ಸರಕಾರದಿಂದ ಅಭಿವೃದ್ಧಿ ಅನುದಾನಗಳಿಗೆ ತಡೆ ಆರೋಪ: ಶಾಸಕ ರಾಜೇಗೌಡರಿಂದ ಉಪವಾಸ ಸತ್ಯಾಗ್ರಹ

Update: 2020-10-09 14:22 GMT

ಕೊಪ್ಪ, ಅ.9: ರಾಜ್ಯ ಸರಕಾರ ಉದ್ದೇಶಪೂರ್ವಕವಾಗಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತಡೆ ಹಿಡಿದಿದೆ ಎಂದು ಆರೋಪಿಸಿ ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರಗಳ ಆಡಳಿತ ವೈಫಲ್ಯ ಖಂಡಿಸಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಶುಕ್ರವಾರ ಪಟ್ಟಣದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಸತ್ಯಾಗ್ರಹ ಬೆಂಬಲಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ರೈತಸಂಘದ ಸಂಘದ ಮುಖಂಡರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಶಾಸಕ ರಾಜೇಗೌಡ, ರಾಜ್ಯದಲ್ಲಿ ಮೈತ್ರಿ ಸರಕಾರ ಅಧಿಕಾರದಲ್ಲಿ ಇದ್ದಾಗ ಶೃಂಗೇರಿ ವಿಧಾನ ಸಭಾ ಕ್ಷೇತ್ರಕ್ಕೆ 170.48 ಕೋಟಿ ಹಣವನ್ನು ವಿವಿಧ ಇಲಾಖೆಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಬಿಡುಗಡೆ ಮಾಡಿತ್ತು, ಆ ನಂತರದಲ್ಲಿ ಅಡಳಿತಕ್ಕೆ ಬಂದ ಬಿಜೆಪಿ ಸರಕಾರ ಅನುದಾನವನ್ನು ತಡೆ ಹಿಡಿದಿದ್ದು, ಇದರ ಹಿಂದೆ ಮಾಜಿ ಸಚಿವ ಜೀವರಾಜ್ ಕೈವಾಡವಿದೆ ಎಂದು ಅರೋಪಿಸಿದರು. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಕ್ಷೇತ್ರದಲ್ಲಿ ಸೇಡಿನ ರಾಜಕಾರಣ ಆರಂಭವಾಗಿದೆ. ಮಾಜಿ ಸಚಿವ ಜೀವರಾಜ್ ಮತ್ತು ಅವರ ಹಿಂಬಾಲಕರು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಅನುದಾನವನ್ನು ತಡೆಹಿಡಿದಿದ್ದಾರೆ. ಕ್ಷೇತ್ರದ ಅಭಿವೃದ್ದಿಯನ್ನು ಸಹಿಸಲಾಗದೆ ಜೀವರಾಜ್ ಇಂತಹ ಕೆಟ್ಟ ಕೆಲಸಕ್ಕೆ ಕೈ ಹಾಕಿದ್ದಾರೆ. ಜೀವರಾಜ್ ಕ್ಷೇತ್ರದ ಜನತೆಗೆ ಅನ್ಯಾಯ ಮಾಡಿದ್ದಾರೆ. ನನ್ನ ಮೇಲಿನ ರಾಜಕೀಯ ದ್ವೇಷವನ್ನು ಕ್ಷೇತ್ರದ ಬಡ ಜನರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಅತಿವೃಷ್ಟಿಯಿಂದ ಕ್ಷೇತ್ರದಲ್ಲಿ 343.92 ಕೋಟಿಯಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ, ಕೇವಲ 28.61 ಲಕ್ಷ ಅನುದಾನವನ್ನು ಸರಕಾರ ಬಿಡುಗಡೆಗೊಳಿಸಿದೆ. ಕ್ಷೇತ್ರದಲ್ಲಿನ ಅಂಗನವಾಡಿ ಕಾರ್ಯಕರ್ತೆಯರಿಗೆ, ಆಶಾ ಕಾರ್ಯಕರ್ತೆಯರಿಗೆ, ಬಿಸಿಯೂಟದ ಅಡುಗೆ ಮಾಡುವವರಿಗೆ ಸಹಾಯ ಧನ ಬಿಡುಗಡೆ ಆಗಿಲ್ಲ ಎಂದು ಆರೋಪಿಸಿದರು.

ಧರಣಿಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಮಾತನಾಡಿ, ಶೃಂಗೇರಿ ಕ್ಷೇತ್ರಕ್ಕೆ ಬಿಜೆಪಿ ಸರಕಾರ ಮಾಡುತ್ತಿರುವ ಮಲತಾಯಿ ಧೋರಣೆಯನ್ನು ಕ್ಷೇತ್ರದ ಮನೆ, ಮನೆಗೆ ತಲುಪಿಸುವ ಕಾರ್ಯವನ್ನು ಪ್ರತಿಯೊಬ್ಬ ಕಾರ್ಯಕರ್ತ ಮಾಡಬೇಕು. ಬಿಜೆಪಿ ಸರಕಾರದಿಂದ ಅಭಿವೃದ್ದಿ, ಜನಪರವಾದ ಕೆಲಸವನ್ನು ಮಾಡಿ ಚುನಾವಣೆಯನ್ನು ಎದುರಿಸುವುದಿಲ್ಲ. ಜಾತಿ, ಧರ್ಮ, ಹಣ ಬಲದ ಮೇಲೆ ಬಿಜೆಪಿ ಚುನಾವಣೆಯನ್ನು ನಡೆಸಿ ಅಧಿಕಾರಕ್ಕೆ ಬರುತ್ತಾರೆ. ಬಿಜೆಪಿಯದ್ದು ಕೆಟ್ಟ ಸಿದ್ಧಾಂತ. ಈ ಸಿದ್ದಾಂತ ದೇಶಕ್ಕೆ ಮಾರಕವಾದದ್ದು. ನಾವು ಕೇವಲ ಚುನಾವಣೆಯನ್ನು ಎದುರಿಸಲು ಕೆಲಸ ಮಾಡಬಾರದು, ಬಿಜೆಪಿ ಪಕ್ಷ ಮತ್ತು ಅದರ ಸಿದ್ದಾಂತವನ್ನು ದೇಶದಿಂದ ತೊಲಗಿಸಲು ಕಾರ್ಯ ನಿರ್ವಹಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಅವರು, ರಾಜ್ಯ ಸರಕಾರ ಶಾಲೆಗಳನ್ನು ಪ್ರಾರಂಭದ ಬಗ್ಗೆ ಸ್ವಷ್ಟವಾದ ನಿಲುವನ್ನು ಹೊಂದಬೇಕು. ಶಾಲೆ ತೆರೆಯುವುದರ ಬಗ್ಗೆ ಜಾತಕ ಕೇಳಿ, ಶಾಸ್ತ್ರ ಕೇಳಿ ದಿನಾಂಕ ನಿಗದಿಗೊಳಿಸುವಂತೆ ಶಿಕ್ಷಣ ಸಚಿವರು ಹೇಳಿಕೆಯನ್ನು ನೀಡುತ್ತಾರೆ ಎಂದು ಟೀಕಿಸಿದ ಅವರು, ಸರಕಾರ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು, ಪೋಷಕರನ್ನು ಗೊಂದಲದಲ್ಲಿ ಇಟ್ಟಿದೆ. ಶಾಲೆ ತೆರೆಯುವ ಬಗ್ಗೆ ಒಂದು ದೃಢ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮಾತನಾಡಿ, ಜೀವರಾಜ್ ಸೇಡಿನ ರಾಜಕಾರಣಕ್ಕೆ ಕೇತ್ರದ ಜನತೆಗೆ ಅನ್ಯಾಯವಾಗುತ್ತಿದೆ. ಅಭಿವೃದ್ದಿ ಕಾರ್ಯಗಳಿಗೆ ತಡೆಯೊಡ್ಡುವುದು ಒಳ್ಳೆಯ ರಾಜಕೀಯ ಬೆಳವಣಿಗೆಯಲ್ಲ. ತಹಶೀಲ್ದಾರ್ ಅಡಳಿತ ಪಕ್ಷದ ಕೈಗೊಂಬೆಯಾಗಿದ್ದಾರೆ. ತಾಲೂಕು ಕಚೇರಿಯ ಮುಂಭಾದಲ್ಲಿ ಪ್ರತಿಭಟನೆಯನ್ನು ಮಾಡಲು ಆವಕಾಶವನ್ನು ನೀಡದೇ, ಪ್ರಜಾಪ್ರಭುತ್ವ ನೀಡಿರುವ ಹಕ್ಕುಗಳನ್ನು ಕಸಿದುಕೊಳ್ಳುವಲ್ಲಿ ಮುಂದಾಗಿದ್ದಾರೆ. ಮುಂದಿನ ದಿನದಲ್ಲಿ ತಹಶೀಲ್ದಾರ್ ಮನೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಧರಣಿಯಲ್ಲಿ ಜಿ.ಪಂ.ಸದಸ್ಯ ಸದಾಶಿವ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶುಮಂತ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಅನ್ನಪೂರ್ಣ ನರೇಶ್, ಪ್ರಧಾನ ಕಾರ್ಯದರ್ಶಿ ನುಗ್ಗಿ ಮಂಜುನಾಥ್, ಇನೇಶ್, ನವೀನ್ ಮಾವೀನಕಟ್ಟೆ, ಚಿಂತನ್ ಬೆಳಗೊಳ, ಕುಕ್ಕುಡಿಗೆ ರವೀಂದ್ರ, ಬರ್ಕತ್ ಆಲಿ, ಅಸಗೋಡು ನಾಗೇಶ್ ಮುಂತಾದವರಿದ್ದರು.

