ಕೋವಿಡ್ ಸೋಂಕಿತರಿಗೆ ಹಾಸಿಗೆಗಳನ್ನು ಹಂಚಲು ಏಕಗವಾಕ್ಷಿ ಪದ್ಧತಿ: ಸಚಿವ ಡಾ.ಕೆ.ಸುಧಾಕರ್

Update: 2020-10-12 18:42 GMT

ಮೈಸೂರು,ಅ.12: ಕೋವಿಡ್ ಸೋಂಕಿತರಿಗೆ ಹಾಸಿಗೆಗಳನ್ನು ಹಂಚಿಕೆ ಮಾಡಲು ಏಕಗವಾಕ್ಷಿ ಪದ್ಧತಿ ಜಾರಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಮತ್ತು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಪ್ರತ್ಯೇಕ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಮೈಸೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದೆ. ಅದನ್ನು ನಿಯಂತ್ರಗೊಳಿಸಲು ಯಾವ ಯಾವ ಮಾರ್ಗಗಳನ್ನು ಅನುಸರಿಸಬೇಕು ಎಂದು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಕೋವಿಡ್ ಸೋಂಕಿತರಿಗೆ ಸೂಕ್ತ ಸಮಯದಲ್ಲಿ ಹಾಸಿಗೆಗಳನ್ನು ವ್ಯವಸ್ಥೆ ಮಾಡುವ ದೃಷ್ಟಿಯಿಂದ ಏಕಗವಾಕ್ಷಿ  ಪದ್ಧತಿ ಜಾರಿಗೆ ತರಲಾಗುವುದು. ನೋಡಲ್ ಅಧಿಕಾರಿಗಳ ಮೂಲಕ ಇದನ್ನು ನಿಯಂತ್ರಣ ಮಾಡಲಾಗುವುದು ಎಂದು ಹೇಳಿದರು.

ಕಡ್ಡಾಯವಾಗಿ ರ್ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಿಸಿಕೊಳ್ಳಲು ಸಾರ್ವಜನಿಕರಿಗೆ ಸೂಚಿಸುತ್ತಿದ್ದೀರಿ, ಆದರೆ ಜನ ಭಯ ಬೀಳುತಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಹೌದು ರ್ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಿಸಿಕೊಳ್ಳಲು ಜಯ ಭಯ ಭೀಳುತ್ತಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಹೆಚ್ಚು ಆರ್ಟಿಪಿಸಿಆರ್ ಟೆಸ್ಟ್ ಮಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಕೋವಿಡ್ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಬೆಡ್ ಗಳ ಸಂಖ್ಯೆ ಹೆಚ್ಚು ಮಾಡಲಾಗುತ್ತೆ. ಖಾಸಗಿ ಆಸ್ಪತ್ರೆ ಮುಖ್ಯಸ್ಥರಿಗೂ ಸೂಚನೆ ನೀಡಲಾಗಿದೆ. ಒಟ್ಟು 3000 ಹಾಸಿಗೆಗಳು ಕೋವಿಡ್ ಗೆ ಮೀಸಲಿಡಲಾಗುವುದು. ಈಗ ಒಂದು ವಾರದಲ್ಲಿ 1718 ಹೆಚ್ವುವರಿ ಬೆಡ್ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ದಿನ 3 ಸಾವಿರ ಟೆಸ್ಟ್ ಗಳನ್ನು ಮಾಡಲು ಸೂಚಿಸಲಾಗಿದೆ. ಮೈಸೂರು ವಿವಿಯಲ್ಲೂ ಐಸಿಎಂ ಆರ್ ನಿಂದ ಪರವಾನಗೆ ಸಿಕ್ಕ ತಕ್ಷಣ ಲ್ಯಾಬ್ ತೆರೆಯಲಾಗುತ್ತೆ ಎಂದು ಹೇಳಿದರು.

ಕೊರೋನ ನಿಯಂತ್ರಣ ಮಾಡಲು ಕಾನೂನು ಅಸ್ತ್ರ ಬಳಸಿದರೆ ಆಗುವುದಿಲ್ಲ, ಇದಕ್ಕೆ ಜನರ ಸಹಾರವೂ ಅಗತ್ಯ. ಜನ ಅರ್ಥಮಾಡಿಕೊಂಡು ಮಾಸ್ಕ್ ಗಳನ್ನು ಕಡ್ಡಾಯವಾಗಿ ಬಳಸಬೇಕು, ಕೊರೋನಾ ತಡೆಗಟ್ಟಲು ಇರುವ ಸದ್ಯದ ಮಾರ್ಗ ಎಂದರೆ ಮಾಸ್ಕ್, ಹಾಗಾಗಿ ಎಲ್ಲರೂ ಮಾಸ್ಕ್ ಗಳನ್ನು ಬಳಸಿ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಡಾ.ಜಾವೇದ್ ಆಕ್ತರ್, ರಾಜ್ಯ ಕೋವಿಡ್ ವಾರ್ ರೂಮ್ ಉಸ್ತುವಾರಿ ಮನೀಶ್ ಮೌದ್ಗಿಲ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪಂಚಾಯತ್ ಸಿಇಒ ಡಿ.ಭಾರತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News