ಫೇಸ್‍ಬುಕ್ ಬಳಕೆದಾರರೇ ಎಚ್ಚರ: ಹೆಚ್ಚುತ್ತಿವೆ ನಕಲಿ ಖಾತೆಯ ಮೂಲಕ ಹಣ ದೋಚುವ ಜಾಲ

Update: 2020-10-07 13:46 GMT

ಸಿದ್ದಾಪುರ (ಕೊಡಗು), ಅ.7: ಪೊಲೀಸ್ ಅಧಿಕಾರಿಗಳ, ವಕೀಲರ ಹಾಗೂ ರಾಜಕಾರಣಿಗಳ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ ತೆರೆದು, ಹಣ ಕೀಳುವ ವಂಚನೆ ಸಕ್ರಿಯವಾಗಿದ್ದು, ತಂತ್ರಜ್ಞಾನ ಮುಂದುವರಿದಂತೆ ಪ್ರತೀ ವ್ಯವಹಾರಗಳು ಆನ್‍ಲೈನ್‍ನಲ್ಲೆ ನಡೆಯುತ್ತಿರುವುದರಿಂದ, ವಂಚನೆಗಳು ಕೂಡಾ ಆನ್‍ಲೈನ್ ಮೂಲಕವೇ ಸುಲಭವಾಗಿ ನಡೆಯುತ್ತಿವೆ. 

ಇತ್ತೀಚಿಗೆ ಸಿದ್ದಾಪುರದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ವಕೀಲರೊಬ್ಬರ ಫೋಟೋ ಬಳಸಿ ಫೇಸ್‍ಬುಕ್‍ನಲ್ಲಿ ನಕಲಿ ಖಾತೆ ತೆರೆದ ದುಷ್ಕರ್ಮಿಯೋರ್ವ, ವಕೀಲರು, ಪತ್ರಕರ್ತರು ಸೇರಿದಂತೆ ಕೆಲವು ಫೇಸ್‍ಬುಕ್ ಗೆಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾನೆ. ನಕಲಿ ಖಾತೆಯ ಸತ್ಯಾಸತ್ಯತೆ ಅರಿಯದ ಕೆಲವರು ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ ಫೇಸ್‍ಬುಕ್ ಸ್ನೇಹಿತರಾಗಿದ್ದಾರೆ. ಇದಾದ ತಕ್ಷಣ ಮೆಸ್ಸೆಂಜರ್ ಮೂಲಕ ತುರ್ತು ಆರ್ಥಿಕ ಸಹಾಯ ಕೋರಿದ ದುಷ್ಕರ್ಮಿ ಗೂಗಲ್ ಪೇ ಸಂಖ್ಯೆಯನ್ನು ಕಳಿಸಿದ್ದಾನೆ. ಇದರಿಂದ ಅನುಮಾನಗೊಂಡ ವಕೀಲರ ಸ್ನೇಹಿತರು ಅವರಿಗೆ ನೇರವಾಗಿ ಕರೆ ಮಾಡಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. 

ಕೂಡಲೇ ಎಚ್ಚೆತ್ತುಕೊಂಡ ಅವರು ತಮ್ಮ ಫೇಸ್‍ಬುಕ್ ವಾಲ್‍ನಲ್ಲಿ ಈ ಬಗ್ಗೆ ಬರೆದುಕೊಂಡು, ವಂಚನೆಗೆ ಒಳಗಾಗಬೇಡಿ ಎಂದು ವಿನಂತಿಸಿದ್ದಾರೆ. ಅಲ್ಲದೇ ತನ್ನ ಹೆಸರಿನ ನಕಲಿ ಖಾತೆಯನ್ನು ಡಿಲೀಟ್ ಮಾಡಿಸಿದ್ದಾರೆ.

