ಸರಕಾರಿ ಶಾಲೆಗಳತ್ತ ಪೋಷಕರ ಚಿತ್ತ: ಕೋವಿಡ್ ನಡುವೆಯೂ ನಿರಾತಂಕವಾಗಿ ನಡೆಯುತ್ತಿದೆ ದಾಖಲಾತಿ

Update: 2020-10-07 16:59 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಅ.7: ಜಿಲ್ಲೆಯಲ್ಲಿ ಕೋವಿಡ್-19 ನಡುವೆಯೂ ಶಾಲಾ ದಾಖಲಾತಿ ಆರಂಭಗೊಂಡಿದೆ. ಶಾಲೆಗಳನ್ನು ಆರಂಭಿಸುವ ಬಗ್ಗೆ ಸರಕಾರ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಳ್ಳದೇ ಗೊಂದಲದಲ್ಲಿದೆಯಾದರೂ ಜಿಲ್ಲಾದ್ಯಂತ ಶಾಲಾ ಮಕ್ಕಳ ದಾಖಲಾತಿ ಎಂದಿನಂತೆ ನಡೆಯುತ್ತಿದೆ. ಇದುವರೆಗೂ ನಡೆದ ಶಾಲಾ ದಾಖಲಾತಿಯಲ್ಲಿ ಸರಕಾರಿ ಶಾಲೆಗಳೇ ಮೇಲುಗೈ ಸಾಧಿಸಿದ್ದು, ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಲು ಹೆಚ್ಚು ಒಲವು ತೋರಿಸುತ್ತಿದ್ದಾರೆ.

ಸರಕಾರಿ ಶಾಲೆ ಎಂದರೇ ಪೋಷಕರಲ್ಲಿ ಒಂದು ರೀತಿಯ ಅಸಡ್ಡೆ ಭಾವನೆ ಇದ್ದು, ಖಾಸಗಿ ಶಾಲೆಯಲ್ಲಿ ಸಿಗುವ ಸೌಲಭ್ಯ ಸರಕಾರಿ ಶಾಲೆಯಲ್ಲಿ ಸಿಗುವುದಿಲ್ಲ ಎಂಬ ಕಾರಣಕ್ಕೆ ತಮ್ಮ ಮಕ್ಕಳು ಖಾಸಗಿ ಶಾಲೆಯಲ್ಲೇ ಓದಬೇಕೆಂಬ ಹಪಾಹಪಿ ಪೋಷಕರಲ್ಲಿದೆ. ಎಷ್ಟೇ ಹಣ ಖರ್ಚಾದರು ಪರವಾಗಿಲ್ಲ ತಮ್ಮ ಮಕ್ಕಳು ಮಾತ್ರ ಖಾಸಗಿ ಶಾಲೆಗಳಲ್ಲೇ ಓದಬೇಕೆಂಬ ಭಾವನೆ ಪೋಷಕರಲ್ಲಿದೆ. ಆದರೆ 2020-21ನೇ ಶೈಕ್ಷಣಿಕ ಸಾಲಿನಲ್ಲಿ ಬಹಳಷ್ಟು ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಲು ಮುಂದಾಗಿರುವುದು ಈ ಬಾರಿಯ ಶಾಲಾ ಮಕ್ಕಳ ದಾಖಲಾತಿಯಿಂದ ತಿಳಿದು ಬಂದಿದೆ.

