ಭದ್ರಾ ಹುಲಿ ಯೋಜನೆ ಬಫರ್ ಝೋನ್ ಜಾರಿ ವಿರೋಧಿ ಎನ್.ಆರ್.ಪುರ ತಾಲೂಕು ಬಂದ್

Update: 2020-10-15 18:30 GMT

ಚಿಕ್ಕಮಗಳೂರು, ಅ.15: ಜಿಲ್ಲೆಯ ಮಲೆನಾಡು ಭಾಗದ ನರಸಿಂಹರಾಜಪುರ ತಾಲೂಕು ವ್ಯಾಪ್ತಿಯಲ್ಲಿ ಭದ್ರಾ ಹುಲಿ ಯೋಜನೆಯ ಬಫರ್ ಸೇರಿದಂತೆ, ಪರಿಸರ ಸೂಕ್ಷ್ಮ ವಲಯ ಜಾರಿ ವಿರೋಧಿಸಿ ಮಲೆನಾಡು ಹಿತರಕ್ಷಣಾ ಸಮಿತಿ, ರೈತ ಸಂಘ ಗುರುವಾರ ಕರೆ ನೀಡಿದ್ದ ಎನ್.ಆರ್.ಪುರ ಬಂದ್‍ಗೆ ತಾಲೂಕಿನ ಜನತೆ ಭಾರೀ ಬೆಂಬಲ ವ್ಯಕ್ತಪಡಿಸಿದ್ದು, ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಮಲೆನಾಡು ಹಿತರಕ್ಷಣಾ ಸಮಿತಿ ಕರೆ ನೀಡಿದ್ದ ನರಸಿಂಹರಾಜಪುರ ತಾಲೂಕು ಬಂದ್‍ಗೆ ತಾಲೂಕು ರೈತ ಸಂಘ ಸೇರಿದಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಸಿಪಿಐ, ಬಿಎಸ್ಪಿ ಮತ್ತು ತಾಲೂಕಿನ ಬಹುತೇಕ ಎಲ್ಲ ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದ್ದು, ನರಸಿಂಹರಾಜಪುರ ಹಾಗೂ ಬಾಳೆಹೊನ್ನೂರು ಪಟ್ಟಣದಲ್ಲಿ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರಿಂದ ಎರಡೂ ಪಟ್ಟಣಗಳಲ್ಲಿ ಗುರುವಾರ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ವ್ಯಾಪಾರ ವಹಿವಾಟು ಸೇರಿದಂತೆ ಎಲ್ಲ ಚಟುವಟಿಕೆಗಳು ಸ್ತಬ್ಧಗೊಂಡಿದ್ದವು.

ಈ ಪಟ್ಟಣಗಳ ವ್ಯಾಪ್ತಿಯಲ್ಲಿ ಖಾಸಗಿ ಬಸ್ ಸಂಚಾರ ಸೇರಿದಂತೆ ಆಟೊಗಳ ಓಡಾಟ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಆಸ್ಪತ್ರೆಗಳು, ಮೆಡಿಕಲ್ ಶಾಪ್‍ಗಳು, ಪೆಟ್ರೋಲ್ ಬಂಕ್‍ಗಳು, ಸರಕಾರಿ ಕಚೇರಿಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸಿದ್ದು, ಉಳಿದಂತೆ ಎಲ್ಲ ರೀತಿಯ ಚಟುವಟಿಕೆಗಳು ಸ್ತಬ್ದಗೊಂಡಿದ್ದವು. ಬಂದ್‍ಗೆ ಸಾರ್ವಜನಿಕರು, ರೈತರು ಬೆಂಬಲ ನೀಡಿದ್ದರಿಂದ ಬಾಳೆಹೊನ್ನೂರು, ನರಸಿಂಹರಾಜಪುರ ಪಟ್ಟಣಗಳ ರಸ್ತೆಗಳಲ್ಲಿ ಜನ ಸಂಚಾರ ಇಲ್ಲದೇ ಬೆಳಗ್ಗೆಯಿಂದ ಸಂಜೆವರೆಗೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬಂದ್ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ಪಟ್ಟಣದಲ್ಲಿ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನಡೆಸಿ ಬಫರ್ ಯೋಜನೆ ಹಾಗೂ ಪರಿಸರ ಸೂಕ್ಷ್ಮ ವಲಯ ಯೋಜನೆ ಜಾರಿಗೆ ಆಕ್ರೋಶ ವ್ಯಕ್ತಪಡಿಸಿದ ರಾಜ್ಯ ಹಾಗೂ ಕೇಂದ್ರ ಸರಕಾರ ಮತ್ತು ಅರಣ್ಯ ಇಲಾಖೆ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ನರಸಿಂಹರಾಜಪುರ ಪಟ್ಟಣದಲ್ಲಿ ಗುರುವಾರ ಬೆಳಗ್ಗೆ ಮಲೆನಾಡು ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ತಾಲೂಕು ರೈತ ಸಂಘ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದ ಬಸ್ ನಿಲ್ದಾಣದಿಂದ ತಾಲೂಕು ಕಚೇರಿವರೆಗೆ ಬೃಹತ್ ಪಾದಯಾತ್ರೆ ನಡೆಸಿ ಜನವಿರೋಧಿ ಯೋಜನೆಗಳ ಜಾರಿಗೆ ಸರಕಾರಗಳು ಮುಂದಾಗುವ ಮೂಲಕ ಜನರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿವೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು. 

