ಲಡಾಖ್‌ನಲ್ಲಿ ಗಡಿ ಬಿಕ್ಕಟ್ಟು ಚೀನಾದ ಕುತಂತ್ರದ ಭಾಗವಾಗಿದೆ: ರಾಜನಾಥ್ ಸಿಂಗ್

Update: 2020-10-12 14:45 GMT

ಹೊಸದಿಲ್ಲಿ,ಅ.12: ಪಾಕಿಸ್ತಾನದ ಬಳಿಕ ಈಗ ಚೀನಾ ಕೂಡ ಭಾರತದೊಂದಿಗಿನ ಗಡಿಯಲ್ಲಿ ಬಿಕ್ಕಟ್ಟು ಸೃಷ್ಟಿಸುತ್ತಿದ್ದು,ಇದು ಕುತಂತ್ರದ ಭಾಗದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಇಲ್ಲಿ ಹೇಳಿದರು.

 ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ನಿರ್ಮಿಸಿರುವ 44 ಸೇತುವೆಗಳನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದ ಬಳಿಕ ಮಾತನಾಡಿದ ಸಿಂಗ್, ಭಾರತವು ಮುಂಚೂಣಿ ಪ್ರದೇಶಗಳಲ್ಲಿಯ ಸ್ಥಿತಿಗಳನ್ನು ದೃಢ ಸಂಕಲ್ಪದಿಂದ ಎದುರಿಸುತ್ತಿರುವುದು ಮಾತ್ರವಲ್ಲ,ಗಡಿ ಪ್ರದೇಶಗಳು ಸೇರಿದಂತೆ ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನೂ ನಡೆಸುತ್ತಿದೆ ಎಂದರು.

ದೇಶದ ಉತ್ತರ ಮತ್ತು ಪೂರ್ವದ ಗಡಿಗಳಲ್ಲಿ ಸೃಷ್ಟಿಸಲಾಗಿರುವ ಸ್ಥಿತಿಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಮೊದಲು ಪಾಕಿಸ್ತಾನ ಮತ್ತು ಈಗ ಚೀನಾ ಬಿಕ್ಕಟ್ಟನ್ನು ಸೃಷ್ಟಿಸುತ್ತಿದ್ದು,ಇದು ಪೂರ್ವಯೋಜಿತ ಕುತಂತ್ರದ ಭಾಗವಾಗಿರುವಂತಿದೆ. ಭಾರತವು ಈ ದೇಶಗಳೊಂದಿಗೆ ಸುಮಾರು 7,000 ಕಿ.ಮೀ.ಉದ್ದದ ಗಡಿಯನ್ನು ಹೊಂದಿದ್ದು,ಅಲ್ಲಿ ಉದ್ವಿಗ್ನತೆ ಮುಂದುವರಿದಿದೆ.

ಬಿಆರ್‌ಒ ವ್ಯೂಹಾತ್ಮಕ ಮಹತ್ವದ ಪ್ರದೇಶಗಳಾಗಿರುವ ಲಡಾಖ್,ಅರುಣಾಚಲ ಪ್ರದೇಶ,ಸಿಕ್ಕಿಂ,ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರಗಳಲ್ಲಿ ಈ ಸೇತುವೆಗಳನ್ನು ನಿರ್ಮಿಸಿದೆ. ಈ ಪೈಕಿ ಹೆಚ್ಚಿನ ಸೇತುವೆಗಳು ಅರುಣಾಚಲ ಪ್ರದೇಶ,ಸಿಕ್ಕಿಂ ಮತ್ತು ಲಡಾಖ್‌ಗಳಲ್ಲಿ ಚೀನಾ ಗಡಿಯುದ್ದಕ್ಕೂ ಯೋಧರ ಚಲನವಲನಗಳಿಗೆ ಹೆಚ್ಚಿನ ಅನುಕೂಲಗಳನ್ನು ಒದಗಿಸಲಿವೆ ಎಂದು ಅಧಿಕಾರಿಗಳು ತಿಳಿಸಿದರು.

