ವಿದ್ಯಾಗಮ ಕಾರ್ಯಕ್ರಮ ತಾತ್ಕಾಲಿಕ ಸ್ಥಗಿತ: ಸಚಿವ ಸುರೇಶ್ ಕುಮಾರ್

Update: 2020-10-10 10:34 GMT

ಬೆಂಗಳೂರು, ಅ.10: ರಾಜ್ಯದಲ್ಲಿ ಜಾರಿ ತಂದಿರುವ ವಿದ್ಯಾಗಮ ಕಾರ್ಯಕ್ರಮದ ಕುರಿತು ಕೆಲವು ವಲಯಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿರುವುದನ್ನು ಗಮನಿಸಿದ್ದೇನೆ. ವಿದ್ಯಾಗಮ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ವಿದ್ಯಾಗಮ ಸಮಾಜದ ಕೆಳಸ್ಥರದ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಕ್ಕಳ ಹಿತವನ್ನು ಮನದಲ್ಲಿ ಇಟ್ಟುಕೊಂಡು ಯೋಜಿಸಿರುವ ಕಾರ್ಯಕ್ರಮ. ಆದರೂ ವಿವಿಧ ವಲಯಗಳಿಂದ ಪ್ರಕಟವಾಗುತ್ತಿರುವ ಕಾಳಜಿಗೆ ಮನ್ನಣೆ ಕೊಟ್ಟು ಶಿಕ್ಷಣ ಇಲಾಖೆ ಈ ಕುರಿತು ಸಂಗ್ರಹಿಸಲು ಉದ್ದೇಶಿಸಿರುವ ಜಿಲ್ಲಾವಾರು ಅಂಕಿಅಂಶಗಳ ಸ್ವೀಕಾರ ಹಾಗೂ ಅದರ ಸಮರ್ಪಕ ವಿಶ್ಲೇಷಣೆ ಪೂರ್ಣಗೊಳ್ಳುವವರೆಗೂ ವಿದ್ಯಾಗಮ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇಂದು ಸರಕಾರಿ ಶಾಲೆಗಳಿಗೆ ಸೇರಿದ 47 ಲಕ್ಷ ಮಕ್ಕಳು ಈ ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಿದ್ದಾರೆ. ಎಲ್ಲಿಯೂ ಕಾರ್ಯಕ್ರಮದ ಕಾರಣದಿಂದಲೆ ಸೋಂಕು ಹರಡಿದೆಯೆನ್ನುವುದು ಅಧಿಕೃತವಾಗಿ ದೃಢಪಟ್ಟಿಲ್ಲ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಅತ್ಯಂತ ವೈಜ್ಞಾನಿಕವಾಗಿ ರೂಪಿತವಾಗಿರುವ ಈ ಕಾರ್ಯಕ್ರಮ ನಮ್ಮ ಸಮಾಜದ ದುರ್ಬಲ ಮಕ್ಕಳ ಕಲಿಕೆಯನ್ನು ಮುಂದುವರಿಸಲು, ಶಿಕ್ಷಕ-ವಿದ್ಯಾರ್ಥಿಗಳ ನಡುವಿನ ಸ್ನೇಹ ಸಂಬಂಧ ಗಟ್ಟಿಗೊಳ್ಳುವ ಮೂಲಕ ವಿದ್ಯಾರ್ಥಿಯ ಸಮಗ್ರ ಬೆಳವಣಿಗೆಗೆ ಪೂರಕವಾಗಿದೆ. ಅಷ್ಟೇ ಅಲ್ಲ, ಅವರ ಮಾನಸಿಕ, ದೈಹಿಕ ಸ್ಥಿತಿಗತಿಗಳನ್ನು ಸುಸ್ಥಿತಿಯಲ್ಲಿಡಲು ಅದು ಪೂರಕವಾಗಿದೆ. ಇಡೀ ದೇಶದಲ್ಲಿಯೇ ವಿದ್ಯಾಗಮ ಮಾದರಿಯ ಉಪಕ್ರಮವಾಗಿ ಗುರುತಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ಯೋಜನೆಯ ಉಪಯುಕ್ತತೆ, ಅಲ್ಲಿ ಅಳವಡಿಸಿಕೊಳ್ಳಲಾಗಿರುವ ಸುರಕ್ಷತಾ ಕ್ರಮಗಳ ಬಗ್ಗೆ ಯಾರಲ್ಲೂ ಸಂಶಯ ಬೇಡ. ಆದರೂ ಶಿಕ್ಷಕರ ಕಾರಣಕ್ಕೆ ಮಕ್ಕಳು ಕೋವಿಡ್ ಸೋಂಕಿತರಾಗಿದ್ದಾರೆಯೇ, ಮಕ್ಕಳಿಂದ ಶಿಕ್ಷಕರಿಗೆ ಅದು ಹರಡಿದೆಯೇ ಎಂಬ ಬಗ್ಗೆ ರಾಜ್ಯಾದ್ಯಂತ ಮಾಹಿತಿ ಸಂಗ್ರಹಣೆಗೆ ಇಂದಿನಿಂದಲೇ ನಾವು ಮುಂದಾಗಿದ್ದೇವೆ. ಪ್ರತಿ ಜಿಲ್ಲೆಯಿಂದ, ಸಂಬಂಧಪಟ್ಟವರಿಂದ ಈ ಸಂಪೂರ್ಣ ಮಾಹಿತಿ ಈ ಕೂಡಲೇ ಸಂಗ್ರಹಿಸಲಾಗುವುದು. ಸಂಪೂರ್ಣ ಮಾಹಿತಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News