ಪ್ರಸಕ್ತ ಶೈಕ್ಷಣಿಕ ವರ್ಷದ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲು ಎಸ್‍ಡಿಪಿಐ ಒತ್ತಾಯ

Update: 2020-10-10 16:29 GMT

ಬೆಂಗಳೂರು, ಅ.10: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಾರದಿರುವುದರಿಂದ ಮಕ್ಕಳ ಆರೋಗ್ಯದ ದೃಷ್ಟಿಯಿಂದ ರಾಜ್ಯ ಸರಕಾರ ಶಾಲೆಗಳನ್ನು ಪ್ರಾರಂಭ ಮಾಡಬಾರದು. ಹಾಗೂ ಪ್ರಸಕ್ತ ಶೈಕ್ಷಣಿಕ ವರ್ಷದ ಎಲ್ಲ ಶಾಲೆ, ಕಾಲೇಜಿನ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಬೇಕೆಂದು ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ಹನ್ನಾನ್ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊರೋನ ರೋಗದಿಂದ ತುತ್ತಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೊರೋನ ಪರೀಕ್ಷೆಯನ್ನು ವ್ಯವಸ್ಥಿತವಾಗಿ ಮಾಡಿದರೆ ಮತ್ತಷ್ಟು ಪಾಸಿಟಿವ್ ಪ್ರಕರಣಗಳು ಪತ್ತೆ ಆಗುವ ಸಂಭವವಿದೆ. ಇಂತಹ ಸಂದರ್ಭದಲ್ಲಿ ಶಾಲೆ ಆರಂಭ ಸುರಕ್ಷಿತವಲ್ಲವೆಂದು ಅಭಿಪ್ರಾಯಿಸಿದ್ದಾರೆ.

ಎಸ್‍ಡಿಪಿಐ ವತಿಯಿಂದ ಈಗಾಗಲೇ ಸುಮಾರು 20 ಜಿಲ್ಲೆಗಳಲ್ಲಿ ಪೋಷಕರ, ಮಕ್ಕಳ ಹಕ್ಕುಗಳ ಚಿಂತಕರ, ಸಾಮಾಜಿಕ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದ್ದು, ಸದ್ಯದ ಮಟ್ಟಿಗೆ ಯಾವ ಕಾರಣಕ್ಕೂ ಶಾಲೆಗಳನ್ನು ಪ್ರಾರಂಭಿಸಬಾರದೆಂದು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ಅವರು ತಿಳಿಸಿದ್ದಾರೆ.

ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಒತ್ತಡಕ್ಕೆ ಮಣಿದು ರಾಜ್ಯ ಸರಕಾರ ಶಾಲೆಗಳನ್ನು ಪ್ರಾರಂಭಿಸಿದರೆ, ಅದರಿಂದ ಎದುರಾಗುವ ಅನಾಹುತಕ್ಕೆ ಸರಕಾರವೇ ಹೊಣೆಯಾಗಲಿದೆ. ಅದರ ಬದಲಿಗೆ ಈ ಶೈಕ್ಷಣಿಕ ವರ್ಷದಲ್ಲಿ ವಿಶೇಷ ಆದ್ಯತೆ ಮೇರೆಗೆ ಶಾಲೆ ಹಾಗೂ ಕಾಲೇಜಿನ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಿ. ಇದರಿಂದ ಕಳೆದುಕೊಳ್ಳುವುದೇನಿಲ್ಲವೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News