ಜಾರ್ಖಂಡ್: ಯುವತಿಯ ಅತ್ಯಾಚಾರ ಪ್ರಕರಣ; ಐವರು ಆರೋಪಿಗಳ ಬಂಧನ

Update: 2020-10-10 14:31 GMT

ರಾಂಚಿ, ಅ.10: ಜಾರ್ಖಂಡ್‌ನ ಜಮ್‌ಶೆಡ್‌ಪುರದಲ್ಲಿ 17 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಮಂಗಳವಾರ ಈಕೆ ತನ್ನ ಸ್ನೇಹಿತನೊಂದಿಗೆ ಇದ್ದಾಗ ಇಬ್ಬರನ್ನೂ ಬಂದೂಕು ತೋರಿಸಿ ಬೆದರಿಸಿ ಅಪಹರಿಸಿದ್ದ ತಂಡವೊಂದು ಸಮೀಪದ ಗೋಶಾಲೆಗೆ ಕರೆದೊಯ್ದಿದೆ. ಅಲ್ಲಿ ಯುವತಿಯ ಸ್ನೇಹಿತನ ಕೈಯನ್ನು ಕಟ್ಟಿ ಹಾಕಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪ್ರಕರಣ ದಾಖಲಾಗಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಮಿಳ್ ವಾಣನ್ ಹೇಳಿದ್ದಾರೆ.

ಆರೋಪಿಗಳನ್ನು ಶಂಕರ್ ಟಿಯು, ರೋಶನ್ ಕುಜೂರ್, ಸೂರಜ್ ಪತ್ರಾವೊ ಹಾಗೂ ಸನ್ನಿ ಸೊರೇನ್ ಎಂದು ಗುರುತಿಸಲಾಗಿದೆ. ಐದನೇ ಆರೋಪಿ ಬಾಲಾಪರಾಧಿಯಾಗಿದ್ದು ಆತನನ್ನು ಬಾಲಗೃಹಕ್ಕೆ ಕಳುಹಿಸಲಾಗಿದೆ. ಬಂಧಿತರಿಂದ ಸ್ಥಳೀಯ ನಿರ್ಮಿತ ಪಿಸ್ತೂಲ್ ಹಾಗೂ ಎರಡು ಸಜೀವ ಕಾರ್ಟ್ರಿಡ್ಜ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ತಾನು ನೃತ್ಯ ತರಗತಿಯಿಂದ ವಾಪಸು ಬರುತ್ತಿದ್ದಾಗ ತನ್ನನ್ನು ಅಪಹರಿಸಲಾಗಿದೆ ಎಂದು ಯುವತಿ ಮೊದಲು ಹೇಳಿಕೆ ನೀಡಿದ್ದಳು. ಆದರೆ ಆಕೆ ಹೇಳಿದ್ದು ಸತ್ಯವಲ್ಲ ಎಂಬುದು ಹೆಚ್ಚಿನ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News