ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ 'ವಿದ್ಯಾಗಮ' ಪುನರ್ ಆರಂಭಕ್ಕೆ ಹಲವು ಶಿಕ್ಷಕರು ಸಹಿತ ಪೋಷಕರ ಒತ್ತಾಯ

Update: 2020-10-12 14:04 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ. 12: ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಆನ್‍ಲೈನ್ ಶಿಕ್ಷಣಕ್ಕೆ ಪರ್ಯಾಯವಾಗಿ ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕೆಗೆ ಪೂರಕವಾಗಿ ಆರಂಭಿಸಿದ್ದ 'ವಿದ್ಯಾಗಮ' ಸ್ಥಗಿತಗೊಳಿಸಲಾಗಿದೆ. ಆದರೆ, ಇದಕ್ಕೆ ಪೋಷಕರು, ಶಿಕ್ಷಣ ತಜ್ಞರು, ಹಲವು ಶಿಕ್ಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸೋಂಕು ಹರಡದಂತೆ ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಕಾರ್ಯಕ್ರಮ ಪುನರ್ ಆರಂಭಿಸಬೇಕೆಂಬ ಒತ್ತಾಯ ಕೇಳಿಬರುತ್ತಿವೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರೇ `ವಿದ್ಯಾಗಮ ಸಮಾಜದ ಕೆಳಸ್ಥರದ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಕ್ಕಳ ಹಿತವನ್ನು ಮನದಲ್ಲಿಟ್ಟುಕೊಂಡು ಯೋಜಿಸಿರುವ ಕಾರ್ಯಕ್ರಮ. ಆದರೂ, ವಿವಿಧ ವಲಯಗಳಿಂದ ಪ್ರಕಟವಾಗುತ್ತಿರುವ ಕಾಳಜಿಗೆ ಮನ್ನಣೆ ಕೊಟ್ಟು ಶಿಕ್ಷಣ ಇಲಾಖೆ ಈ ಕುರಿತು ಸಂಗ್ರಹಿಸಲು ಉದ್ದೇಶಿಸಿರುವ ಜಿಲ್ಲಾವಾರು ಅಂಕಿ-ಅಂಶಗಳ ಸ್ವೀಕಾರ ಹಾಗೂ ಅದರ ವಿಶ್ಲೇಷಣೆ ಪೂರ್ಣಗೊಳ್ಳುವವರೆಗೂ ವಿದ್ಯಾಗಮ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಆದರೆ, ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ `ವಿದ್ಯಾಗಮ ಕೊಂದುಬಿಟ್ಟೆವು ಎಂಬ ನಿಮ್ಮ(ವಾಹಿನಿಗಳ) ಸಂಭ್ರಮ ನೋಡಿ ನಗಬೇಕೋ..? ಆನ್‍ಲೈನ್ ವೇದಿಕೆಗೆ ಪರ್ಯಾಯವಾಗಿದ್ದ ವಿದ್ಯಾಗಮ ಕಳೆದುಕೊಂಡ ಮಕ್ಕಳನ್ನು ನೋಡಿ ಅಳಬೇಕೋ.. ಗೊತ್ತಾಗುತ್ತಿಲ್ಲ. ನೀವು ಬಡ ಮಕ್ಕಳ ಹಕ್ಕು ಕಸಿದುಕೊಂಡಿದ್ದೀರಿ. ಸೋಮಾರಿ ಶಿಕ್ಷಕರ ಆಸೆ ಈಡೇರಿಸುವ ಸಲುವಾಗಿ ಜೀವ ಉಳಿಸೋ ನೆಪದಲ್ಲಿ ಪುಟ್ಟ ಪುಟ್ಟ ಬಡ ಮಕ್ಕಳ ಭವಿಷ್ಯವನ್ನು ಚಿವುಟಿ ಹಾಕಿದ್ದೀರಿ' ಎಂದು ಲೋಕಾಯುಕ್ತ ಡಿವೈಎಸ್ಪಿ ಚಿಕ್ಕನಾಯಕನಹಳ್ಳಿ ರವೀಶ್ ಎಂಬವರ ಹೆಸರಿನಲ್ಲಿ ಸಂದೇಶವೊಂದು ವೈರಲ್ ಆಗಿದೆ.