ಕಳೆದ ತಿಂಗಳು ಪೊಲೀಸ್ ಅಧಿಕಾರಿಗಳ ಹೆಸರಿನಲ್ಲೂ ಫೇಸ್‍ಬುಕ್ ಮೂಲಕ ವಂಚನೆ ಮಾಡಲು ಯತ್ನಿಸಿದ ಘಟನೆ ಕೊಡಗು ಜಿಲ್ಲೆಯಲ್ಲಿ ವರದಿಯಾಗಿತ್ತು. ಆದರೆ ಈ ಬಗ್ಗೆ ಯಾವುದೇ ದೂರುಗಳು ಇದುವರೆಗೆ ದಾಖಲಾಗಿಲ್ಲ ಎಂದು ಸೈಬರ್ ಕ್ರೈಮ್ ಇನ್ಸ್‍ಪೆಕ್ಟರ್ ಹರೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಆನ್‍ಲೈನ್ ವ್ಯವಹಾರ ಹೆಚ್ಚಿದಂತೆ ಸುರಕ್ಷತೆ ಮತ್ತು ಜಾಗೃತಿ ಇಲ್ಲದೇ ಹಣ ಕಳೆದುಕೊಳ್ಳುವವರು ಹೆಚ್ಚುತ್ತಿದ್ದಾರೆ. ಯಾವುದೋ ಉದ್ದೇಶಕ್ಕೆ ಇಟ್ಟುಕೊಂಡಿರುವ ಹಣ ಕಳೆದುಕೊಂಡು ಅಮಾಯಕ ಜನರು ಕಂಗಾಲಾಗುತ್ತಿದ್ದಾರೆ. ಕಳೆದುಕೊಂಡ ಹಣ ವಾಪಸ್ ಸಿಗುವ ಸಾಧ್ಯತೆಗಳು ತೀರಾ ಕಡಿಮೆ. ರಾಜ್ಯ ಅಪರಾಧ ದಾಖಲಾತಿ ಘಟಕದ (ಎಸ್‍ಸಿಆರ್‍ಬಿ) ಮಾಹಿತಿ ಪ್ರಕಾರ ಶೇ. 0.62ರಷ್ಟು ಸೈಬರ್ ಪ್ರಕರಣಗಳನ್ನು ಮಾತ್ರ ಪತ್ತೆ ಮಾಡಲು ಸಾಧ್ಯವಾಗಿವೆ. ಸಾಮಾಜಿಕ ಜಾಲತಾಣಗಳ ದುರುಪಯೋಗಕ್ಕೆ ಸಂಬಂಧಿಸಿ ಕಳೆದ ವರ್ಷ ರಾಜ್ಯದಲ್ಲಿ ಸುಮಾರು 12,014 ಪ್ರಕರಣಗಳು ದಾಖಲಾಗಿದ್ದು, ಕೇವಲ 193 ಪ್ರಕರಣಗಳು ಮಾತ್ರ ಪತ್ತೆಯಾಗಿವೆ ಎಂದು ವರದಿಯಾಗಿದೆ.

ಯಾರಾದರೂ ಮೊಬೈಲ್ ಕರೆ ಮಾಡಿ, ನಿಮ್ಮ ಬ್ಯಾಂಕ್ ವಿವರ ಕೇಳಿದರೆ ನೀಡಬೇಡಿ. ಇನ್ನು ಡೆಬಿಟ್ ಅಥವಾ ಕ್ರೆಡಿಟ್ ಬಗ್ಗೆ ಕೇಳಿದರೆ ಬ್ಯಾಂಕ್‍ಗೆ ಬಂದು ನೀಡುತ್ತೇವೆ ಎಂದು ಹೇಳಿ. ಕಾರು ಸೇರಿದಂತೆ ಇತರೆ ವಾಹನಗಳು ಮಾರಾಟಕ್ಕಿವೆ ಎಂದು ಆನ್‍ಲೈನ್‍ನಲ್ಲಿ ಫೋಟೊ ಹಾಕಿ ವಂಚಿಸುವವರೂ ಇದ್ದಾರೆ. ಈ ಬಗ್ಗೆಯೂ ನಿಗಾ ಇರಲಿ. ದಿನ ಕಳೆದಂತೆ ವಂಚಕರು ತಂತ್ರಜ್ಞಾನಕ್ಕೆ ಹೊಂದಿಕೊಂಡು ವಂಚಿಸುತ್ತಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕಾಗಿದೆ. ಸೈಬರ್ ವಂಚಕರ ಬಗ್ಗೆ ಸಾಮಾಜಿಕ ಜಾಲತಾಣದ ಬಳಕೆದಾರರು ಎಚ್ಚರಿಕೆ ವಹಿಸಬೇಕು. ಸಾಮಾಜಿಕ ಜಾಲತಾಣದ ಮೂಲಕ ಯಾವುದೇ ವ್ಯವಹಾರಗಳನ್ನು ನಡೆಸುವ ಸಂದರ್ಭದಲ್ಲಿ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳದೆ ಹಣ ವರ್ಗಾಯಿಸಿದಲ್ಲಿ ವಂಚನೆಗೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಸಾಮಾಜಿಕ ಜಾಲತಾಣವನ್ನು ಬಳಸುವ ಪ್ರತಿಯೊಬ್ಬರೂ ಅತ್ಯಂತ ಜಾಗರೂಕತೆಯಿಂದ ಇರುವಂತೆ ಕೊಡಗು ಎಸ್.ಪಿ ಕ್ಷಮಾ ಮಿಶ್ರ ಕೋರಿದ್ದಾರೆ.

Writer - ಮುಸ್ತಫ ಸಿದ್ದಾಪುರ

contributor

Editor - ಮುಸ್ತಫ ಸಿದ್ದಾಪುರ

contributor

Similar News