ಜಮ್ಮು: ದೇಶದೊಳಗೆ ಶಸ್ತ್ರಾಸ್ತ್ರ ರವಾನಿಸುವ ಪಾಕ್ ಯತ್ನ ವಿಫಲ

Update: 2020-10-10 15:46 GMT

ಶ್ರೀನಗರ, ಅ.10: ಜಮ್ಮು-ಕಾಶ್ಮೀರದ ಕೇರಣ್ ವಲಯದಲ್ಲಿ ಗಡಿ ನಿಯಂತ್ರಣ ರೇಖೆಯ ಹಲವೆಡೆ ಶಸ್ತ್ರಾಸ್ತ್ರಗಳನ್ನು ಭಾರತದ ಪ್ರದೇಶದೊಳಗೆ ರವಾನಿಸುವ ಪಾಕಿಸ್ತಾನದ ಪ್ರಯತ್ನವನ್ನು ಸೇನೆ ವಿಫಲಗೊಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೇರಣ್ ವಲಯದಲ್ಲಿ ಶನಿವಾರ ಮೂವರು ವ್ಯಕ್ತಿಗಳು ಕಿಶನ್‌ಗಂಗಾ ನದಿಯ ಆಚೆ ದಡದಿಂದ ಹಗ್ಗದ ಮೂಲಕ ಒಂದು ಟ್ಯೂಬನ್ನು ಇನ್ನೊಂದು ದಡದತ್ತ ಎಳೆಯುತ್ತಿರುವುದನ್ನು ಸೇನೆಯ ಗಸ್ತು ಪಡೆ ಪತ್ತೆಹಚ್ಚಿದೆ. ತಕ್ಷಣ ಯೋಧರು ಆ ಪ್ರದೇಶದತ್ತ ಧಾವಿಸಿದಾಗ ಆ ವ್ಯಕ್ತಿಗಳು ಸಮೀಪದ ಅರಣ್ಯಕ್ಕೆ ನುಸುಳಿದ್ದಾರೆ. ಹಗ್ಗಕ್ಕೆ ಕಟ್ಟಿದ್ದ ಟ್ಯೂಬ್‌ನ ಮೂಲಕ ಶಸ್ತ್ರಾಸ್ತ್ರ ತುಂಬಿದ್ದ ಬ್ಯಾಗನ್ನು ತರಲಾಗುತ್ತಿತ್ತು. ಬ್ಯಾಗ್‌ನಲ್ಲಿದ್ದ 4 ಎಕೆ-74 ರೈಫಲ್ಸ್, 8 ಮ್ಯಾಗಝಿನ್‌ಗಳು(ಕಾರ್ಟಿಡ್ಜ್ ಗಳನ್ನು ಹೊಂದಿರುವ ಸಾಧನ) ಹಾಗೂ 240 ಸುತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆಯಾಗಿರುವ ಭಯೋತ್ಪಾದಕರು ಗಡಿ ನಿಯಂತ್ರಣ ರೇಖೆಯ ಬಳಿ ಶಸ್ತ್ರಾಸ್ತ್ರದ ದಾಸ್ತಾನು ನಿರ್ಮಿಸುವ ಉದ್ದೇಶ ಹೊಂದಿದ್ದು ಈ ಹಿಂದೆಯೂ ಇಂತಹ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News