ಈ ಬಗ್ಗೆ 'ವಾರ್ತಾಭಾರತಿ' ಪತ್ರಿಕೆ ದೂರವಾಣಿಯಲ್ಲಿ ಡಿವೈಎಸ್ಪಿ ಅವರನ್ನು ಸಂಪರ್ಕಿಸಿದಾಗ, 'ವಿದ್ಯಾಗಮ ಕುರಿತ ವಾಟ್ಸ್ ಅಪ್ ಸಂದೇಶ ನನ್ನ ಹೆಸರಿನಲ್ಲಿ ಹರಿದಾಡುತ್ತಿದೆ. ಆದರೆ, ಅದನ್ನು ನಾನು ಹಾಕಿಲ್ಲ. ಬೇರೆ ಗ್ರೂಪ್ ಮೂಲಕ ನನಗೆ ಬಂದ ಸಂದೇಶವನ್ನು ನಾನು ನನ್ನ ಸ್ನೇಹಿತರಿಗೆ ಶೇರ್ ಮಾಡಿದ್ದೆ. ಆದರೆ, ಅವರು ಆ ಸಂದೇಶಕ್ಕೆ ನನ್ನ ಹೆಸರು ಸೇರಿಸಿದ್ದಾರೆ' ಎಂದು ಸ್ಪಷ್ಟಪಡಿಸಿದರು.

'ಅತಿಹೆಚ್ಚು ಜನರ ಅನುಕೂಲ ನೋಡಿಕೊಂಡು ಯೋಜನೆಗಳನ್ನು ರೂಪಿಸಬೇಕು. ಆದರೆ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು ಜನರ ಭಾವನೆಗಳನ್ನು ಉದ್ವೇಗಕ್ಕೆ ತಳ್ಳಿ ಆಡಳಿತಕ್ಕೆ ಮುಂದಾಗಿದ್ದಾರೆ. ಸೋಷಿಯಲ್ ಇಂಜಿನಿಯರಿಂಗ್ ಅನ್ನು ಹಾಳುಗಡೆವುತ್ತಿರುವ ನಿಮ್ಮನ್ನು ಈ ಸಮಾಜ ಕ್ಷಮಿಸುವುದಿಲ್ಲ. ಕೊರೋನಗಿಂತಲೂ ಕ್ರೂರ ನೀವು. ನಿಮಗೆ ಇನ್ನಾದರೂ ಬುದ್ಧಿ ಬರಲಿ' ಎಂದು ಆ ವೈರಲ್ ಸಂದೇಶದಲ್ಲಿ ಟೀಕಿಸಲಾಗಿದೆ.

'ಗ್ರಾಮೀಣ ಪ್ರದೇಶದ ಬಡ ಮಕ್ಕಳ ಶೈಕ್ಷಣಿಕ ಕಲಿಕೆಗೆ ಪೂರಕವಾಗಿದ್ದ ವಿದ್ಯಾಗಮ ಯಾವುದೇ ಕಾರಣಕ್ಕೆ ನಿಲ್ಲಿಸಬೇಡಿ. ಹಳ್ಳಿಗಾಡಿನ ಮಕ್ಕಳಿಗೆ ಅನುಕೂಲಕರವಾಗಿರುವ ವಿದ್ಯಾಗಮ ಕಾರ್ಯಕ್ರಮವನ್ನು ಪುನರ್ ಆರಂಭಿಸಬೇಕು' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಪೋಷಕರು, ಶಿಕ್ಷಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಲ್ಲದೆ, ಉದ್ದೇಶಿತ ಯೋಜನೆಯಲ್ಲಿ ಕೆಲ ಲೋಪದೋಷಗಳನ್ನು ಸರಿಪಡಿಸಿಕೊಳ್ಳಿ ಎಂದು ಸಲಹೆ ಮಾಡಿದ್ದಾರೆ.

