಕ್ಸ್, ಬೊನಯು (ಜುಬ್‍ಇನ್) ಲೈಫ್ ಸೈನ್ಸಸ್, ಇನೌಮೇಷನ್ ಮೆಡಿಕಲ್ ಡಿವೈಸಸ್. ಉದ್ಯಮ 4.0 ವಿಭಾಗ: ಸ್ಪರ್ಧಿಸಿದ್ದ ಆಪ್‍ಗಳು 56 (ಅತ್ಯಧಿಕ)-ಅಪ್ ಟೈಮ್ ಎಐ, ಮಿನಿಯನ್  ಲ್ಯಾಬ್ಸ್, ಸ್ಕೇಪಿಕ್ ಇನ್ನೊವೇಷನ್ಸ್ ಪ್ರೈವೇಟ್ ಲಿಮಿಟೆಡ್, ಜಿಂಜರ್ ಮೈಂಡ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್.

ಬಾಹ್ಯಾಕಾಶ ವಿಭಾಗ: ಸ್ಪರ್ಧಿಸಿದ್ದ ಆಪ್‍ಗಳು 7 (ಅತ್ಯಧಿಕ)-ಬೆಲ್ಲಾಟ್ರಿಕ್ಸ್ ಏರೋಸ್ಪೇಸ್, ಪ್ರವಾಸೋದ್ಯಮ ವಿಭಾಗ: ಸ್ಪರ್ಧಿಸಿದ್ದ ಆಪ್‍ಗಳು 16 (ಅತ್ಯಧಿಕ)-ಹೈವೇ ಡಿಲೈಟ್, ನಗರ ಸೇವೆಗಳು ವಿಭಾಗ: ಸ್ಪರ್ಧಿಸಿದ್ದ ಆಪ್‍ಗಳು 34 (ಅತ್ಯಧಿಕ)-ವಿಕೆಡ್ರೈಡ್ ಅಡ್ವೆಂಚರ್ಸ್ ಪ್ರೈವೇಟ್  ಲಿಮಿಟೆಡ್.

ವಿಶೇಷ ವಿಭಾಗ(ಮಹಿಳಾ ನೇತೃತ್ವದ ನವೋದ್ಯಮಗಳು): ಅಜೂಕ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್, ಅತ್ಯುತ್ತಮ ವೇಗವರ್ಧಕ: ಬ್ರಿಗೇಡ್ ರೀಪ್ ಆಕ್ಸಲರೇಟರ್ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News