ಹತ್ರಸ್ ಘಟನೆಯ ಹಿಂದೆ ಪಿಎಫ್‍ಐ, ಎಸ್‍ಡಿಪಿಐ ಕೈವಾಡ: ಸಂಸದೆ ಶೋಭಾ ಆರೋಪ

Update: 2020-10-09 13:01 GMT

ಚಿಕ್ಕಮಗಳೂರು, ಅ.9: ಉತ್ತರ ಪ್ರದೇಶದ ಹತ್ರಸ್ ಗ್ರಾಮದಲ್ಲಿ ಇತ್ತೀಚೆಗೆ ನಡೆದ ದಲಿತ ಯುವತಿಯ ಅತ್ಯಾಚಾರ ಪ್ರಕರಣ ಹಾಗೂ ನಂತರ ನಡೆದ ಘಟನೆಗಳ ಹಿಂದೆ ಎಸ್‍ಡಿಪಿಐ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಕೈವಾಡ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲ ಮಾತನಾಡಿದ ಅವರು, ಹತ್ರಸ್ ಪ್ರಕರಣ ಮುಂದಿಟ್ಟುಕೊಂಡು ಪಿಎಫ್‍ಐ ಹಾಗೂ ಎಸ್‍ಡಿಪಿಐ ಸಂಘಟನೆಗಳು ಸಂಚು ರೂಪಿಸಿರುವ ಬಗ್ಗೆ ಸರಕಾರಕ್ಕೆ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಸಮಗ್ರ ತನಿಖೆಯಾಗಬೇಕು. ಈ ಸಂಘಟನೆಗಳು ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿಮಾರ್ಣ ಮಾಡಿ ಸಮಾಜವನ್ನು ಒಡೆಯುವ ವ್ಯವಸ್ಥಿತ ಪ್ರಯತ್ನ ಮಾಡುತ್ತಿವೆ ಎಂದರು.

ಎಸ್‍ಡಿಪಿಐ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಎಲ್ಲಿಯವರೆಗೂ ದೇಶದಲ್ಲಿ ಇರುತ್ತದೋ ಅಲ್ಲಿಯ ತನಕ ಇಂತಹ ಗಲಾಟೆ, ದೊಂಬಿಯಂತಹ ಸಮಸ್ಯೆಗಳು ಇರುತ್ತವೆ. ಸಂಘಟನೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಸಂಘಟನೆಗಳನ್ನು ನಿಷೇಧ ಮಾಡಬೇಕು. ಈ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಉತ್ತರ ಪ್ರದೇಶದ ಸರಕಾರ ಮುಂದಾಗಬೇಕು ಎಂದು ಶೋಭಾ ಆಗ್ರಹಿಸಿದರು.

ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ಸರಕಾರ ಆತುರದ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಶಿಕ್ಷಕರು ಮತ್ತು ಮಕ್ಕಳನ್ನು ಒಂದು ಕಡೆ ಸೇರಲು ಬಿಡುವುದು ತುಂಬಾ ಅಪಾಯಕಾರಿ. ಶಿಕ್ಷಕರು ಮತ್ತು ಮಕ್ಕಳ ಜೀವ ರಕ್ಷಣೆಯ ಬಗ್ಗೆ ಸರಕಾರ ವಿಶೇಷ ಆಸಕ್ತಿ ವಹಿಸಬೇಕು. ನಮ್ಮೆಲ್ಲರ ಜೀವ ಉಳಿಸುವುದು ಈ ವರ್ಷವಾಗಿದೆ ಎಂದ ಅವರು, ಶಿಕ್ಷಕರು ರಾಜ್ಯದ ಆಸ್ತಿ ಇದ್ದಂತೆ, ಅವರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ಶೈಕ್ಷಣಿಕ ವರ್ಷ ಆನ್‍ಲೈನ್ ಶಿಕ್ಷಣ ನೀಡುವ ಮೂಲಕ 1ರಿಂದ 9ನೇ ತರಗತಿವರೆಗೆ ಎಲ್ಲರನ್ನೂ ಉತ್ತೀರ್ಣಗೊಳಿಸಬೇಕು. ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿಶೇಷ ಕಾಳಜಿವಹಿಸಿ ವಿಶೇಷ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು ಎಂದರು.

ವಿದ್ಯಾಗಮ ಯೋಜನೆ ಮುಂದುವರಿಸುವ ಬಗ್ಗೆ ಶಿಕ್ಷಣ ತಜ್ಞರ ವರದಿ ಪಡೆಯುವುದು ಸೂಕ್ತ. ಯೋಜನೆ ಮುಂದುವರಿಸುವ ಬಗ್ಗೆ ರಾಜ್ಯ ಸರಕಾರ ತುರ್ತಾಗಿ ನಿರ್ಧಾರ ಕೈಗೊಳ್ಳುವುದು ಸೂಕ್ತ. ಯಾವುದೇ ಕಾರಣಕ್ಕೂ ಶಾಲೆಗಳ ಆರಂಭಕ್ಕೆ ಆತುರ ಪಡಬಾರದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News