'ಶೂನ್ಯ ಶೈಕ್ಷಣಿಕ ವರ್ಷ' ಘೋಷಿಸಿದರೂ ತಪ್ಪಿಲ್ಲ: ಬಸವರಾಜ ಹೊರಟ್ಟಿ

Update: 2020-10-11 12:37 GMT

ಹುಬ್ಬಳ್ಳಿ, ಅ. 11: ಕೋವಿಡ್ 19 ಪರಿಣಾಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮೇಲಾಗುತ್ತಿದೆ. ಆದುದರಿಂದಾಗಿ ಈ ಸಾಲಿನ ಶೈಕ್ಷಣಿಕ ವರ್ಷವನ್ನು ಶೂನ್ಯ ವರ್ಷ ಎಂದು ಘೋಷಿಸಿದರೂ ತಪ್ಪಿಲ್ಲ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಪ್ರಾಣಕ್ಕಿಂತ ಯಾವುದೂ ದೊಡ್ಡದಲ್ಲ. ಶಾಲೆ ಆರಂಭದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಶಿಕ್ಷಣ ಸಚಿವರು ಜನಪ್ರತಿನಿಧಿಗಳಿಗೆ ಪತ್ರ ಬರೆದಿದ್ದಾರೆ. ನಾವು ನೀಡಿದ ಅಭಿಪ್ರಾಯವನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ. ಹೀಗಾದರೆ ಪತ್ರ ಬರೆಯುವುದಾದರೂ ಯಾಕೆ ಎಂದು ಪ್ರಶ್ನಿಸಿದರು.

ಕೊರೋನ ಸಂಪೂರ್ಣವಾಗಿ ಹೋಗುವ ತನಕ ಶಾಲಾ, ಕಾಲೇಜುಗಳನ್ನು ಪ್ರಾರಂಭಿಸಬಾರದು. ಶಿಕ್ಷಕರಿಗೆ ದಸರಾ ರಜೆ ರದ್ದು ಮಾಡಿದ್ದು ಸರಿಯಾದ ಕ್ರಮವಲ್ಲ. ಈಗಿನ ಪರಿಸ್ಥಿತಿಯಲ್ಲಿ ಶಿಕ್ಷಕರು ಮತ್ತು ಮಕ್ಕಳಿಗೆ ಸಾಧ್ಯವಾದಷ್ಟು ತಮ್ಮ ಮನೆಗಳಲ್ಲಿಯೇ ಇರಲು ಬಿಡಬೇಕು. ಇಷ್ಟೆಲ್ಲ ಹೇಳಿದ ಮೇಲೂ ಶಾಲೆ ಆರಂಭಿಸಿ ಸರಕಾರ ತನ್ನ ಪ್ರತಿಷ್ಠೆ ಮುಂದುವರಿಸಿದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News