`ಸರಕಾರಿ ನೌಕರರು ಅಂದರೆ ಶಿಕ್ಷಕರು ಮಾತ್ರವೇ? ಹಾಗೇ ಶಿಕ್ಷಕರ ವೇತನ ನಿಲ್ಲಿಸಿ. ಸಾರಿಗೆ ಇಲಾಖೆ ನೌಕರರು, ಬ್ಯಾಂಕ್ ನೌಕರರು ಇವರೆಲ್ಲ ಕಷ್ಟಪಡುತ್ತಿದ್ದಾರೆ. ಬ್ಯಾಂಕ್, ವಿದ್ಯುತ್ ನೌಕರರು ಇಲ್ಲವೆಂದರೆ ಸ್ವಲ್ಪ ಯೋಚಿಸಿ.. ಬರ್ತಾ ಬರ್ತಾ ಶಿಕ್ಷಕರು ಕುಳಿತಿರುವಲ್ಲೇ ಸಂಬಳ ಕೇಳುತ್ತಾರೆ ನೋಡಿ' ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಫೇಸ್‍ಬುಕ್‍ ನ್ನು ಟ್ಯಾಗ್ ಮಾಡಿ ವಿದ್ಯಾಗಮ ಸ್ಥಗಿತ ಘೋಷಣೆ ಬಗ್ಗೆ ಶರಣು ಎಂಬವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

`ಮಹತ್ವಾಕಾಂಕ್ಷೆ ಹೊಂದಿರುವ ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮಕ್ಕೆ ತಾತ್ಕಾಲಿಕ ತಡೆ ಮನಸ್ಸಿಗೆ ತುಂಬಾ ಬೇಸರ ಮೂಡಿಸಿತು. ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳ ಕಲಿಕೆಗೆ ನೀರುಬಿಟ್ಟು ಕೆಲ ಮಾಧ್ಯಮಗಳ ವಿಕೃತ ಸಂತೋಷ ಅನುಭವಿಸುತ್ತಿವೆ. ಒಳ್ಳೆಯ ಯೋಜನೆಯನ್ನು ನಿಲ್ಲಿಸಬಾರದು ಎಂದು ರಾಘವೇಂದ್ರ ಹಂಚಿನಮನಿ ಎಂಬವರು ಫೇಸ್‍ಬುಕ್‍ನಲ್ಲಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ವಿದ್ಯಾಗಮ ಉತ್ತಮವಾದ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸೇರಿ ವಿದ್ಯಾಗಮ ಕಾರ್ಯಕ್ರಮಕ್ಕೆ ಅಡ್ಡಿಪಡಿಸುತ್ತಿವೆ ಎಂದು ನಂಜುಂಡಪ್ಪ ಕೆ.ಸಿ. ಎಂಬವರು ತಿಳಿಸಿದ್ದಾರೆ.

''ವಿದ್ಯಾಗಮದಿಂದ ಸರಕಾರಿ ಶಾಲೆಯ ಮಕ್ಕಳಿಗೆ ಕೊರೋನ ಕಾಲದಲ್ಲಿಯೂ ಗುಣ ಮಟ್ಟದ ಶಿಕ್ಷಣ ದೊರಕುವಲ್ಲಿ ಸರಕಾರದ ಪ್ರಯತ್ನ ಸಫಲವಾಗಿದೆ. ಜೊತೆಗೆ ಸರಕಾರಿ ಶಾಲೆಗೆ ಮಕ್ಕಳ ದಾಖಲಾತಿ ಕೂಡ ಹೆಚ್ಚಳವಾಗಿದ್ದು ಅಂಕಿ ಅಂಶಗಳಿಂದ ತಿಳಿದು ಬರುತ್ತಿದೆ. ಹಲವು ಪೋಷಕರು ಮಕ್ಕಳನ್ನು ಖಾಸಗಿ ಶಾಲೆಯಿಂದ ಬಿಡಿಸಿ ಸರಕಾರಿ ಶಾಲೆಗೆ ಸೇರ್ಪಡೆ ಮಾಡುತ್ತಿರುವುದು ಸಾಮಾನ್ಯ ಸಂಗತಿ. ಆದರೆ ವಿದ್ಯಾಗಮದಿಂದ ಶಿಕ್ಷಕರಿಗೆ, ಮಕ್ಕಳಿಗೆ ತೊಂದರೆಯಾಗಿದೆ ಎಂದು ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಚರ್ಚೆ ನಡೆಸುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ. ಸಣ್ಣ ಪುಟ್ಟ ತಪ್ಪುಗಳು- ಲೋಪಗಳು ಬಂದರೆ ಕಾರ್ಯಕ್ರಮವನ್ನೇ ನಿಲ್ಲಿಸುವುದು ಮಿಲಿಯಾಂತರ ಬಡ ಮಕ್ಕಳ ಶಿಕ್ಷಣಕ್ಕೆ ಮಾರಕವಾಗುತ್ತದೆ. ಸರಕಾರಿ ಶಾಲೆಗಳನ್ನು ತೆರೆಯುವುದಿಲ್ಲ ವಿದ್ಯಾಗಮ ನಡೆಸಲು ಅನುಮತಿಸುವುದಿಲ್ಲ ಎಂದಾದರೆ ಮಾಲ್, ಸಿನಿಮಾ, ಹೋಟೆಲ್, ಜಿಮ್ ,ಬಾರ್ ಮತ್ತು ರೆಸ್ಟೋರೆಂಟ್, ಸರ್ಕಾರಿ ಕಚೇರಿ, ಸಾಮಾಜಿಕ ಸಮಾರಂಭಗಳು, ಚುನಾವಣೆ ಎಲ್ಲವನ್ನೂ ನಿಲ್ಲಿಸಿ ಲಾಕ್ ಡೌನ್ ಮಾಡುವುದು ಸೂಕ್ತವಲ್ಲವೇ? 

