ಕೃಷ್ಣಾ ಜಲ ವಿವಾದ: ಸರ್ವಪಕ್ಷ ಸಭೆ ಕರೆಯಲು ಸಿಎಂಗೆ ಎಂ.ಬಿ.ಪಾಟೀಲ್ ಆಗ್ರಹ

Update: 2020-10-09 13:06 GMT

ಬೆಂಗಳೂರು, ಅ.9: ಕೃಷ್ಣಾ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ನೀಡುವ ಹೇಳಿಕೆ ಗೊಂದಲಮಯವಾಗಿದ್ದು, ಈ ಸಂಬಂಧ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡಲೆ ಸರ್ವಪಕ್ಷ ಸಭೆಯನ್ನು ಕರೆಯುವಂತೆ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಆಗ್ರಹಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ಕೃಷ್ಣಾ ಜಲ ವಿವಾದ ಕುರಿತು ಹೊಸ ನ್ಯಾಯಾಧೀಕರಣ ರಚನೆ ಮಾಡುವ ಬಗ್ಗೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಉತ್ಸುಕರಾಗಿರುವಂತೆ ಕಂಡು ಬರುತ್ತಿದೆ. ಅವರು ಇತ್ತೀಚೆಗೆ ನೀಡಿರುವ ಹೇಳಿಕೆಯನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಬೇಕು ಎಂದರು.

ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಕೇಂದ್ರ ಜಲಸಂಪನ್ಮೂಲ ಸಚಿವರು ನಡೆಸಿರುವ ಸಭೆ ರಾಜ್ಯದ ಪಾಲಿಗೆ ಆತಂಕ ಮೂಡಿಸಿದೆ. ಈ ವಿಷಯದಲ್ಲಿ ಅವರ ಹೇಳಿಕೆ ಗೊಂದಲಮಯವಾಗಿದೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಕೃಷ್ಣಾ ನ್ಯಾಯಾಧೀಕರಣ ತೀರ್ಪಿನ ಕುರಿತು ತಮಗೆ ಅನ್ಯಾಯವಾಗಿದೆ ಎಂದು ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ವಿಭಜನೆಯಾದ ಬಳಿಕ ಸುಪ್ರಿಂ ಕೋರ್ಟ್ ಮತ್ತು ನ್ಯಾಯಾಧೀಕರಣದಲ್ಲಿ ಮೊಕದ್ದಮೆ ದಾಖಲು ಮಾಡಿವೆ. ಇದು ಆ ಎರಡೂ ರಾಜ್ಯಗಳ ನಡುವಿನ ಆಂತರಿಕ ವ್ಯಾಜ್ಯ. ಈ ಕುರಿತು ನ್ಯಾಯಾಧೀಕರಣ ಈಗಾಗಲೇ ತೀರ್ಪು ನೀಡಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯಗಳ ಪುನರ್ ವಿಂಗಡನೆ ಕಾಯ್ದೆ ಸೆಕ್ಷನ್ 80ರ ಪ್ರಕಾರ ಬ್ರಿಜೇಶ್ ಕುಮಾರ್ ನೇತೃತ್ವದ ಕೃಷ್ಣಾ ನ್ಯಾಯಾಧೀಕರಣ ತೀರ್ಪು ನೀಡಿದ್ದು, ನೀರು ಮರು ಹಂಚಿಕೆ ಆ ಎರಡೂ ರಾಜ್ಯಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿದೆ. ಅಲ್ಲದೆ, ಸುಪ್ರೀಂಕೋರ್ಟಿನಲ್ಲಿ ಕೇಂದ್ರ ಸರಕಾರ ಇದೇ ನಿಲುವಿನಡಿ ಪ್ರಮಾಣಪತ್ರವನ್ನು ಸಲ್ಲಿಸಿದೆ. ಆದುದರಿಂದ, ಕೃಷ್ಣಾ ನ್ಯಾಯಾಧೀಕರಣ ತೀರ್ಪಿನ ನೀರಿನ ಮರು ಹಂಚಿಕೆ ಆ ಎರಡು ರಾಜ್ಯಗಳಿಗೆ ಸೀಮಿತವಾಗಿರುವಂತದ್ದು ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಕೇಂದ್ರ ಸಚಿವರಿಂದ ನಮ್ಮ ರಾಜ್ಯದ ಹಿತಕ್ಕೆ ಧಕ್ಕೆ ತರುವ ಯತ್ನ ನಡೆಯುತ್ತಿದೆ. ಆದುದರಿಂದ, ಮುಖ್ಯಮಂತ್ರಿ ಯಡಿಯೂರಪ್ಪ, ಇದನ್ನು ಗಂಭೀರವಾಗಿ ಪರಿಗಣಿಸಬೇಕು.  ಅಲ್ಲದೇ, ಸರ್ವಪಕ್ಷ ಸಭೆ ಕರೆದು ಕೇಂದ್ರ ಸರಕಾರಕ್ಕೆ ರಾಜ್ಯದ ಪರವಾಗಿ ಮನವರಿಕೆ ಮಾಡಿ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News