ಮೈಸೂರು ದಸರಾ ಆಚರಣೆಗೆ ಸಾಹಿತಿ ಎಸ್.ಎಲ್.ಭೈರಪ್ಪ ವಿರೋಧ

Update: 2020-10-16 16:21 GMT

ಮೈಸೂರು, ಅ.10: ಮೈಸೂರು ದಸರಾ ಆಚರಣೆಗೆ ಇನ್ನೂರು ಜನರ ಅಗತ್ಯವೂ ಇಲ್ಲ. ಎಲ್ಲರೂ ತಮ್ಮ ತಮ್ಮ ಮನೆಯಲ್ಲೇ ಹಬ್ಬ ಆಚರಿಸಿ ಕೊಂಡರೆ ಉತ್ತಮ ಎಂದು ಖ್ಯಾತ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅಭಿಪ್ರಾಯಿಸಿದ್ದಾರೆ.

ನಗರದ ಕುವೆಂಪುನಗರದಲ್ಲಿರುವ ಪ್ರಮತಿ ಹಿಲ್ ವ್ಯೂ ಶಾಲಾ ಆವರಣದಲ್ಲಿ ಶನಿವಾರ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಮಹಾಮಾರಿ ಕೋವಿಡ್-19 ಸಂದರ್ಭದಲ್ಲಿ ದಸರಾ ಆಚರಣೆ ಅಗತ್ಯವಿಲ್ಲ. ಚಾಮುಂಡಿಬೆಟ್ಟದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಅರಮನೆಯಲ್ಲಿ ಅಂಬಾರಿಗೆ ಪೂಜೆ ಸಲ್ಲಿಸಿದರೆ  ಸಾಕು. ಇದಕ್ಕೆ ಜನ ಏಕೆ ಬೇಕು? ಆನೆ ಮೇಲೆ ಅಂಬಾರಿ ಕುಡಿಸಲು ಮಾವುತರು ಇದ್ದರೆ ಸಾಕು, ಬೇರೆಯವರು ಯಾಕೆ ಎಂದು ಡಾ.ಭೈರಪ್ಪ ಪ್ರಶ್ನಿಸಿದರು.

ಕೆಲವರು ದಸರಾ ಇಲ್ಲದಿದ್ದರೆ ನಮ್ಮ ಬಿಸಿನೆಸ್ ಹಾಳಾಗುತ್ತಿದೆ ಎನ್ನುತ್ತಿದ್ದಾರೆ.  ಇವರ ಬಿಸಿನೆಸ್ ಗಾಗಿ ಜನರು ತೊಂದರೆ ಅನುಭವಿಸಬೇಕೇ ಎಂದು ಅವರು ಪ್ರಶ್ನಿಸಿದರು.

ದಸರಾಗೆ ಲೈಟಿಂಗ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದ್ದರೆ ಇರಲಿ. ಯಾವುದೇ ಕಾರಣಕ್ಕೂ ಜನರ ಗುಂಪನ್ನು ಸೇರಿಸಬಾರದು ಎಂದು ಹೇಳಿದರು.

ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸಬಹುದು ಆದರೆ ಜನರ ಆರೋಗ್ಯ ಮುಖ್ಯ ಹಾಗಾಗಿ ದಸರಾ ಆಚರಣೆ ಅಗತ್ಯವಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News