ನೀರಿಗಾಗಿ ಗಾಳಿಯಂತ್ರಗಳ ಬಳಕೆಯ ಮೋದಿ ಪರಿಕಲ್ಪನೆ ಕಾರ್ಯಸಾಧ್ಯವಲ್ಲ: ತಜ್ಞರು

Update: 2020-10-10 16:44 GMT

ಹೊಸದಿಲ್ಲಿ,ಅ.10: “ಗಾಳಿಯಂತ್ರವೊಂದು ವಾತಾವರಣದಿಂದ ನೀರನ್ನು ಉತ್ಪಾದಿಸಬಹುದೇ?, ಇದು ಸಾಧ್ಯವೆಂದು ಲೆಕ್ಕ ಹಾಕಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಿಮ್ಮ ಸಂಸ್ಥೆಯು ಇಂತಹ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಲು ಸಾಧ್ಯವೇ” ಎಂದು ಡೆನ್ಮಾರ್ಕ್‌ನ ಗಾಳಿಯಂತ್ರಗಳ ತಯಾರಿಕೆ ಸಂಸ್ಥೆ ವೆಸ್ಟಾ ವಿಂಡ್ ಸಿಸ್ಟಮ್ಸ್‌ನ ಸಿಇಒ ಹೆನ್ರಿಕ್ ಆ್ಯಂಡರ್ಸನ್ ಅವರನ್ನು ಕೋರಿಕೊಂಡಿದ್ದಾರೆ.

ಗಾಳಿಯಂತ್ರಗಳಿಗೆ ವಾತಾವರಣದಿಂದ ತೇವವನ್ನು ಹೀರಿಕೊಳ್ಳಲು ಮತ್ತು ಅದನ್ನು ನೀರನ್ನಾಗಿ ಸಾಂದ್ರೀಕರಿಸಲು ಸಾಧ್ಯವಾಗುತ್ತದೆ ಎನ್ನುವುದು ಮೋದಿಯವರ ವಾದವಾಗಿದೆ. ವಾತಾವರಣದಿಂದ ಆಮ್ಲಜನಕವನ್ನು ಪ್ರತ್ಯೇಕಿಸಲು ಗಾಳಿಯಂತ್ರಕ್ಕೆ ಸಾಧ್ಯವಾಗಬಹುದು ಮತ್ತು ತನ್ಮೂಲಕ ಅದು ಆಮ್ಲಜನಕ,ವಿದ್ಯುತ್ ಮತ್ತು ಸ್ವಚ್ಛ ನೀರನ್ನು ಉತ್ಪಾದಿಸಬಹುದು ಎಂದೂ ಮೋದಿ ಪ್ರತಿಪಾದಿಸಿದ್ದಾರೆ.

ಮೋದಿಯವರ ಪರಿಕಲ್ಪನೆಗಳು ತನ್ನ ಇಂಜಿನಿಯರ್‌ಗಳಲ್ಲಿ ‘ಉತ್ಸಾಹ’ವನ್ನು ತುಂಬಿದೆ ಮತ್ತು ಅದು ಅವರನ್ನು ‘ಅತ್ಯಂತ ಬಿಝಿಯಾಗಿ’ ಇರಿಸಲಿದೆ ಎಂದು ಆ್ಯಂಡರ್ಸನ್ ಹೇಳಿದ್ದಾರೆ.

ಮೋದಿಯವರು ತಪ್ಪಾಗಿ ತಿಳಿದುಕೊಂಡಿದ್ದಾರೆ ಎಂದು ಬೊಟ್ಟು ಮಾಡಿ ಹೇಳುವಷ್ಟು ಧೈರ್ಯ ಪ್ರಧಾನಿಯ ಸಲಹೆಗಾರರಲ್ಲಿ ಒಬ್ಬರಿಗೂ ಇಲ್ಲ ಎಂದು ಹೇಳಲು ಉದಾಹರಣೆಯಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ ಹೇಳಿಕೆಯನ್ನು ಬಳಸಿಕೊಂಡಿದ್ದಾರೆ.