ಬಳಿಕ ನರಸಿಂಹರಾಜಪುರ ಪಟ್ಟಣದ ತಾಲೂಕು ಕಚೇರಿ ಎದುರು ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳು, ಪಕ್ಷಗಳ ಸುಮಾರು ಮೂರು ಸಾವಿರ ಕಾರ್ಯಕರ್ತರು ಹಾಗೂ ತಾಲೂಕಿನ ವಿವಿಧ ಹಳ್ಳಿಗಳಿಂದ ಗುಂಪುಗುಂಪಾಗಿ ಕಾಲ್ನಡಿಗೆಯಲ್ಲೇ ಆಗಮಿಸಿದ್ದ ಗ್ರಾಮಸ್ಥರು ಸಮಾವೇಶಗೊಂಡು ಯೋಜನೆ ಜಾರಿಯನ್ನು ಕೈಬಿಡಬೇಕೆಂದು ಸರಕಾರವನ್ನು ಆಗ್ರಹಿಸಿದರು.

ಈ ವೇಳೆ ಮಾತನಾಡಿ ಮುಖಂಡರು, ಜಿಲ್ಲೆಯ ಮಲೆನಾಡು ಭಾಗದಲ್ಲಿನ ಜನರು ಹಲವು ಸಮಸ್ಯೆಗಳ ನಡುವೆಯೇ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ ಸರಕಾರಗಳು ವಿವಿಧ ಅರಣ್ಯ ಯೋಜನೆಗಳ ಹೆಸರಿನಲ್ಲಿ ನೂರಾರು ಯೋಜನೆಗಳನ್ನು ಜಾರಿ ಮಾಡುತ್ತಾ ಮಲೆನಾಡು ಜನರ ನೆಮ್ಮದಿ ಬದುಕನ್ನು ನಾಶ ಮಾಡುತ್ತಿವೆ. ಕಸ್ತೂರಿ ರಂಗನ್ ವರದಿ, ಕುದುರೆಮುಖ ರಾಷ್ಟ್ರೀಯ ಯೋಜನೆ, ಭದ್ರಾ ಹುಲಿ ಯೋಜನೆ ಸೇರಿದಂತೆ ವಿವಿಧ ಅರಣ್ಯ ಯೋಜನೆಗಳಿಂದಾಗಿ ಮಲೆನಾಡಿ ಜನರ ಬದುಕು ಬೀದಿಗೆ ಬಿದ್ದಿದೆ. ಇವುಗಳ ನಡುವೆ ಇತ್ತೀಚೆಗೆ ಸರಕಾರ ನ್ಯಾಯಾಲಯದ ಆದೇಶವನ್ನು ಮುಂದಿಟ್ಟುಕೊಂಡು ನಕಲಿ ಪರಿಸರವಾದಿಗಳ ಅಣತಿಯಂತೆ ಆಡಳಿತ ಮಾಡುತ್ತಿವೆ. ಈಗಾಗಾಲೇ ಜಾರಿಯಲ್ಲಿದ್ದ ಭದ್ರಾ ಹುಲಿ ಯೋಜನೆ ವ್ಯಾಪ್ತಿಗೆ 10ಕಿಮೀ ವ್ಯಾಪ್ತಿಯ ಬಫರ್ ಝೋನ್ ಹಾಗೂ ಪರಿಸರ ಸೂಕ್ಮವಲಯ ಯೋಜನೆಗಳನ್ನು ಜಾರಿ ಮಾಡಲು ಮುಂದಾಗಿದ್ದು, ಈ ಯೋಜನೆಗಳ ಜಾರಿಯಿಂದಾಗಿ ನರಸಿಂಹರಾಜಪುರ ಪಟ್ಟಣವೇ ಯೋಜನೆ ವ್ಯಾಪ್ತಿಗೆ ಸೇರಲಿದ್ದು, ಸಾವಿರಾರು ಗ್ರಾಮಗಳ ಜನರು ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಗ್ರಾಮಗಳನ್ನು ತೊರೆಯುವಂತಾಗುತ್ತದೆ ಎಂದರು.