 ಕೋವಿಡ್-19ರ ಸಂಕಷ್ಟ ಸಮಯದಲ್ಲಿ ಹಾಗೂ ಪಾಕಿಸ್ತಾನ ಮತ್ತು ಚೀನಾ ಉಂಟು ಮಾಡಿರುವ ಉದ್ವಿಗ್ನತೆ ಹಾಗೂ ವಿವಾದಗಳಿದ್ದರೂ ದೇಶವು ಅವುಗಳನ್ನು ದೃಢಸಂಕಲ್ಪದೊಂದಿಗೆ ಎದುರಿಸುವ ಜೊತೆಗೆ ಅಭಿವೃದ್ಧಿಯ ಎಲ್ಲ ಕ್ಷೇತ್ರಗಳಲ್ಲಿ ಐತಿಹಾಸಿಕ ಬದಲಾವಣೆಗಳನ್ನು ತರುತ್ತಿದೆ ಎಂದು ಸಿಂಗ್ ಹೇಳಿದರು. ಅರುಣಾಚಲ ಪ್ರದೇಶದಲ್ಲಿ ನಿರ್ಮಿಸಲಾಗಿರುವ 459 ಮೀ.ಉದ್ದದ ನೆಚಿಪು ಸುರಂಗಕ್ಕೆ ಶಿಲಾನ್ಯಾಸವನ್ನೂ ಅವರು ನೆರವೇರಿಸಿದರು.

 ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಸುಧಾರಣೆಯಲ್ಲಿ ಸಾಧನೆಗಳಿಗಾಗಿ ಬಿಆರ್‌ಒ ಅನ್ನು ಅಭಿನಂದಿಸಿದ ಅವರು,44 ಸೇತುವೆಗಳು ಏಕಕಾಲದಲ್ಲಿ ಉದ್ಘಾಟನೆಗೊಂಡಿರುವುದು ಒಂದು ದಾಖಲೆಯಾಗಿದೆ. 2008 ಮತ್ತು 2016ರ ನಡುವೆ ಬಿಆರ್‌ಒ 3,300 ಕೋ.ರೂ.ಗಳಿಂದ 4,600 ಕೋ.ರೂ.ವರೆಗೆ ವಾರ್ಷಿಕ ಬಜೆಟ್ ಹೊಂದಿರುತ್ತಿತ್ತು. ಈಗ ಬಜೆಟ್‌ನಲ್ಲಿ ಗಮನಾರ್ಹ ಏರಿಕೆಯಾಗಿದ್ದು,2020-21ನೇ ಸಾಲಿಗೆ 11,000 ಕೋ.ರೂ.ಗಳನ್ನು ಅಂದಾಜಿಸಲಾಗಿದೆ. ಕೋವಿಡ್ ಬಿಕ್ಕಟ್ಟಿದ್ದರೂ ಬಿಆರ್‌ಒ ಬಜೆಟ್‌ನಲ್ಲಿ ಕಡಿತವನ್ನು ಮಾಡಲಾಗಿಲ್ಲ ಎಂದರು.

ಸೇತುವೆಗಳ ನಿರ್ಮಾಣದಿಂದ ಈ ಪ್ರದೇಶಗಳಲ್ಲಿ ಸೇನೆಗೆ ಮಾತ್ರವಲ್ಲ,ನಾಗರಿಕರಿಗೂ ಅನುಕೂಲವಾಗಲಿದೆ ಎಂದರು.

 ಚೀನಾದೊಂದಿಗೆ ಗಡಿ ಬಿಕ್ಕಟ್ಟಿನ ನಡುವೆಯೇ ಭಾರತವು ಹಲವಾರು ಪ್ರಮುಖ ಯೋಜನೆಗಳ ಕಾಮಗಾರಿಗಳನ್ನು ತ್ವರಿತವಾಗಿ ನಡೆಸುತ್ತಿದೆ. ಎತ್ತರದ ಪ್ರದೇಶಗಳಲ್ಲಿಯ ಹಿಮಾಚ್ಛಾದಿತ ಕಣಿವೆಗಳನ್ನು ಹಾದುಹೋಗುವ ಹಿಮಾಚಲ ಪ್ರದೇಶದ ದರ್ಚಾ ಮತ್ತು ಲಡಾಖ್‌ನ್ನು ಸಂಪರ್ಕಿಸುವ ವ್ಯೂಹಾತ್ಮಕ ರಸ್ತೆಯೂ ಇವುಗಳಲ್ಲಿ ಸೇರಿದೆ. ಸುಮಾರು 290 ಕಿ.ಮೀ.ಉದ್ದದ ಈ ರಸ್ತೆಯು ಲಡಾಖ್ ಪ್ರದೇಶದಲ್ಲಿನ ಮುಂಚೂಣಿ ನೆಲೆಗಳಿಗೆ ಯೋಧರು ಮತ್ತು ಭಾರೀ ಶಸ್ತ್ರಾಸ್ತ್ರಗಳ ರವಾನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ ಮತ್ತು ಕಾರ್ಗಿಲ್ ಪ್ರದೇಶಕ್ಕೆ ಸಂಪರ್ಕವನ್ನು ಕಲ್ಪಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News