ಗಾಳಿಯಂತ್ರಗಳಲ್ಲಿ ತೇವವಿದ್ದರೆ ಅದರ ಬ್ಲೇಡ್‌ಗಳಿಗೆ ಹಾನಿಯಾಗುತ್ತದೆ ಮತ್ತು ನೀರನ್ನು ತೆಗೆಯಲು ಗಾಳಿಯಂತ್ರಕ್ಕಿಂತ ಸರಳವಾದ ಇತರ ಪರ್ಯಾಯಗಳಿವೆ ಎಂದು ತಜ್ಞರು ಹೇಳಿದ್ದಾರೆ.

ಯಂತ್ರವು ಗಾಳಿಯಲ್ಲಿನ ಶಕ್ತಿಯನ್ನು ವಿದ್ಯುತ್‌ನ್ನಾಗಿ ಪರಿವರ್ತಿಸುತ್ತದೆ ಮತ್ತು ಅದರ ಬ್ಲೇಡ್‌ಗಳು ತೇವವನ್ನು ದೂರವಿಡುವಂತೆ ವಿನ್ಯಾಸಗೊಂಡಿರುತ್ತವೆ. ಕುಡಿಯುವ ನೀರನ್ನು ಉತ್ಪಾದಿಸಲು ಗಾಳಿ ಶಕ್ತಿಯನ್ನು ಬಳಸುವ ಪ್ರಯತ್ನಗಳು ಹಿಂದೆ ನಡೆದಿವೆ,ಆದರೆ ಕ್ಷಾರಯುಕ್ತ ನೀರನ್ನು ಶುದ್ಧೀಕರಿಸಲು ವಿದ್ಯುತ್ ಶಕ್ತಿಯ ಬಳಕೆಯನ್ನು ಇದು ಒಳಗೊಂಡಿದೆ.

 ಸಾಂದ್ರೀಕರಣವು ಗಾಳಿಯಂತ್ರದ ಶತ್ರುವಾಗಿದೆ. ಉದಾಹರಣೆಗೆ ಕರಾವಳಿ ಪ್ರದೇಶದ ಗ್ರಾಮದಲ್ಲಿ ಗಾಳಿಯಂತ್ರವಿದ್ದರೆ ಉಪಯೋಗಿಯಾಗಬಹುದು. ಆದರೆ ಅಂತರ್ಜಲವನ್ನು ಹೊರಗೆ ತೆಗೆಯಲು ಬಾವಿಯಿರಬೇಕು ಮತ್ತು ಕ್ಷಾರಯುಕ್ತ ನೀರನ್ನು ಶುದ್ಧ ನೀರನ್ನಾಗಿ ಸಂಸ್ಕರಿಸುವ ಟರ್ಬೈನ್ ಪವರ್ ಸಿಸ್ಟಮ್ ಇರಬೇಕು ಎಂದು ಪಾನಾಚೆ ಡಿಜಿಲೈಫ್ ಲಿ.ನ ಆಡಳಿತ ನಿರ್ದೇಶಕ ಅಮಿತ್ ರಾಂಭಿಯಾ ತಿಳಿಸಿದರು.

ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ಬಿಜೆಪಿಯ ಐಟಿ ಕೋಶದ ಮುಖ್ಯಸ್ಥ ಅಮಿತ್ ಮಾಳವಿಯ ಅವರು ಪ್ರಧಾನಿಯ ಕಲ್ಪನೆಯನ್ನು ಸಮರ್ಥಿಸಿಕೊಳ್ಳಲು ಮತ್ತು ರಾಹುಲ್‌ರನ್ನು ಟೀಕಿಸಲು ಹಿಂದಿನ ಲೇಖನಗಳನ್ನು ಟ್ವೀಟಿಸಿದ್ದಾರೆ.

