ದಿಲ್ಲಿ ಹಿಂಸಾಚಾರ: ಸಾಕ್ಷಿಗಳ ಹೆಸರು ಪ್ರಕಟಿಸಿದ ಪೊಲೀಸರಿಗೆ ಕೋರ್ಟ್ ತರಾಟೆ

Update: 2020-10-10 16:50 GMT

ಹೊಸದಿಲ್ಲಿ,ಅ.10: ದಿಲ್ಲಿ ಗಲಭೆ ಪ್ರಕರಣದ ಆರೋಪಿಗಳ ವಿರುದ್ಧ ಸಾಕ್ಷ್ಯ ನುಡಿದಿರುವ 15 ಮಂದಿ ಸಾರ್ವಜನಿಕ ಸಾಕ್ಷಿದಾರರ ಪೂರ್ಣ ಹೆಸರು ಹಾಗೂ ವಿಳಾಸಗಳನ್ನು ದಿಲ್ಲಿ ಪೊಲೀಸರ ವಿಶೇಷ ತನಿಖಾ ದಳವು ದೋಷಾರೋಪಪಟ್ಟಿಯಲ್ಲಿ ಬಹಿರಂಗಪಡಿಸಿರುವುದನ್ನು ದಿಲ್ಲಿ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದೆ ಹಾಗೂ ಈ ಸುರಕ್ಷಿಸಲ್ಪಟ್ಟ ಸಾಕ್ಷಿಗಳ ಹೆಸರುಗಳನ್ನು ಪ್ರಕಟಿಸದಂತೆಯೂ ಅದು ಆದೇಶ ನೀಡಿದೆ.

 ಸಂರಕ್ಷಿತ ಸಾಕ್ಷಿದಾರರ ಹೆಸರುಗಳು ಬಹಿರಂಗಗೊಂಡಿರುವುದಕ್ಕೆ ತನಿಖಾಧಿಕಾರಿ ಹೊಣೆಯೆಂದು ನ್ಯಾಯಾಲಯ ಪ್ರತಿಪಾದಿಸಿದೆ ಹಾಗೂ ಈ ಸಾಕ್ಷಿದಾರರಿಗೆ ಸಮಗ್ರವಾದ ಭದ್ರತೆ ಹಾಗೂ ಸುರಕ್ಷತೆಯನ್ನು ಒದಗಿಸುವಂತೆಯೂ ಅದು ದಿಲ್ಲಿ ಪೊಲೀಸರ ತನಿಖಾದಳಕ್ಕೆ ಸೂಚಿಸಿದೆ.

 ಸಂರಕ್ಷಿತ ಸಾಕ್ಷಿದಾರರ ಹೆಸರನ್ನು ಪ್ರಕಟಿಸಿರುವುದರ ವಿರುದ್ಧ ವಿಶೇಷ ಸಾರ್ವಜನಿಕ ಅಭಿಯೋಜಕ ಅಮಿತ್ ಪ್ರಸಾದ್ ಅವರು ಕರ್ಕಾರ್‌ಡೂಮಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅರ್ಜಿಯ ಪರಿಶೀನೆ ನಡೆಸಿದ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಅವರು ಸಂರಕ್ಷಿತ ಸಾಕ್ಷಿಗಳ ಹೆಸರು ಬಹಿರಂಗಪಡಿಸದಂತೆ ಸೂಚನೆ ನೀಡಿದ್ದಾರೆ.

ದಿಲ್ಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಸ್ಥಾಪಿತ ಹಿತಾಸಕ್ತಿಗಳನ್ನು ಹೊಂದಿರುವ ವಿವಿಧ ವ್ಯಕ್ತಿಗಳು ಕನಿಷ್ಠ ಮೂರು ಸಂರಕ್ಷಿತ ಸಾಕ್ಷಿಗಳನ್ನು ಸಂಪರ್ಕಿಸಿರುವುದು ತನಿಖಾ ಸಂಸ್ಥೆಯ ಗಮನಕ್ಕೆ ಬಂದಿರುವುದನ್ನು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ.

ಸಂರಕ್ಷಿತ ಸಾಕ್ಷಿಗಳ ಹೆಸರುಗಳನ್ನೊಳಗೊಂಡ ದೋಷಾರೋಪಪಟ್ಟಿಯ ಪ್ರತಿಗಳನ್ನು ಆರೋಪಿಗಳು ಹಾಗೂ ಅವರ ವಕೀಲರಿಂದ ಮರಳಿಪಡೆದುಕೊಂಡು ಅವರಿಗೆ ಮೊಟಕುಗೊಳಿಸಲಾದ ಪ್ರತಿಗಳನ್ನು ನೀಡಬೇಕೆಂದು ಅರ್ಜಿದಾರರು ಕೋರಿದ್ದರು.

ಈ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಗಲಭೆಯಲ್ಲಿ 53 ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡಿದ್ದರು ಹಾಗೂ ಕೋಟ್ಯಂತರ ರೂ. ಮೌಲ್ಯದ ಆಸ್ತಿಪಾಸ್ತಿಗಳಗೆ ಗಲಭೆಕೋರರು ಹಾನಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News