ಚಿಕ್ಕಮಗಳೂರು ಜಿಲ್ಲಾದ್ಯಂತ 7 ಶೈಕ್ಷಣಿಕ ವಲಯದಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗೆ ಇದುವರೆಗೂ 63,961 ಮಕ್ಕಳನ್ನು ಪೋಷಕರು ಸರಕಾರಿ ಶಾಲೆಗಳಿಗೆ ದಾಖಲಿಸಿದ್ದಾರೆ. ಇದೇ ಸಮಯದಲ್ಲಿ 48,100 ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ದಾಖಲಾಗಿದ್ದಾರೆ. ಈ ಅಂತರವೇ ಪೋಷಕರು ಸರಕಾರಿ ಶಾಲೆಯ ಕದ ತಟ್ಟುತ್ತಿರುವುದಕ್ಕೆ ಸಾಕ್ಷಿ ಹೇಳುತ್ತಿವೆ. ಇದರ ಜೊತೆಗೆ ಅನುದಾನಿತ ಶಾಲೆಗಳಲ್ಲಿ 17,290 ಮಕ್ಕಳು, ಸಮಾಜ ಕಲ್ಯಾಣ ಇಲಾಖೆ ನಡೆಸುವ ಶಾಲೆಗಳಿಗೆ 2,159, ಬುಡಕಟ್ಟು ಮಕ್ಕಳಿಗಾಗಿ ತೆರೆಯಲಾಗಿರುವ ಶಾಲೆಗೆ 5,087, ಕೇಂದ್ರೀಯ ವಿದ್ಯಾಲಯಕ್ಕೆ 682 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಸರಕಾರಿ ಶಾಲೆಗಳಲ್ಲಿ 8ನೇ ತರಗತಿಗೆ 4,576 ವಿದ್ಯಾರ್ಥಿಗಳು ದಾಖಲಾಗಿದ್ದರೆ, 3,584 ಮಂದಿ ಅನುದಾನಿತ ಶಾಲೆಗಳಿಗೆ ಹಾಗೂ 3680 ವಿದ್ಯಾರ್ಥಿಗಳು ಅನುದಾನ ರಹಿತ ಶಾಲೆಗಳಿಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಜಿಲ್ಲೆಯಲ್ಲಿ 7 ಶೈಕ್ಷಣಿಕ ವಲಯ ಹೊಂದಿದ್ದು, ಬೀರುರೂ ಶೈಕ್ಷಣಿಕ ವಲಯದ ಸರಕಾರಿ ಶಾಲೆಗೆ 935, ಚಿಕ್ಕಮಗಳೂರು 1,534, ಕಡೂರು 1,275, ಕೊಪ್ಪ 505, ಮೂಡಿಗೆರೆ 683, ನರಸಿಂಹರಾಜಪುರ 393, ಶೃಂಗೇರಿ 188, ಹಾಗೂ ತರೀಕೆರೆ ಶೈಕ್ಷಣಿಕ ವಲಯಕ್ಕೆ 1,213 ವಿದ್ಯಾರ್ಥಿಗಳು 1ನೇ ತರಗತಿಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಅನುದಾನಿತ ಶಾಲೆಗಳಲ್ಲಿ ಬೀರೂರು 47, ಚಿಕ್ಕಮಗಳೂರು 160, ಕಡೂರು 55, ಕೊಪ್ಪ 49, ಮೂಡಿಗೆರೆ 77, ನರಸಿಂಹರಾಜಪು 62, ತರೀಕೆರೆ 30 ವಿದ್ಯಾರ್ಥಿಗಳು 1ನೇ ತರಗತಿಗೆ ಪ್ರವೇಶ ಪಡೆದಿದ್ದಾರೆ. ಜಿಲ್ಲೆಯಲ್ಲಿರುವ ಖಾಸಗಿ ಶಾಲೆಗಳಿಗೆ ಬೀರೂರು ಶೈಕ್ಷಣಿಕ ವಲಯದಲ್ಲಿ 276, ಚಿಕ್ಕಮಗಳೂರು 1,401, ಕಡೂರು  408, ಕೊಪ್ಪ 369, ಮೂಡಿಗೆರೆ 330, ನರಸಿಂಹರಾಜಪುರ 270, ಶೃಂಗೇರಿ 137 ಮತ್ತು ತರೀಕೆರೆ ಶೈಕ್ಷಣಿಕ ವಲಯದಲ್ಲಿ 540 ವಿದ್ಯಾರ್ಥಿಗಳು ಪ್ರವೇಶಪಡೆದುಕೊಂಡಿದ್ದು ಖಾಸಗಿ ಶಾಲೆಗೆ ಹೋಲಿಕೆ ಮಾಡಿದರೇ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿದೆ.