ಇಲೇ ವಾಟರ್ ಎಂಬ ಫ್ರೆಂಚ್ ಕಂಪನಿಯು ಗಾಳಿಯಿಂದ ನೀರನ್ನು ತಯಾರಿಸಲು ಗಾಳಿಯಂತ್ರವನ್ನು ತಾನು ಪರಿಷ್ಕರಿಸಿದ್ದಾಗಿ ಹೇಳಿಕೊಂಡಿದ್ದ 2012ರ ಸಿಎನ್‌ಎನ್ ಲೇಖನವೊಂದನ್ನು ಟ್ವೀಟ್ ಬೆಟ್ಟು ಮಾಡಿದೆ. ಲೇಖನದಲ್ಲಿ ಹೇಳಿರುವಂತೆ ಕಂಪನಿಯು ಗಂಟೆಗೆ 62 ಲೀ.ನೀರನ್ನು ಉತ್ಪಾದಿಸುವ 24 ಮೀ.ಎತ್ತರದ ಪರಿಷ್ಕೃತ ಗಾಳಿಯಂತ್ರದ ಕೆಲಸ ಮಾಡುವ ಮೂಲಮಾದರಿಯನ್ನು ಅಬುಧಾಬಿ ಬಳಿಯ ಮರುಭೂಮಿಯಲ್ಲಿ ಪ್ರದರ್ಶಿಸಿತ್ತು. ಇಂತಹ ಒಂದು ಗಾಳಿಯಂತ್ರವನ್ನು ಸ್ಥಾಪಿಸಲು ಆರೇಳು ಲಕ್ಷ ಡಾ.ವೆಚ್ಚವಾಗುತ್ತದೆ ಎಂದು ಕಂಪನಿಯ ಅಧಿಕಾರಿಗಳು ಆಗ ಹೇಳಿದ್ದರು.

ಕಂಪನಿಯ ವೆಬ್‌ಸೈಟ್ ಪರಿಶೀಲಿಸಿದಾಗ ಅದು ಟರ್ಬೈನ್ ವ್ಯವಹಾರದಿಂದ ಎಂದೋ ಹೊರಬಿದ್ದಿರುವುದು ಬೆಳಕಿಗೆ ಬಂದಿದೆ.

‘ಇಲೇ ವಾಟರ್ ಜಲ ತಂತ್ರಜ್ಞಾನ ಕಂಪನಿಯಾಗಿದ್ದು ಕುಡಿಯುವ ನೀರಿನ ಉತ್ಪಾದನೆಯಲ್ಲಿ ಗಾಳಿಯಂತ್ರಗಳ ಬಳಕೆಯ ಹರಿಕಾರನಾಗಿದೆ.

ಕಂಪನಿಯ ಬ್ರಾಂಡ್ ಈಗ ಅಸ್ತಿತ್ವದಲ್ಲಿಲ್ಲ,ಆದರೆ ಜಲ ತಂತ್ರಜ್ಞಾನದಲ್ಲಿ ಸುಧಾರಣೆಗಳ ಮೂಲಕ ಅದರ ಪರಂಪರೆ ಉಳಿದುಕೊಂಡಿದೆ ’ ಎಂದು ಅದರಲ್ಲಿ ಹೇಳಲಾಗಿದೆ.

   ಪ್ರಧಾನಿಯವರ ಸಲಹೆ ಸಂಭವನೀಯವಲ್ಲ. ನೀರನ್ನು ಸಂಸ್ಕರಿಸುವ ಹಳೆಯ ಸಾಧನವಾದ ಸೋಲಾರ್ ಸ್ಟಿಲ್‌ನ ಕ್ಷಮತೆಯನ್ನು ಹೆಚ್ಚಿಸಲು ಟರ್ಬೈನ್‌ನ್ನು ಅದಕ್ಕೆ ಜೋಡಿಸಬಹುದು. ಅತಿಯಾದ ತೇವದಿಂದ ಬ್ಲೇಡ್‌ಗಳು ತುಕ್ಕು ಹಿಡಿಯುತ್ತವೆ ಮತ್ತು ಕಡಿಮೆ ತೇವವು ಸಾಂದ್ರೀಕರಣ ಉದ್ದೇಶವನ್ನು ವಿಫಲಗೊಳಿಸುತ್ತದೆ. ಅಲ್ಲದೆ ಅತಿ ಕಡಿಮೆ ನೀರಿಗಾಗಿ ಅತಿ ಹೆಚ್ಚು ಶಕ್ತಿಯ ಬಳಕೆಯಾಗುತ್ತದೆ. ಇದು ತಂತ್ರಜ್ಞಾನದ ಪ್ರಾತ್ಯಕ್ಷಿಕೆಗಾಗಿಯೇ ಹೊರತು ವಾಸ್ತವದಲ್ಲಿ ಅನುಷ್ಠಾನಿಸಲು ಅಲ್ಲ ಎಂದು ಚೆನ್ನೈನ ತಜ್ಞರೋರ್ವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News