ಈ ಸಂಕಷ್ಟದ ಸಮಯದಲ್ಲಿ ಸರಕಾರವು ಬಡವರ, ಕೃಷಿ ಕಾರ್ಮಿಕರ, ವಲಸಿಗರ ಮತ್ತು ದುರ್ಬಲ ವರ್ಗದ ಪರವಾಗಿ ನಿಲ್ಲಬೇಕು. ಗ್ರಾಮಾಂತರ ಪ್ರದೇಶದ ಬಡ ಮತ್ತು ಅವಕಾಶ ವಂಚಿತ ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸರ್ಕಾರ ಯೋಚಿಸಬೇಕು. ಬಡಜನರ ಬದುಕಿಗೆ ಬೆಂಬಲವಾಗಿರುವ ಮತ್ತು ಮಕ್ಕಳ ಕಲಿಕೆ ಹಾಗು ಬದುಕಿಗೆ ಮೂಲಾಧಾರವಾಗಿರುವ ಸರ್ಕಾರಿ ಶಾಲೆಗಳು ಹಂತ ಹಂತವಾಗಿ ಪ್ರಾರಂಭವಾಗಬೇಕು. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರು ಬಡಜನರ ಪರನಿಂತು ಸರ್ಕಾರಿ ಶಾಲೆಗಳನ್ನು ಪ್ರಾರಂಭಿಸುವ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ ಆಗ್ರಹಿಸಿದ್ದಾರೆ.

'ಗ್ರಾಮೀಣ ಪ್ರದೇಶದ ಮಕ್ಕಳು ಹೊಲ-ಗದ್ದೆಗಳಲ್ಲಿ ಬಾಲಕಾರ್ಮಿಕರಾಗುವುದನ್ನು ತಪ್ಪಿಸಲು ವಿದ್ಯಾಗಮ ಉತ್ತಮ ಕಾರ್ಯಕ್ರಮ. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳೇ ಶಾಲೆ ಆರಂಭಿಸಿ ಎಂದು ಆಗ್ರಹಿಸುತ್ತಿದ್ದಾರೆ. ಕಾರಣ ಕೆಲಸದಿಂದ ತಪ್ಪಿಸಿಕೊಳ್ಳಲು. ಹೀಗಾಗಿ ಸರಕಾರ ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ವಿದ್ಯಾಗಮ ಪುನರ್ ಆರಂಭಿಸಬೇಕು. ಶಾಲಾ ಆವರಣದಲ್ಲೆ ಅಂತರ ಕಾಯ್ದುಕೊಂಡು ಪಾಠ ಹೇಳಿಕೊಡಲು ಅವಕಾಶ ನೀಡಬೇಕು. ಇದರಿಂದ ಲಕ್ಷಾಂತರ ಬಡ, ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲು ಅನುಕೂಲವಾಗಲಿದೆ'

-ಲಕ್ಷ್ಮೀಕಾಂತ ಮಿರಜಕರ, ಕನ್ನಡ ಶಿಕ್ಷಕರು

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಮೊಳಕಾಲ್ಮೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News