“ನಮಗೆ ಬುಲೆಟ್‌ ಪ್ರೂಫ್ ನೀಡುತ್ತಿಲ್ಲ, ನಮ್ಮ ಜೀವದೊಂದಿಗೆ ಆಟವಾಡುತ್ತಿದ್ದಾರೆ”

Update: 2020-10-10 14:18 GMT

ಹೊಸದಿಲ್ಲಿ, ಅ.10: ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಟೀಕಾಪ್ರಹಾರ ಮುಂದುವರಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ಪ್ರಯಾಣಕ್ಕೆ 8,400 ಕೋಟಿ ರೂ. ವ್ಯಯಿಸಿ ವಿಶೇಷ ವಿಮಾನದ ವ್ಯವಸ್ಥೆ ಮಾಡುವ ಸರಕಾರ ಯೋಧರ ಪ್ರಯಾಣಕ್ಕೆ ಬುಲೆಟ್‌ಪ್ರೂಫ್ ಟ್ರಕ್ ಒದಗಿಸಲು ನಿರಾಕರಿಸಿದೆ. ಇದು ನ್ಯಾಯವೇ ಎಂದು ಟ್ವೀಟ್ ಮಾಡಿದ್ದಾರೆ.

ಇದರ ಜತೆಗೆ, ಇಬ್ಬರು ಯೋಧರು ಮಾತನಾಡಿಕೊಳ್ಳುತ್ತಿದ್ದಾರೆ ಎನ್ನಲಾದ ವೀಡಿಯೋವನ್ನೂ ಶೇರ್ ಮಾಡಿಕೊಂಡಿದ್ದಾರೆ. ಸಮವಸ್ತ್ರದಲ್ಲಿರುವ ಒಬ್ಬ ವ್ಯಕ್ತಿ ಮತ್ತೊಬ್ಬನೊಡನೆ ಮಾತನಾಡುತ್ತಾ “ಬುಲೆಟ್ ಪ್ರೂಫ್ ವಾಹನದಲ್ಲಿ ಸಂಚರಿಸುವುದೂ ಅಪಾಯಕಾರಿಯಾಗಿರುವ ಈಗಿನ ಸಂದರ್ಭದಲ್ಲಿ ನಾವು ಬುಲೆಟ್‌ ಪ್ರೂಫ್ ಹೊಂದಿಲ್ಲದ ಟ್ರಕ್‌ಗಳಲ್ಲಿ ಪ್ರಯಾಣಿಸುತ್ತಿದ್ದೇವೆ. ಅವರು ನಮ್ಮ ಜೀವದೊಂದಿಗೆ ಆಟವಾಡುತ್ತಿದ್ದಾರೆ. ನಾವು ನಮ್ಮ ಜೀವನವನ್ನು ವ್ಯರ್ಥವಾಗಿಸುತ್ತಿದ್ದೇವೆ” ಎಂದು ಹೇಳುವುದು ಎರಡು ನಿಮಿಷಗಳ ವೀಡಿಯೊದಲ್ಲಿದೆ.

ಇದಕ್ಕೆ ಉತ್ತರವಾಗಿ ಕ್ಯಾಮೆರ ನೋಡಿ ಮಾತನಾಡಿದ ಮತ್ತೊಬ್ಬ ಸಮವಸ್ತ್ರಧಾರಿ ವ್ಯಕ್ತಿ “ಇದು ಕಳಪೆ ವ್ಯವಸ್ಥೆಯಾಗಿದೆ. ನಮಗೆ ಅತ್ಯಂತ ಕೆಟ್ಟ ವಾಹನವನ್ನು ಒದಗಿಸಲಾಗಿದೆ. ಹಿರಿಯ ಅಧಿಕಾರಿಗಳು ಬುಲೆಟ್ ಪ್ರೂಫ್ ವಾಹನದಲ್ಲಿ ಸಂಚರಿಸಿ ನಮಗೆ ಮಾತ್ರ ಬುಲೆಟ್ ಪ್ರೂಫ್‌ರಹಿತ ವಾಹನ ಒದಗಿಸುತ್ತಿದ್ದಾರೆ” ಎಂದು ಹೇಳುತ್ತಾರೆ. ಈ ವೀಡಿಯೊ ಯಾವ ಪ್ರದೇಶದಲ್ಲಿ ರೆಕಾರ್ಡ್ ಮಾಡಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಕಳೆದ ವಾರವೂ ಮೋದಿ ವಿಶೇಷ ವಿಮಾನದ ಕುರಿತು ಟೀಕೆ ಮಾಡಿದ್ದ ರಾಹುಲ್, “ತಲಾ 8,000 ಕೋಟಿ ರೂ.ಗೂ ಅಧಿಕ ಮೊತ್ತ ಪಾವತಿಸಿ ಪ್ರಧಾನಿಯ ಪ್ರಯಾಣಕ್ಕೆ 2 ವಿಶೇಷ ಬೋಯಿಂಗ್ ವಿಮಾನ ವ್ಯವಸ್ಥೆ ಮಾಡಲಾಗಿದೆ. ಇನ್ನೊಂದೆಡೆ ಲಡಾಖ್ ಗಡಿಯಲ್ಲಿ ನಮ್ಮ ಧೀರ ಯೋಧರು ತೀವ್ರ ಚಳಿಗೂ ಅಂಜದೆ ನಮ್ಮ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ” ಎಂದು ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News