ಸಚಿವ ಜಗದೀಶ್ ಶೆಟ್ಟರ್ ಮನೆ ಎದುರು ಪೌರ ಕಾರ್ಮಿಕರಿಂದ ಪ್ರತಿಭಟನೆ

Update: 2020-10-09 14:17 GMT

ಹುಬ್ಬಳ್ಳಿ, ಅ.9: ನೇಮಕಾತಿ, ನೇರ ವೇತನ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪೌರ ಕಾರ್ಮಿಕರ ಸಂಘ, ವಿವಿಧ ದಲಿತ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಗುತ್ತಿಗೆ ಪೌರ ಕಾರ್ಮಿಕರು ಶುಕ್ರವಾರ ಸಚಿವ ಜಗದೀಶ್ ಶೆಟ್ಟರ್ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದರು.

ನೇರ ನೇಮಕಾತಿ ಹಾಗೂ ನೇರ ವೇತನ ನೀಡುವಂತೆ ಹಾಗೂ ಐಪಿಡಿ ಸಾಲಪ್ಪ ವರದಿಯನುಸಾರ 500 ಜನರಿಗೆ ಒಬ್ಬರಂತೆ ಪೌರಕಾರ್ಮಿಕರ ನೇಮಕಾತಿ ಮಾಡುವಂತೆ ಆಗ್ರಹಿಸಲಾಯಿತು. ಅಲ್ಲದೆ ಇತ್ತೀಚಿಗೆ ಪೌರ ಕಾರ್ಮಿಕರ ಮೇಲಿನ ಸುಲಿಗೆ, ಶೋಷಣೆ ತಡೆಯಲು ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಲಾಯಿತು.

ಅಲ್ಲದೇ ಕೆಲವೊಂದು ಸಂಘಟನೆಗಳ ಹೆಸರು ಹೇಳಿಕೊಂಡು ಪೌರ ಕಾರ್ಮಿಕರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಶೀಘ್ರವೇ ಪೌರ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಮತಾಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ, ದುರ್ಗಪ್ಪ ವೀರಾಪೂರ, ಗಣೇಶ ಟಗರಗುಂಟಿ, ಗಂಗಾಧರ ಟಗರಗುಂಟಿ, ಬಸಪ್ಪ ಮಾದಾರ ಸೇರಿದಂತೆ ಹಲವು ಪೌರ ಕಾರ್ಮಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನೇರ ವೇತನ ಜಾರಿಗೆ ಕ್ರಮ

ಕಾರ್ಮಿಕರಿಂದ ಹಣ ಸೂಲಿಗೆ ಮಾಡುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಪೌರ ಕಾರ್ಮಿಕರ ಸಮಸ್ಯೆ ಇದ್ದರೆ ನೇರವಾಗಿ ಭೇಟಿಯಾಗುವಂತೆ ಸಲಹೆ ನೀಡಿದ್ದೇನೆ. ಮಧ್ಯವರ್ತಿಗಳಿಗೆ ಹಣ ನೀಡಬೇಡಿ. ಶೀಘ್ರದಲ್ಲಿಯೇ ಪೌರ ಕಾರ್ಮಿಕರ ನೇರ ನೇಮಕಾತಿ ಹಾಗೂ ನೇರ ವೇತನ ಜಾರಿ ಮಾಡಲಾಗುವುದು

-ಜಗದೀಶ್ ಶೆಟ್ಟರ್, ಮಧ್ಯಮ ಕೈಗಾರಿಕಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News