ಭದ್ರಾ ಹುಲಿ ಯೋಜನೆಯ ಬಫರ್ ಝೋನ್ ಹಾಗೂ ಪರಿಸರ ಸೂಕ್ಷ್ಮ ವಲಯಗಳ ವ್ಯಾಪ್ತಿಗೆ 8750 ಕುಟುಂಬಗಳು, 75ಕ್ಕೂ ಹೆಚ್ಚು ದೇವಾಲಯಗಳು, 3 ಚರ್ಚ್‍ಗಳು, 4 ಮಸೀದಿಗಳು ಸೇರಿಕೊಂಡಿದ್ದು, ನರಸಿಂಹರಾಜಪುರ, ಕೊಪ್ಪ, ಚಿಕ್ಕಮಗಳೂರು ತಾಲೂಕಿನ 51 ಗ್ರಾಮಗಳು ಈ ಯೋಜನೆ ವ್ಯಾಪ್ತಿಗೆ ಸೇರಿಸಲಾಗಿದೆ. ಯೋಜನೆ ಜಾರಿಯಾದಲ್ಲಿ ಈ ಗ್ರಾಮಗಳೂ ಸೇರಿದಂತೆ, ನರಸಿಂಹರಾಜಪುರ ಪಟ್ಟಣದ ಜನರು ಒಕ್ಕಲೇಳುವುದು ನಿಶ್ಚಿತವಾಗಿದೆ. ಅಲ್ಲದೇ ಮನುಷ್ಯ ಹಾಗೂ ವನ್ಯ ಜೀವಿಗಳ ಸಂಘರ್ಷಕ್ಕೆ ಈ ಯೋಜನೆ ನಂದಿಯಾಗಲಿದೆ. ಸದ್ಯ ಜಾರಿ ಇರುವ ಯೋಜನೆಗಳಿಂದಾಗಿ ಕಾಡು ಪ್ರಾಣಿಗಳು ಸಂರಕ್ಷಣೆಯಾಗುತ್ತಿದ್ದು, ಕಾಡನ್ನೂ ಇಲ್ಲಿಯ ಜನರು ರಕ್ಷಣೆ ಮಾಡುತ್ತಿದ್ದಾರೆ. ಈ ಯೋಜನೆ ಜಾರಿ ತಡೆಯಲು ಯಾವುದೇ ಬೆಲೆ ತೆರಲೂ ಮಲೆನಾಡಿನ ಜನರು ಸಿದ್ಧರಿದ್ದು, ಸರಕಾರ ಈ ಯೋಜನೆ ಜಾರಿ ತಡೆಗೆ ಅಗತ್ಯ ಕ್ರಮವಹಿಸಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು. 

ಇದೇ ವೇಳೆ ಧರಣಿ ಸ್ಥಳಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ, ಪ್ರತಿಭಟನಾ ನಿರತರ ಮನವಿ ಆಲಿಸಿದರು. ಬಳಿಕ ಮಾತನಾಡಿದ ಅವರು, 10 ಕಿಮೀ. ಬಫರ್ ಝೋನ್ ಜಾರಿಗೆ ಮಲೆನಾಡಿನ ಜನರ ವಿರೋಧವಿದ್ದು, ಈ ಸಂಬಂಧ ಅ.21ರಂದು ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಸಿಎಂ ಹಾಗೂ ಅರಣ್ಯ ಸಚಿವರೊಂದಿಗೆ ಚರ್ಚಿಸಿ, ಯೋಜನೆ ಜಾರಿಯಿಂದಾಗುವ ಪರಿಣಾಮಗಳ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯಲು ಸೂಚಿಸುವುದಾಗಿ ಹೇಳಿದರು.

ಮಲೆನಾಡು ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ನಾಗೇಶ್, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಶಾಸಕ ಡಿ.ಎನ್.ರಾಜೇಗೌಡ, ಸರ್ವ ಪಕ್ಷಗಳ ಮುಖಂಡರು ಮತ್ತು ವಿವಿಧ ಸಂಘಸಂಸ್ಥೆಗಳು ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಈ ಸಂಬಂಧದ ಮನವಿಯನ್ನು ತಹಶೀಲ್ದಾರ್ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News