ಜಿಲ್ಲಾದ್ಯಂತ ಇರುವ ಸರಕಾರಿ ಶಾಲೆಗಳ ಪೈಕಿ 2ನೇ ತರಗತಿಗೆ 6,858, 3ನೇ ತರಗತಿಗೆ 6,863, 4ನೇ ತರಗತಿಗೆ 6,268 5ನೇ ತರಗತಿಗೆ 7,651, 6ನೇ ತರಗತಿಗೆ 7,869, 7ನೇ ತರಗತಿಗೆ 7146, 8ನೇ ತರಗತಿಗೆ 4576, 9ನೇ ತರಗತಿಗೆ 5,013, 10ನೇ ತರಗತಿಗೆ 4,991 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಏಕಲವ್ಯ, ಮೊರಾರ್ಜಿ, ಕಿತ್ತೂರು ರಾಣಿಚೆನ್ನಮ್ಮ ವಸತಿಶಾಲೆಯಲ್ಲಿ 2ನೇ ತರಗತಿಗೆ 18, 3ನೇ ತರಗತಿಗೆ 17, 4ನೇ ತರಗತಿಗೆ 16, 5ನೇ ತರಗತಿಗೆ 29, 6ನೇ ತರಗತಿಗೆ 28 ವಿದ್ಯಾರ್ಥಿಗಳು, 7ನೇ ತರಗತಿಗೆ 605, 8ನೇ ತರಗತಿಗೆ 640, 9ನೇ ತರಗತಿಗೆ 529 ಮತ್ತು 10ನೇ ತರಗತಿಯಲ್ಲಿ 277 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಗಿರಿಜನ ಆಶ್ರಮ ಶಾಲೆಗಳಲ್ಲಿ 1ನೇ ತರಗತಿಗೆ 35, 2ನೇ ತರಗತಿಗೆ 122, 3ನೇ ತರಗತಿಗೆ 168, 4ನೇ ತರಗತಿಗೆ 228, 5ನೇ ತರಗತಿಗೆ 294, 6ನೇ ತರಗತಿಗೆ 52, 7ನೇ ತರಗತಿಗೆ 1234, 8ನೇ ತರಗತಿಗೆ 1,177, 9ನೇ ತರಗತಿಗೆ 1,138 ಮತ್ತು 10ನೇ ತರಗತಿಯಲ್ಲಿ 639 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಅನುದಾನಿತ ಶಾಲೆಗಳಲ್ಲಿ 1ನೇ ತರಗತಿಗೆ 480, 2ನೇ ತರಗತಿಗೆ 627, 3ನೇ ತರಗತಿಗೆ 640, 4ನೇ ತರಗತಿಗೆ 626, 5ನೇ ತರಗತಿಗೆ  799, 6ನೇ ತರಗತಿಗೆ 959, 7ನೇ ತರಗತಿಗೆ 895, 8ನೇ ತರಗತಿಗೆ 3,584, 9ನೇ ತರಗತಿಗೆ 4,286 ಹಾಗೂ 10ನೇ ತರಗತಿಗೆ 4,417 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಖಾಸಗಿ ಶಾಲೆಗಳಲ್ಲಿ 1ನೇ ತರಗತಿಗೆ 3,731 ವಿದ್ಯಾರ್ಥಿಗಳು, 2ನೇ ತರಗತಿಗೆ 6,141, 3ನೇ ತರಗತಿಗೆ 6,184, 4ನೇ ತರಗತಿಗೆ 5,956, 5ನೇ ತರಗತಿಗೆ 5,549, 6ನೇ ತರಗತಿಗೆ 5,097, 7ನೇ ತರಗತಿಗೆ 4,729, 8ನೇ ತರಗತಿಗೆ 3,680, 9ನೇ ತರಗತಿಗೆ 3,552 ಹಾಗೂ 10ನೇ ತರಗತಿಗೆ 3,481 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News