ಆಣೆ ಪ್ರಮಾಣಕ್ಕೆ ಆಹ್ವಾನ: ಮಾಜಿ ಸಚಿವ ಜೀವರಾಜ್ ಅವರು ಕ್ಷೇತ್ರಕ್ಕೆ ಬಿಡುಗಡೆಯಾಗಿರುವ ಅನುದಾನ ತಡೆ ಹಿಡಿಯುವಲ್ಲಿ ಯಾವುದೇ ಪಾತ್ರವಹಿಸಿಲ್ಲ ಎಂದು ಹೇಳುವುದಾದರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ, ಅವರಿಗೆ ಧರ್ಮಸ್ಥಳಕ್ಕೆ ಬರಲು ಸಾಧ್ಯವಾಗದಿದ್ದರೆ ಕೊಪ್ಪ ವೀರಭಧ್ರ ದೇವಸ್ಥಾನಕ್ಕೆ ಬರಲಿ ಎಂದು ಜಿ.ಪಂ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್ ಸವಾಲು ಹಾಕಿದ್ದಾರೆ.

ಜೀವರಾಜ್ ಅನುದಾನವನ್ನು ತಡೆ ಹಿಡಿಯಲು ಸರಕಾರವನ್ನು ಬಳಸಿಕೊಂಡು ಅಧಿಕಾರಿಗೆ ಒತ್ತಡ ಹಾಕಿದ್ದಾರೆ, ಅಧಿಕಾರಿಗಳು ಒತ್ತಡಕ್ಕೆ ಮಣಿದು ಅನುದಾನಕ್ಕೆ ತಡೆ ನೀಡಿದ್ದಾರೆ. ಇಲಾಖೆಯ ಅಧಿಕಾರಿಯೊಬ್ಬರು ಖುದ್ದು ವಿಧಾನಸೌದದಲ್ಲಿ ತಡೆ ಹಿಡಿದ ಬಗ್ಗೆ ಹೇಳಿದ್ದಾರೆ. ನಾವು ಧರ್ಮಸ್ಥಳಕ್ಕೆ ಬರಲು ಸಿದ್ಧರಿದ್ದೇವೆ ಎಂದು ಸತೀಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News